ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Israel-Iran Conflict: ಇರಾನ್‌ ಟಿವಿ ನಿರೂಪಕಿ ಸುದ್ದಿ ಓದುತ್ತಿರುವಾಗಲೇ ಸ್ಟುಡಿಯೋದೊಳಗೆ ಬಿತ್ತು ಬಾಂಬ್‌; ಇಸ್ರೇಲ್‌ ದಾಳಿಯ ವಿಡಿಯೊ ವೈರಲ್‌

Viral Video: ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಇಸ್ರೇಲಿ ಪಡೆಗಳು ಇರಾನ್‌ನ ಐಆರ್‌ಐಬಿ ನಿರ್ವಹಿಸುವ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನ್ಯೂಸ್ ನೆಟ್‌ವರ್ಕ್‌ನ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿ, ನೇರ ಪ್ರಸಾರವನ್ನು ಹಠಾತ್ತನೆ ಸ್ಥಗಿತಗೊಳಿಸಿವೆ ಎಂದು ವರದಿ ತಿಳಿಸಿದೆ. ನಿರೂಪಕಿ ಸ್ಟುಡಿಯೊದ ಒಳಗೆ ವಾರ್ತೆ ಓದುತ್ತಿರುವಾಗ ಸ್ಫೋಟ ನಡೆಯುತ್ತಿರುವ ದೃಶ್ಯ ವೈರಲ್‌ ಆಗಿದೆ.

ಟೆಹ್ರಾನ್: ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಂಘರ್ಷ (Israel-Iran Conflict) ಮತ್ತಷ್ಟು ತೀವ್ರಗೊಂಡಿದೆ. ಎರಡೂ ದೇಶಗಳ ನಡುವೆ ಸತತ 4ನೇ ದಿನವೂ ಕ್ಷಿಪಣಿ ದಾಳಿ ಮುಂದುವರಿದಿದೆ. ಸೋಮವಾರ (ಜೂ. 16) ಬೆಳಗ್ಗೆ ಇರಾನ್‌ನ ಫೋರ್ಡೋ ಪರಮಾಣು ಸ್ಥಾವರದ ಬಳಿ ಹಲವು ಜೋರಾದ ಸ್ಫೋಟಗಳು ಕೇಳಿಬಂದಿವೆ. ಪರಿಣಾಮ ಆ ಪ್ರದೇಶದಲ್ಲಿ ಕಂಪನ ಅನುಭವವಾಗಿದೆ. ಜತೆಗೆ ಇಸ್ರೇಲಿ ಪಡೆಗಳು ಇರಾನ್‌ನ ಐಆರ್‌ಐಬಿ (Islamic Republic of Iran Broadcasting) ನಿರ್ವಹಿಸುವ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನ್ಯೂಸ್ ನೆಟ್‌ವರ್ಕ್(IRINN)ನ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿ, ನೇರ ಪ್ರಸಾರವನ್ನು ಹಠಾತ್ತನೆ ಸ್ಥಗಿತಗೊಳಿಸಿವೆ ಎಂದು ವರದಿ ತಿಳಿಸಿದೆ. ನಿರೂಪಕಿ ಸ್ಟುಡಿಯೊದ ಒಳಗೆ ವಾರ್ತೆ ಓದುತ್ತಿರುವಾಗ ಸ್ಫೋಟ ನಡೆಯುತ್ತಿರುವ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ (Viral Video) ಹರಿದಾಡುತ್ತಿದೆ.

"ಇರಾನಿನ ಪ್ರಚಾರ ಮತ್ತು ಪ್ರಚೋದನೆಯ ಮುಖವಾಣಿ ಕಣ್ಮರೆಯಾಗುವ ಹಾದಿಯಲ್ಲಿದೆ" ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡು ಬಂದಿದೆ. ಇಸ್ರೇಲ್‌ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನ್ಯೂಸ್ ನೆಟ್‌ವರ್ಕ್ ಚಾನಲ್‌ ಅನ್ನು ಗುರಿಯಾಗಿಸಿಕೊಂಡೇ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿದೆ.

ವೈರಲ್‌ ವಿಡಿಯೊ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Israel-Iran Conflict: ಇರಾನ್‌-ಇಸ್ರೇಲ್‌ ಸಂಘರ್ಷ; ಭಾರತದಲ್ಲಿ ಪೆಟ್ರೋಲ್‌ ಬೆಲೆ ಹೆಚ್ಚಾಗುತ್ತಾ?

ನಿರೂಪಕಿಯೊಬ್ಬರು ನೇರ ಪ್ರಸಾರದಲ್ಲಿ ಇಸ್ರೇಲ್ ನಡೆಯನ್ನು ಟೀಕಿಸುತ್ತಿದ್ದಾಗಲೇ ಭಾರಿ ಶಬ್ದದೊಂದಿಗೆ ಸ್ಫೋಟ ಸಂಭವಿಸಿದೆ ಎಂದು ಇರಾನ್‌ನ ಮಾಧ್ಯಮಗಳು ತಿಳಿಸಿವೆ. ಸ್ಫೋಟದ ಬಳಿಕ ಅವರು ನಿರ್ಗಮಿಸುವುದು ವಿಡಿಯೊದಲ್ಲಿ ಕಂಡು ಬಂದಿದೆ. ಸ್ಫೋಟದ ಬಳಿಕ ಸ್ಟುಡಿಯೋ ಧೂಳಿನಿಂದ ತುಂಬಿತ್ತು ಎಂದು ಅಲ್ಲಿನ ಮಾಧ್ಯಮಗಳುಗಳು ವರದಿ ಮಾಡಿವೆ.

ಈ ದಾಳಿಯ ಕೇವಲ ಒಂದು ಗಂಟೆ ಮೊದಲು, ಟೆಹ್ರಾನ್‌ನ ಟಿವಿ ಸ್ಟುಡಿಯೋಗಳು ನೆಲೆಗೊಂಡಿರುವ ಭಾಗವನ್ನು ಸ್ಥಳಾಂತರಿಸಲು ಇಸ್ರೇಲ್ ಎಚ್ಚರಿಕೆ ನೀಡಿತ್ತು.

ಇಸ್ರೇಲ್‌ ಮೇಲೆಯೂ ಬಾಂಬ್‌ ದಾಳಿ

ಇತ್ತ ಇಸ್ರೇಲ್‌ ಮೇಲೆ ಇರಾನ್‌ ಕೂಡ ಪ್ರತಿದಾಳಿ ನಡೆಸಿದೆ. ಸೋಮವಾರ ಇರಾನ್‌ ಮಿಸೈಲ್‌ ದಾಳಿ ನಡೆಸಿದ್ದು, ಇಸ್ರೇಲ್‌ನಲ್ಲಿ ಕನಿಷ್ಠ 8 ಮಂದಿ ಅಸುನೀಗಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ಇನ್ನಷ್ಟು ದಾಳಿಯ ಎಚ್ಚರಿಕೆ ನೀಡಿದೆ. 120ಕ್ಕೂ ಹೆಚ್ಚು ಮೇಲ್ಮೈಯಿಂದ ಮೇಲ್ಮೈಗೆ ಸಾಗಬಹುದಾದ ಇರಾನ್‌ನ ಕ್ಷಿಪಣಿ ಉಡಾವಣಾ ವಾಹನಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್‌ ಸೇನೆ ಹೇಳಿಕೊಂಡಿದೆ.

ಇರಾನ್ ಪ್ರಕಾರ ಜೂನ್ 13ರಂದು ಇಸ್ರೇಲ್ ದಾಳಿ ಆರಂಭಿಸಿದಾಗಿನಿಂದ ಒಟ್ಟು 224 ಜನರು ಸಾವನ್ನಪ್ಪಿದ್ದಾರೆ. ಇನ್ನು ಇರಾನ್‌ ದಾಳಿಯಿಂದ ತಮ್ಮ ದೇಶದ 24 ಜನರು ಸಾವನ್ನಪ್ಪಿದ್ದಾರೆ ಮತ್ತು 400 ಜನರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಹೇಳಿದೆ. ಇಸ್ರೇಲ್ ಅನಿರೀಕ್ಷಿತ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಇರಾನ್‌ನ ಮಿಲಿಟರಿ ಮತ್ತು ಪರಮಾಣು ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಉಲ್ಬಣಗೊಂಡಿತು. ಕೇಂದ್ರ ಸರ್ಕಾರ ಎರಡೂ ದೇಶಗಳಲ್ಲಿನ ಭಾತೀಯರಿಗೆ ಎಚ್ಚರಿಕೆ ಸಂದೇಸ ನೀಡಿದೆ. ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಸೂಚಿಸಿದೆ.