Vijayapura News: ಅಂಗಡಿ ಮುಚ್ಚುವಂತೆ ಹಲ್ಲೆ ನಡೆಸಿದ ವಿಡಿಯೋ ಗಳು ವೈರಲ್: ಹಲ್ಲೆ, ಒತ್ತಾಯದ ಬಂದ್ ಗೆ ಜನಾಕ್ರೋಶ
Vijayapura News: ಅಂಗಡಿ ಮುಚ್ಚುವಂತೆ ಹಲ್ಲೆ ನಡೆಸಿದ ವಿಡಿಯೋ ಗಳು ವೈರಲ್: ಹಲ್ಲೆ, ಒತ್ತಾಯದ ಬಂದ್ ಗೆ ಜನಾಕ್ರೋಶ
Ashok Nayak
December 31, 2024
ವಿಜಯಪುರ : ವಿಜಯಪುರ್ ಬಂದ್ ಹಿನ್ನೆಲೆ ಡಿ. 30 ಸೋಮವಾರ ಬಂದ್ ಆಚರಣೆ ವೇಳೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಕೆಲ ವ್ಯಾಪಾರಸ್ಥರಿಗೆ ಒತ್ತಾಯಪೂರ್ವಕವಾಗಿ ಅಂಗಡಿ ಮುಚ್ಚುವಂತೆ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಅವಮಾನಕರವಾಗಿ ಮಾತನಾಡಿದ್ದಾರೆಂದು ಆರೋಪಿಸಿ ಕೂಡಲೇ ಅವರ ರಾಜಿನಾಮೆಗೆ ಒತ್ತಾಯಿಸಿ ಜಿಲ್ಲಾ ಅಹಿಂದ, ವಿವಿಧ ದಲಿತ, ಪ್ರಗತಿಪರ ಹಾಗೂ ಡಾ.ಅಂಬೇಡ್ಕರ್ ವಿಚಾರವಾದಿಗಳ ಬಳಗದಿಂದ ಸೋಮವಾರ ವಿಜಯಪುರ ಬಂದ್ ಆಚರಿಸಲಾಯಿತು.
ಮಾಜಿ ಜಿ.ಪಂ. ಅಧ್ಯಕ್ಷೆ ಪತಿಯಿಂದ ವ್ಯಾಪಾರಿ ಮೇಲೆ ಹಲ್ಲೆ: ವಿಜಯಪುರ ಬಂದ್ ವೇಳೆ ಮಾಜಿ ಜಿ.ಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಪತಿ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಹಾಗೂ ಕಾರ್ಯಕರ್ತ ಮಲ್ಲಿಕಾರ್ಜುನ ಬಟಗಿ ನಗರದ ಕಿರಾಣಿ ಅಂಗಡಿಗೆ ಕಲ್ಲು ಎಸೆದು ವ್ಯಾಪಾರಿ ಮೇಲೆ ಹಲ್ಲೆ ಮಾಡಿ ಒತ್ತಾಯಪೂರ್ವಕವಾಗಿ ಅಂಗಡಿ ಬಂದ್ ಮಾಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲ್ಲೆ ನೆಡೆಸಿದವರ ವಿರುದ್ಧ ನೆಟ್ಟಿಗರು ಕಮೆಂಟ್ಸ್ ಮೂಲಕ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ಮಹಿಳಾ ವ್ಯಾಪಾರಿಯ ಹೂ :
ಇನ್ನೊಂದು ವಿಡಿಯೋದಲ್ಲಿ ಸಂಘಟನೆಯೊಂದರ ಕೆಲ ಕಾರ್ಯಕರ್ತರು ನಗರದ ಶಾಸ್ತ್ರೀ ಮಾರುಕಟ್ಟೆ ಬಳಿಯ ಜೈನ ಮಂದಿರದ ಎದುರು ಮಹಿಳಾ ಹೂವಿನ ವ್ಯಾಪಾರಿಯ ಹೂವನ್ನು ಎಳೆದಾಡಿ ರಸ್ತೆಯಲ್ಲಿ ಚೆಲ್ಲಾಪಿಲ್ಲಾಯಾಗಿ ಹಾಳು ಮಾಡಿದ್ದಾರೆ. ಇದರಿಂದ ಕೋಪಗೊಂಡ ಮಹಿಳೆ, ಬಡವರ ಮೇಲೆ ಯಾಕೆ ನಿಮ್ಮ ಕೋಪ, ದುಡ್ಡು ಕೊಟ್ಟು ಹೂ ತಂದಿದ್ದೇನೆ. ದೇವರ ಪೂಜೆಯ ಹೂವನ್ನು ರಸ್ತೆ ಮೇಲೆ ಚೆಲ್ಲಿದ್ದೀರಿ, ಏನು ಸಿಗುತ್ತೆ ನಿಮಗೆ, ನಿಮ್ಮ ಮನೆಯ ಹೆಣ್ಣು ಇದ್ದರೆ ಹೀಗೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿ ಕಣ್ಣೀರು ಸುರಿಸಿದ್ದಾಳೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಮರುದಿನ ಮಂಗಳವಾರ ಹೂ ಚೆಲ್ಲಿದ ಸಂಘಟನೆ ಕಾರ್ಯಕರ್ತರು ಬಂದು ಮಹಿಳೆಗೆ ಆದ ನಷ್ಟಕ್ಕೆ ಹಣ ನೀಡಿ, ಕ್ಷಮೆ ಕೇಳಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಅಂಗಡಿಗೆ ನುಗ್ಗಿ ಕುರ್ಚಿ ಒಡೆದ ಕಾರ್ಯಕರ್ತರು
ನಗರದ ರಾಮಮಂದಿರ ಎದುರಿನ ಗೋ ಆಹಾರದ ಅಂಗಡಿಗೆ ಕಲ್ಲು ಹೊಡೆದು ಕಾರ್ಯಕರ್ತನೊಬ್ಬ ಒತ್ತಾಯ ದಿಂದ ಅಂಗಡಿ ಬಂದ್ ಮಾಡಿಸಿದ್ದಾನೆ. ಅಲ್ಲದೇ ಕೊಬ್ಬರಿ ಅಂಗಡಿಯಲ್ಲಿ ಕಾರ್ಯಕರ್ತನೋರ್ವ ಅಂಗಡಿಯಲ್ಲಿ ಕುರ್ಚಿ ಒಡೆದು ಹಾಕಿ ಒತ್ತಾಯದಿಂದ ಅಂಗಡಿ ಬಂದ್ ಮಾಡಿಸಿದ್ದಾನೆ. ಈ ಎಲ್ಲಾ ಹಲ್ಲೆ ಹಾಗೂ ಒತ್ತಾಯಪೂರ್ವಕ ಬಂದ್ ಮಾಡಿಸಿದ ವಿಡಿಯೋಗಳಿಗೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಶಾಂತಿಯುತ ಬಂದ್ ಗೆ ಕರೆ ಕೊಟ್ಟಿದ್ದೇವು. ಆದರೂ ಎರಡು ಕಡೆ ಗಲಾಟೆಗಳಾಗಿವೆ. ಯಾವುದೇ ಹಿಂಸೆಗಳಾಗಬಾರದು, ಜವಾಬ್ದಾರಿ ವಹಿಸಿಕೊಂಡ ನಾನು ವೈಯಕ್ತಿವಾಗಿ ಕ್ಷಮೆ ಕೋರುತ್ತೇನೆ.
- ಫ್ರೋ.ರಾಜು ಅಲಗೂರ, ಬಂದ್ ನೇತೃತ್ವವಹಿಸಿದ್ದ ಮಾಜಿ ಶಾಸಕ.
*
ನಾವು ಕೂಡ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಭಿಮಾನಿಗಳೇ, ನಮಗೆ ನಮ್ಮ ಧರ್ಮ ಗ್ರಂಥಕ್ಕಿಂತ ಮೊದಲು ಸಂವಿಧಾನ. ನಾವೆಲ್ಲರೂ ಸಂವಿಧಾನದ ಅಡಿಯಲ್ಲಿಯೇ ಕಾರ್ಯನಿರ್ವಹಿಸಬೇಕು. ಸರಕಾರ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿತ್ತು ಆದರೆ ಕಡ್ಡಾಯವಾಗಿ ಯಾವುದೇ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಿ ಅಂತ ಹೇಳಿಲ್ಲ. ಇದು ಕಾಂಗ್ರೆಸ್ ಪ್ರಾಯೋಜಿತ ಬಂದ್. ಬಂದ್ ಹೆಸರಲ್ಲಿ ಮುಗ್ಧ ಜನರ ಮೇಲೆ ಈ ರೀತಿ ಹಲ್ಲೆ ಎಷ್ಟು ಸರಿ.? ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಸಮಸ್ತ ವಿಜಯಪುರದ ವ್ಯಾಪಾರಸ್ಥರು ಹಾಗೂ ಜನತೆ ಸಿಎಂ, ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಉತ್ತರಕ್ಕಾಗಿ ಕಾಯುತ್ತಿದ್ದಾರೆ ಎಂದು ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.