Modi-Trump Meet: 5ನೇ ಜನರೇಷನ್ ಜೆಟ್, ಮಿಷನ್ 500, ಮುಂಬೈ ದಾಳಿ ರೂವಾರಿಯ ಗಡಿಪಾರು; ಟ್ರಂಪ್-ಮೋದಿ ಒಪ್ಪಂದಗಳ ಲಿಸ್ಟ್ ಇಲ್ಲಿದೆ
ಎರಡನೇ ಬಾರಿ ಅಮೆರಿಕಾದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್ ಅವರನ್ನು ವೈಟ್ ಹೌಸ್ ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಉಭಯ ನಾಯಕರ ನಡುವೆ ಮಹತ್ವದ ಮಾತುಕತೆ ನಡೆದಿದ್ದು ಇದರ ವಿವರ ಇಲ್ಲಿದೆ...

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ಪ್ರಧಾನಿ ಮೋದಿ.

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಅಮೆರಿಕಾ (USA) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ವೈಟ್ ಹೌಸ್ ನಲ್ಲಿ ಭೇಟಿಯಾಗಿದ್ದಾರೆ. ಟ್ರಂಪ್ ಅವರು ಎರಡನೇ ಬಾರಿ ಅಧ್ಯಕ್ಷರಾಗಿ ಅಧಿಕಾರ ಸ್ವಿಕರಿಸಿದ ಬಳಿಕ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಅವರ ಮೊದಲ ಭೇಟಿ(Modi-Trump Meet) ಇದಾಗಿದೆ. ಈ ಭೇಟಿಯ ವೇಳೆ ರಕ್ಷಣೆ, ವ್ಯವಹಾರ, ತಂತ್ರಜ್ಞಾನ ಮತ್ತು ಎನರ್ಜಿಗೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಪ್ರಾನ್ಸ್ (France) ದೇಶಕ್ಕೆ ಭೇಟಿ ನೀಡಿ ಅಲ್ಲಿಂದ ನೇರವಾಗಿ ಪ್ರಧಾನಿ ಮೋದಿ ಅಮೆರಿಕಾಗೆ ಭೇಟಿ ನೀಡಿದ್ದಾರೆ. ಟ್ರಂಪ್ ಇತ್ತೀಚೆಗೆಷ್ಟೇ ತನ್ನ ವ್ಯವಹಾರ ಪಾಲುದಾರ ದೇಶಗಳ ಮೇಲೆ ನೂತನ ಟಾರಿಫ್ ನೀತಿಗಳನ್ನು ಹೇರುತ್ತಿದ್ದಾರೆ, ಇದರಲ್ಲಿ ಭಾರತವೂ ಸೇರಿದೆ. ಹಾಗಾಗಿ ಪ್ರಧಾನಿ ಮೋದಿ ಅವರ ಈ ಭೇಟಿ ವಿಶೇಷವಾದ ಮಹತ್ವವನ್ನು ಪಡೆದಿದೆ.
ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವಿನ ಈ ಭೇಟಿಯನ್ನು ಕಾಂಪಾಕ್ಟ್ (ಮಿಲಿಟರಿ ಭಾಗೀದಾರಿಕೆ ಅವಕಾಶಗಳನ್ನು ಉತ್ತೇಜಿಸುವುದು, 21ನೇ ಶತಮಾನಕ್ಕೆ ವ್ಯವಹಾರ ಹಾಗೂ ತಂತ್ರಜ್ಞಾನಕ್ಕೆ ವೇಗ ನೀಡುವುದು) ಎಂಬ ಹೆಸರನ್ನು ನೀಡಲಾಗಿದೆ. ಈ ಮೂಲಕ ಭಾರತ ಮತ್ತು ಅಮೆರಿಕಾ ನಡುವಿನ ದ್ವಿಪಕ್ಷೀಯ ಸಂಬಂಧಗಳಿಗೆ ಇನ್ನಷ್ಟು ಬಲ ತುಂಬುವ ಉದ್ದೇಶ ಇದರಲ್ಲಿದೆ.
ಮೋದಿ ಮತ್ತು ಟ್ರಂಪ್ ಮಾತುಕತೆಯ ಪ್ರಮುಖ ಘೋಷಣೆಗಳು ಹೀಗಿವೆ:
ರಕ್ಷಣೆ:
- ಅಮೆರಿಕಾ ಭಾರತ ನಡುವಿನ ಪ್ರಮುಖ ರಕ್ಷಣಾ ಭಾಗೀದಾರಿಕೆಗೆ ಈ ವರ್ಷದ ಕೊನೆಯಲ್ಲಿ ಹತ್ತು ವರ್ಷಗಳ ಕಾರ್ಯಸೂಚಿಗೆ ಸಹಿ ಹಾಕಲಾಗುವುದು.
- ತಂತ್ರಜ್ಞಾನಗಳ ವಿನಿಮಯ ಮತ್ತು ರಕ್ಷಣಾ ಬಿಡಿ ಭಾಗಗಳ ಪೂರೈಕೆ ನಿಯಮಗಳನ್ನು ಇನ್ನಷ್ಟು ಸಡಿಲಿಕೆಗಾಗಿ, ಶಸ್ತ್ರಾಸ್ತ್ರಗಳ ನಿಯಂತ್ರಣಗಳ ಅಂತರಾಷ್ಟ್ರೀಯ ಸಾಗಾಟ (ಐಟಿಎಆರ್) ವನ್ನು ಪುನರ್ ಪರಿಶೀಲಿಸುವುದು.
- ಬಾಹ್ಯಾಕಾಶ, ಏರ್ ಡಿಫೆನ್ಸ್, ಕ್ಷಿಪಣಿ ನೌಕೆಗಳು ಮತ್ತು ಸಾಗರದಾಳದ ಯುದ್ಧ ನೌಕೆಗಳು ತಂತ್ರಜ್ಞಾನ ವಿನಿಮಯ ಮತ್ತು ಅಭಿವೃದ್ಧಿ ವಿಚಾರಗಳಿಗೆ ಇನ್ನಷ್ಟು ವೇಗ ನೀಡುವುದು.
- ಸಾಗರದಾಳ ಕ್ಷೇತ್ರದ ಅರಿವಿನ ವಿಚಾರದಲ್ಲಿ ಕೈಗಾರಿಕಾ ಭಾಗೀದಾರಿಕೆ ತಂತ್ರಜ್ಞಾನ ಅಭಿವೃದ್ಧಿಗಾಗಿ ಭಾರತ ಮತ್ತು ಅಮೆರಿಕಾ ಕೈಗಾರಿಕಾ ಮೈತ್ರಿಗೆ ಸ್ವಾಯತ್ತ ವ್ಯವಸ್ಥೆ (ಎ.ಎಸ್.ಐ.ಎ)ಯನ್ನು ಪ್ರಾರಂಭಿಸುದಕ್ಕೆ ಒಪ್ಪಿಗೆ ನೀಡಲಾಗಿದೆ. ಯುಡಿಎ ತಂತ್ರಜ್ಞಾನಗಳನ್ನು ಜೊತೆಯಾಗಿ ಅಭಿವೃದ್ಧಿಪಡಿಸುವ ವಿಚಾರದಲ್ಲಿ ಅಮೆರಿಕಾದೊಂದಿಗೆ ಕೈಜೋಡಿಸಲಿರುವ ಏಕೈಕ ದೇಶ ಭಾರತವಾಗಲಿದೆ.
- ಸಾಗರ ಗಸ್ತು ಸ್ವಾಯತ್ತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಹಾಗೂ ಉತ್ಪಾದಿಸಲು ಎರಡೂ ದೇಶಗಳ ನಡುವೆ ಚರ್ಚೆ ಪ್ರಗತಿಯಲ್ಲಿದೆ.
ಇದನ್ನೂ ಓದಿ: Tahawwur Rana: 26/11 ಮುಂಬೈ ದಾಳಿ ರೂವಾರಿ ತಹವ್ವುರ್ ರಾಣಾ ಹಸ್ತಾಂತರಕ್ಕೆ ಟ್ರಂಪ್ ಅನುಮೋದನೆ
ವ್ಯಾಪಾರ:
- ವ್ಯಾಪಾರ ಕ್ಷೇತ್ರದಲ್ಲಿ ಎರಡೂ ದೇಶಗಳು ಹೊಸ ಗುರಿಯನ್ನು ನಿಗದಿಪಡಿಸಿಕೊಂಡಿದ್ದು, ಇದಕ್ಕೆ ಮಿಷನ್ 500 ಎಂದು ಹೆಸರಿಡಲಾಗಿದ್ದು, ದ್ವಿಪಕ್ಷೀಯ ವ್ಯವಹಾರವನ್ನು 2030ರ ವೇಳೆಗೆ 500 ಬಿಲಿಯನ್ ಡಾಲರ್ ಗೆ ಏರಿಸಲು ನಿರ್ಧರಿಸಲಾಗಿದೆ.
- ಹಲವಾರು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ವ್ಯವಹಾರ ಒಪ್ಪಂದಕ್ಕೆ ಬರಲಾಗಿದೆ. ಇದರಲ್ಲಿ ವಿವಾದಾತ್ಮಕ ಸುಂಕ ನೀತಿಯೂ ಇದರಲ್ಲಿ ಒಳಗೊಂಡಿದೆ.
- ಅಮೆರಿಕಾದಲ್ಲಿ 7.355 ಬಿಲಿಯನ್ ಡಾಲರ್ ಗಳ ಭಾರತದ ಹೂಡಿಕೆಯಿಂದ 3 ಸಾವಿರ ಉನ್ನತ ಮಟ್ಟದ ಕೆಲಸಗಳಿಗೂ ಇದು ಸಹಕಾರಿಯಾಗಲಿದೆ.
ತಂತ್ರಜ್ಞಾನ:
- ಭಾರತ ಮತ್ತು ಅಮೆರಿಕಾ ‘ಟ್ರಸ್ಟ್’ ಅನ್ನು ಘೋಷಣೆ ಮಾಡಿದ್ದು, ಇದರಡಿಯಲ್ಲಿ ಸರಕಾರಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಖಾಸಗಿ ವಲಯದಲ್ಲಿ ಸಂಕೀರ್ಣ ಮತ್ತು ಹೊಸ ತಂತ್ರಜ್ಞಾನಗಳ ಅಭಿವೃದ್ಧಿಗೆ ಎರಡೂ ರಾಷ್ಟ್ರಗಳು ಭಾಗೀದಾರಿಕೆ ವಹಿಸಿಕೊಳ್ಳಲಿವೆ.
- ಈ ವರ್ಷದ ಕೊನೆಯಲ್ಲಿ ಭಾರತ-ಅಮೆರಿಕಾ ನಡುವೆ ಎಐ ಮಾರ್ಗಸುಚಿಗಳನ್ನು ಅಂತಿಮಗೊಳಿಸಲು ನಿರ್ಧರಿಸಲಾಗಿದೆ. ಮುಂದಿನ ಜನಾಂಗದ ಮಾಹಿತಿ ಕೇಂದ್ರಗಳು ಮತ್ತು ಎಐ ಆಧಾರಿತ ಭಾಗೀದಾರಿಕೆಯನ್ನೂ ಸಹ ಇದೇ ಸಂದರ್ಭದಲ್ಲಿ ಘೋಷಿಸಲಾಗಿದೆ.
- ಬಾಹ್ಯಾಕಾಶ, ಎನರ್ಜಿ ಮತ್ತು ಬಯೋಟೆಕ್ನಾಲಜಿಯಲ್ಲಿ ಇಂಡಸ್ಟ್ರಿ-ಅಕಾಡಮಿಕ್ ಭಾಗೀದಾರಿಕೆಯನ್ನು ಅಭಿವೃದ್ಧಿಪಡಿಸಲು ಇಂಡಸ್ ಇನ್ನೋವೇಶನ್ ಎಂಬ ನೀತಿಯನ್ನು ಜಾರಿಗೊಳಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ.
- ಇದಷ್ಟೇ ಅಲ್ಲದೆ, ಇಂಧನ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಭಾರತ ಅಮೆರಿಕಾ ಪಾಲುದಾರಿಕೆಯಲ್ಲಿ ಹಲವಾರು ಯೊಜನೆ ಮತ್ತು ಪ್ರಾಜೆಕ್ಟ್ ಗಳನ್ನು ಹಂತಹಂತವಾಗಿ ಕಾರ್ಯಗತಗೊಳಿಸಲು ಈ ಉಭಯ ನಾಯಕರ ಭೇಟಿಯ ವೇಳೆ ಮಹತ್ವದ ಮಾತುಕತೆ ನಡೆದಿದೆ.
ವಲಸಿಗ ಭಾರತೀಯರ ಬಗ್ಗೆ ಮಹತ್ವದ ಒಪ್ಪಂದ:
- ಅಮೆರಿಕದಲ್ಲಿರುವ 300,000ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿ ಸಮುದಾಯವು ಆರ್ಥಿಕತೆಗೆ ವಾರ್ಷಿಕವಾಗಿ $8 ಶತಕೋಟಿಗೂ ಹೆಚ್ಚು ಕೊಡುಗೆ ನೀಡುತ್ತದೆ.
- ಅಕ್ರಮ ವಲಸೆ ಮತ್ತು ಮಾನವ ಕಳ್ಳಸಾಗಣೆಯನ್ನು ತಡೆಯಲು ಕಠಿಣ ಕ್ರಮ.
- ಸಂಘಟಿತ ಅಪರಾಧ, ಮಾದಕವಸ್ತು ಕಳ್ಳಸಾಗಣೆ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಕಾನೂನು ಜಾರಿ ಸಂಬಂಧಗಳನ್ನು ಬಲಪಡಿಸುವುದು.
ಬಹುಪಕ್ಷೀಯ ಸಹಕಾರ:
- ಭಯೋತ್ಪಾದನಾ ನಿಗ್ರಹದ ಕುರಿತು, ಭಯೋತ್ಪಾದಕ ಜಾಲಗಳ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ತಾನ ವಿಫಲವಾಗಿರುವುದನ್ನು ಎರಡೂ ದೇಶಗಳು ಖಂಡಿಸಿವೆ.
- 26/11 ಅಪರಾಧಿ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಲಾಗಿದೆ ಎಂದು ಅಧ್ಯಕ್ಷ ಟ್ರಂಪ್ ಘೋಷಿಸಿದರು.
- ಟೆಕ್ ದೈತ್ಯ ಮೆಟಾದ 50,000 ಕಿಮೀ ಸಮುದ್ರದೊಳಗಿನ ಕೇಬಲ್ ಯೋಜನೆಯ ಘೋಷಣೆ.