ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Israel-Iran Conflict: ಇರಾನ್‌-ಇಸ್ರೇಲ್‌ ಸಂಘರ್ಷ; ಭಾರತದಲ್ಲಿ ಪೆಟ್ರೋಲ್‌ ಬೆಲೆ ಹೆಚ್ಚಾಗುತ್ತಾ?

ಇರಾನ್‌ ಮತ್ತು ಇಸ್ರೇಲ್‌ ನಡುವೆ ಸಂಘರ್ಷದ ವಾತಾವರಣ ತಲೆದೋರಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯ ಸಾಧ್ಯತೆ ದಟ್ಟವಾಗಿದೆ. ಕಚ್ಚಾ ತೈಲ ಬೆಲೆ ಏರಿಕೆಯಿಂದ ಇಂಧನ ವೆಚ್ಚದಲ್ಲಿ ಮತ್ತು ಸರಕು ಸಾಗಣೆ ವೆಚ್ಚದಲ್ಲಿ ಏರಿಕೆ ಕಂಡು ಬರಲಿದೆ. ಇದರಿಂದ ಭಾರತವೂ ಸೇರಿದಂತೆ ಜಾಗತಿಕವಾಗಿ ಪೆಟ್ರೋಲ್‌ ಬೆಲೆ ಏರಿಕೆಯಾಗಲಿದೆ.

ಇರಾನ್‌-ಇಸ್ರೇಲ್‌ ಸಂಘರ್ಷ; ಭಾರತದ ಮೇಲೇನು ಪರಿಣಾಮ?

ಸಾಂಧರ್ಬಿಕ ಚಿತ್ರ.

Ramesh B Ramesh B Jun 14, 2025 8:22 PM

ಹೊಸದಿಲ್ಲಿ: ಇರಾನ್‌ ಪರಮಾಣು ಕೇಂದ್ರಗಳ ಮೇಲೆ ಇಸ್ರೇಲ್‌ ದಾಳಿ ನಡೆಸುತ್ತಿದ್ದು (Israel-Iran Conflict), ಯುದ್ಧದ ಭೀತಿ ತಲೆದೋರಿದೆ. ಈ ಮಧ್ಯೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯ ಸಾಧ್ಯತೆ ದಟ್ಟವಾಗಿದೆ. ಹೀಗಾದಲ್ಲಿ ಇದು ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ಇಸ್ರೇಲ್‌ ದಾಳಿಯ ಬಳಿಕ ತೈಲ ಧಾರಣೆಯಲ್ಲಿ ಶೇ. 13ರಷ್ಟು ಏರಿಕೆ ಕಂಡು ಬಂದಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಶನಿವಾರ (ಜೂ. 14) ಬ್ಯಾರಲ್‌ಗೆ 6 ಡಾಲರ್‌ಗಿಂತ ಹೆಚ್ಚಾಗಿ 5 ತಿಂಗಳ ಗರಿಷ್ಠ 78 ಡಾಲರ್‌ ದಾಟಿದೆ. ಮಧ್ಯ ಪ್ರಾಚ್ಯ ದೇಶಗಳಿಂದ ತೈಲ ಸರ್ಬರಾಜು ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುವ ಭೀತಿಯೇ ತೈಲ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಕಚ್ಚಾ ತೈಲ ಬೆಲೆ ಏರಿಕೆಯಿಂದ ಇಂಧನ ವೆಚ್ಚದಲ್ಲಿ ಮತ್ತು ಸರಕು ಸಾಗಣೆ ವೆಚ್ಚದಲ್ಲಿ ಏರಿಕೆ ಕಂಡು ಬರಲಿದೆ. ಇದರಿಂದ ಭಾರತವೂ ಸೇರಿದಂತೆ ಜಾಗತಿಕವಾಗಿ ಪೆಟ್ರೋಲ್‌ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಇತ್ತ ತೈಲ ಬೆಲೆ ಏರಿಕೆಯು ಜಾಗತಿಕ ವ್ಯಾಪಾರದ ಮೇಲೆ ಉಂಟಾಗುವ ಸಂಭಾವ್ಯ ನಕಾರಾತ್ಮಕ ಪರಿಣಾಮದಿಂದ ಅಮೆರಿಕದ ಷೇರುಪೇಟೆಯಲ್ಲಿಯೂ ತೀವ್ರ ಕುಸಿತ ಕಂಡುಬಂದಿದೆ. ಇಸ್ರೇಲ್‌ ಮೇಲೆ ಇರಾನ್ ನಡೆಸಿದ ವೈಮಾನಿಕ ಪ್ರತಿದಾಳಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿವೆ.

"ಇಸ್ರೇಲ್‌-ಇರಾನ್‌ ಸಂಘರ್ಷದಿಂದ ತೈಲ ಬೆಲೆ ಅಲ್ಪಾವಧಿಗೆ ಏರಿಕೆಯಾಗಿದೆ. ಆದರೆ ಇದು ತೈಲ ರಫ್ತಿನ ಮೇಲೆ ಪರಿಣಾಮ ಬೀರುತ್ತದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ಬಾರಿ ಇರಾನ್ ಮತ್ತು ಇಸ್ರೇಲ್ ನಡುವೆ ದಾಳಿ ನಡೆದಾಗ ಆರಂಭದಲ್ಲಿ ಬೆಲೆ ಏರಿಕೆಯಾಗಿತ್ತು. ಬಳಿಕ ತೈಲ ಪೂರೈಕೆ ಯಾವುದೇ ಇದು ಪರಿಣಾಮ ಬೀರುತ್ತಿಲ್ಲ ಎಂಬುದು ಸ್ಪಷ್ಟವಾದ ನಂತರ ಬೆಲೆ ಕುಸಿಯಿತು" ಎಂದು ತಜ್ಞ ರಿಚರ್ಡ್ ಜೋಸ್ವಿಕ್ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Israel-Iran Conflict: ಇರಾನ್‌ ಮೇಲೆ ಇಸ್ರೇಲ್‌ ದಾಳಿ; ಮಧ್ಯಪ್ರಾಚ್ಯ ಮತ್ತೆ ಸಂಘರ್ಷ ಭರಿತ: ಭಾರತೀಯರಿಗೆ ಎಚ್ಚರಿಕೆ

ಭಾರತದ ಮೇಲೇನು ಪರಿಣಾಮ?

ಭಾರತ ಶೇ. 80ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದರೂ ಇರಾನ್‌ನಿಂದ ದೊಡ್ಡ ಪ್ರಮಾಣದಲ್ಲಿ ತೈಲವನ್ನು ನೇರವಾಗಿ ಖರೀದಿಸುತ್ತಿಲ್ಲ. ಆದರೆ ಕಳವಳಕಾರಿ ಸಂಗತಿಯೆಂದರೆ ಇರಾನ್‌ ತನ್ನ ನಿಯಂತ್ರಣದಲ್ಲಿರುವ ಹಾರ್ಮುಜ್‌ ಜಲಮಾರ್ಗವನ್ನು ಬಂದ್‌ ಮಾಡಬಹುದು. ವಿಶ್ವದ ಶೇ. 25ರಷ್ಟು ತೈಲದ ಸರ್ಬರಾಜು ಈ ಮಾರ್ಗದಿಂದಲೇ ಸಾಗುತ್ತದೆ. ಈ ಮಾರ್ಗ ಸ್ಥಗಿತಗೊಂಡರೆ ಭಾರತದ ಪ್ರಮುಖ ತೈಲ ಪೂರೈಕೆದಾರ ದೇಶಗಳಾದ ಇರಾಕ್, ಸೌದಿ ಅರೇಬಿಯಾ ಮತ್ತು ಯುಎಇಯ ಸರಬರಾಜಿನ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ. ʼʼಈ ಮಾರ್ಗದಲ್ಲಿ ಕಂಡು ಬರುವ ಯಾವುದೇ ಅಡಚಣೆಯು ಭಾರತಕ್ಕೆ ಹೆಚ್ಚಿನ ಹಾನಿ ಉಂಟು ಮಾಡಬಹುದು. ಪರ್ಯಾಯ ಮಾರ್ಗದಲ್ಲಿ ತೈಲ ಸಾಗಿಸಲು ಹೆಚ್ಚು ವೆಚ್ಚವಾಗಬಹುದು. ಇದೇ ರೀತಿ ಬಿಕ್ಕಟ್ಟು ಮುಂದುವರಿದರೆ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆʼʼ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಎಚ್ಚರಿಕೆ ನೀಡಿತ್ತು.

ಸದ್ಯ ಕೆಂಪು ಸಮುದ್ರದ ಮೂಲಕ ಸರಬರಾಜು ನಡೆಯುತ್ತಿದ್ದರೂ ಹೆಚ್ಚಿದ ಸಂಘರ್ಷವು ಆ ಮಾರ್ಗದ ಮೇಲೂ ಪರಿಣಾಮ ಬೀರಬಹುದು ಎಂದು ವಿಶ್ಲೇಷಕರು ಕಳವಳ ವ್ಯಕ್ತಪಡಿಸಿದ್ದಾರೆ. ಸಂಘರ್ಷವು ತೀವ್ರತೆಯ ಆಧಾರದಲ್ಲಿ ಬೆಲೆ ನಿರ್ಧಾರವಾಗುತ್ತದೆ ಎಂದು ಅವರು ಹೇಳುತ್ತಾರೆ.

ಭಾರತಕ್ಕೆ ತೈಲ ಪೂರೈಸುವ ಟಾಪ್‌ 5 ದೇಶಗಳು

  • ಇರಾಕ್‌
  • ಸೌದಿ ಅರೇಬಿಯಾ
  • ರಷ್ಯಾ
  • ಯುಎಇ
  • ಅಮೆರಿಕ