ಡಬ್ಲಿನ್: ಐರಿಶ್ ರಾಜಧಾನಿ ಡಬ್ಲಿನ್‌ನ ಉಪನಗರವೊಂದರಲ್ಲಿ (Physical Abuse) ಗುಂಪೊಂದು ಭಾರತೀಯ ವ್ಯಕ್ತಿಯ ಮೇಲೆ ಕ್ರೂರ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಸಂಪೂರ್ಣವಾಗಿ ರಕ್ತಸಿಕ್ತನಾಗಿದ್ದ ವ್ಯಕ್ತಿಯನ್ನು ಮಹಿಳೆಯೊಬ್ಬಳು ರಕ್ಷಿಸಿದ್ದಾಳೆ. ಮಹಿಳೆ ಘಟನೆಯ ವಿವರಗಳನ್ನು ಹಂಚಿಕೊಂಡಿದ್ದು, ಆತನನ್ನು ಇರಿದು, ಬೆತ್ತಲೆಗೊಳಿಸಿ, ರಕ್ತಸಿಕ್ತವಾಗಿ ಬೀದಿಯಲ್ಲಿ ಬಿಡಲಾಗಿತ್ತು ಎಂದು ಆಕೆ ಹೇಳಿದ್ದಾರೆ. ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಟಾಲಾಘ್ಟ್ ನಿವಾಸಿ ಜೆನ್ನಿಫರ್ ಮುರ್ರೆ ಅವರು ಶನಿವಾರ ಸಂಜೆ ಕಾರು ಚಲಾಯಿಸುತ್ತಿದ್ದಾಗ "ಸುಮಾರು 30 ಜನರ ಗುಂಪು ತನ್ನನ್ನು ಸುತ್ತುವರೆದಿತ್ತು" ಎಂದು ಹೇಳಿದರು. ತನ್ನ ಕಾರನ್ನು ನಿಲ್ಲಿಸಿದ ನಂತರ, ರಕ್ತಸಿಕ್ತ ವ್ಯಕ್ತಿಯೊಬ್ಬರು ರಕ್ತಸಿಕ್ತವಾಗಿ ಬಿದ್ದಿರುವುದನ್ನು ನೋಡಿದೆ, ಅವರು ತನಗೆ ಸಹಾಯ ಮಾಡುವಂತೆ ಬೇಡಿಕೊಂಡರು ಎಂದು ಅವರು ಹೇಳಿದ್ದಾರೆ.
ಶನಿವಾರ ಡಬ್ಲಿನ್‌ನ ಟಾಲಾಘ್ಟ್ ಪ್ರದೇಶದಲ್ಲಿ ಯುವಕರ ಗುಂಪೊಂದು 40 ರ ಹರೆಯದ ಭಾರತೀಯ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿತ್ತು . ಅಮೆಜಾನ್ ಉದ್ಯೋಗಿ ಎಂದು ಹೇಳಲಾಗುವ ಈ ವ್ಯಕ್ತಿ ಕೇವಲ ಮೂರು ವಾರಗಳ ಹಿಂದೆ ಐರ್ಲೆಂಡ್‌ಗೆ ತೆರಳಿದ್ದಾರೆ. ಆರೋಪಿಗಳು ವ್ಯಕ್ತಿಯ ಬಟ್ಟೆ ಬಿಚ್ಚಿ , ಅವನ ಬೂಟುಗಳು, ಒಳ ಉಡುಪುಗಳು, ಪ್ಯಾಂಟ್ ಮತ್ತು ಅವನ ಕೈಚೀಲ ಮತ್ತು ಫೋನ್ ಅನ್ನು ತೆಗೆದುಕೊಂಡು ಅವನನ್ನು ರಸ್ತೆಯಲ್ಲಿ ಬಿಟ್ಟು ಹೋದರು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.
ಅವರು ಇಡೀ ಸಮಯದಲ್ಲಿ ನನಗೆ ತುಂಬಾ ವಿನಯಶೀಲರಾಗಿದ್ದರು. ನಾನು ಅವರಿಗೆ ತನ್ನನ್ನು ಮುಚ್ಚಿಕೊಳ್ಳಲು ಕಂಬಳಿ ಕೊಟ್ಟೆ. ಅವರು ತುಂಬಾ ಮುಜುಗರಕ್ಕೊಳಗಾದರು ಮತ್ತು ಆಘಾತಕ್ಕೊಳಗಾದರು ಎಂದು ಮಹಿಳೆ ಹೇಳಿದ್ದಾಳೆ. ಇದನ್ನು ಆಕೆ ಜನಾಂಗೀಯ ಹಲ್ಲೆ ಎಂದು ಕರೆದಿದ್ದಾರೆ. ಐರ್ಲೆಂಡ್‌ನ ಭಾರತದ ರಾಯಭಾರಿ ಅಖಿಲೇಶ್ ಮಿಶ್ರಾ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಘಟನೆಯನ್ನು ಖಂಡಿಸಿದ್ದಾರೆ. ಈ ಘಟನೆ ಕುರಿತು ತನಿಖೆಗೆ ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ. ಭಾರತೀಯ ವ್ಯಕ್ತಿಗೆ ಸಹಾಯ ಮಾಡಿದ ಮಹಿಳೆಗೆ ಅವರು ಧನ್ಯವಾದ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Vijayapura News: ಅಂಗಡಿ ಮುಚ್ಚುವಂತೆ ಹಲ್ಲೆ ನಡೆಸಿದ ವಿಡಿಯೋ ಗಳು ವೈರಲ್: ಹಲ್ಲೆ, ಒತ್ತಾಯದ ಬಂದ್ ಗೆ ಜನಾಕ್ರೋಶ
ಬುಧವಾರ ಆಸ್ಟ್ರೇಲಿಯಾದಲ್ಲಿಯೂ ಇಂತುಹುದೇ ಘಟನೆಯೊಂದು ಸಂಭವಿಸಿದ್ದು, ಕಾರು ಪಾರ್ಕಿಂಗ್ ವಿವಾದಕ್ಕೆ ಸಂಬಂಧಿಸಿದಂತೆ 23 ವರ್ಷದ ಭಾರತೀಯ ಯುವಕ ಚರಣ್‌ಪ್ರೀತ್ ಸಿಂಗ್ ಅವರ ಮೇಲೆ ಪುರುಷರ ಗುಂಪೊಂದು ಜನಾಂಗೀಯ ನಿಂದನೆ ಮಾಡಿ ಹಲ್ಲೆ ನಡೆಸಿದೆ. ಘಟನೆಯಲ್ಲಿ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾನೆ ಎಂದು ಹೇಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಆಸ್ಟ್ರೇಲಿಯಾ ಪೊಲೀಸರು ಭಾನುವಾರ ಎನ್ಫೀಲ್ಡ್ ನ 20 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆದಾಗ್ಯೂ, ಉಳಿದ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದು, ಅವರ ಗುರುತು ಇನ್ನೂ ಪತ್ತೆಯಾಗಿಲ್ಲ. ಅವರನ್ನು ಪತ್ತೆಹಚ್ಚಲು ಪೊಲೀಸರು ಸಾರ್ವಜನಿಕರ ಸಹಾಯವನ್ನು ಕೋರಿದ್ದಾರೆ. ಈ ಹಲ್ಲೆ ಅಡಿಲೇಡ್‌ನ ಭಾರತೀಯ ಸಮುದಾಯದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.