ಟೋಕಿಯೊ: ಎರಡು ದಿನಗಳ ಭೇಟಿಗಾಗಿ ಜಪಾನ್‌ನ ಟೋಕಿಯೊಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ(PM Modi Japan visit) ಮೊದಲ ದಿನವೇ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದರು. ಸೆಮಿಕಂಡಕ್ಟರ್, ಶುದ್ಧ ಇಂಧನ, ದೂರಸಂಪರ್ಕ, ಔಷಧ, ಖನಿಜಗಳು, ತಂತ್ರಜ್ಞಾನ ಕ್ಷೇತ್ರ ಸೇರಿ ಉಭಯ ದೇಶಗಳ ನಡುವೆ 13 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಭಾರತದಲ್ಲಿ ಮುಂದಿನ 10 ವರ್ಷಗಳಲ್ಲಿ ಜಪಾನ್ ಅಂದಾಜು ₹60 ಸಾವಿರ ಕೋಟಿಯಷ್ಟು ಹೂಡಿಕೆ ಮಾಡುವುದಾಗಿ ಪ್ರಧಾನಿ ಮೋದಿ ತಿಳಿಸಿದರು.
ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ 25ರಷ್ಟು ಹೆಚ್ಚುವರಿ ಸುಂಕ ವಿಧಿಸಿರುವ ಅಮೆರಿಕದ ನಿರ್ಧಾರದ ಬೆನ್ನಲ್ಲೇ, ಮೋದಿ ಅವರ ಪೂರ್ವ ಏಷ್ಯಾ ರಾಷ್ಟ್ರಗಳ ಭೇಟಿಯು ಮಹತ್ವ ಪಡೆದುಕೊಂಡಿದೆ. ಭಾರತ–ಜಪಾನ್ ನಡುವಿನ ಒಪ್ಪಂದವು ಎರಡು ದೇಶಗಳಿಗೆ ಮಾತ್ರವಲ್ಲ ವಿಶ್ವ ಶಾಂತಿ ಮತ್ತು ಸುಸ್ಥಿರತೆ ದೃಷ್ಟಿಯಿಂದಲೂ ಮಹತ್ವ ಪಡೆದಿದೆ.
ಜಪಾನ್ ಪ್ರಧಾನಿ ಜತೆ ಮಹತ್ವದ ಮಾತುಕತೆ ನಡೆಸಿದ ಮೋದಿ, ಭಾರತ-ಜಪಾನ್ ಬಾಂಧವ್ಯ ಜಾಗತಿಕ ಶಾಂತಿಗೆ ಆದ್ಯತೆ ನೀಡುತ್ತದೆ ಎಂದು ಹೇಳಿದರು. ಮುಂದಿನ ದಶಕದಲ್ಲಿ ಜಪಾನ್ ಉದ್ಯಮಗಳು ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಲಿವೆ. ರಕ್ಷಣಾ ಕ್ಷೇತ್ರದಲ್ಲಿ ಉಭಯ ದೇಶಗಳು ಸಹಕಾರ ಬಲಪಡಿಸಲಿವೆ. ಇಸ್ರೋ ಮತ್ತು ಜಾಕ್ಸಾ ಜಂಟಿಯಾಗಿ ಚಂದ್ರಯಾನ-5 ಯೋಜನೆ ಕೈಗೆತ್ತಿಕೊಳ್ಳಲಿವೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಮುಂದಿನ 5 ವರ್ಷಗಳಲ್ಲಿ ಕೌಶಲ ಹೊಂದಿರುವ 50 ಸಾವಿರದಷ್ಟು ಭಾರತೀಯರಿಗೆ ಜಪಾನ್‌ನಲ್ಲಿ ಉದ್ಯೋಗಾವಕಾಶವನ್ನೂ ಈ ಒಪ್ಪಂದ ಕಲ್ಪಿಸಲಿದೆ.
ಚಂದ್ರಯಾನ-5 ಮಿಷನ್ ಚಂದ್ರನ ದಕ್ಷಿಣ ಧ್ರುವದಲ್ಲಿ ಶಾಶ್ವತವಾಗಿ ನೆರಳಿನ ಪ್ರದೇಶದ(PSR) ಸುತ್ತಮುತ್ತಲಿನ ಚಂದ್ರನ ನೀರು ಸೇರಿದಂತೆ ಚಂದ್ರನ ಬಾಷ್ಪಶೀಲ ವಸ್ತುಗಳನ್ನು ಅಧ್ಯಯನ ಮಾಡುವ ಗುರಿ ಹೊಂದಿದೆ. ಈ ಕಾರ್ಯಾಚರಣೆಯು ಜಪಾನ್‌ನ H3 ರಾಕೆಟ್ ಅನ್ನು ಬಳಸಿಕೊಳ್ಳಲಿದ್ದು, 2027-28 ರ ಉಡಾವಣೆಗೆ ಯೋಜಿಸಲಾಗಿದೆ. ನೀರಿನ ಮಂಜುಗಡ್ಡೆಯನ್ನು ಪತ್ತೆಹಚ್ಚಲು ಮತ್ತು ವಿಶ್ಲೇಷಿಸಲು ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಅನ್ವೇಷಿಸುವ ಗುರಿಯನ್ನು ಇದು ಹೊಂದಿದೆ. ಪಾಲುದಾರಿಕೆಯ ಭಾಗವಾಗಿ, JAXA ರೋವರ್ ಅನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಇಸ್ರೋ ಲ್ಯಾಂಡರ್ ಅನ್ನು ಕೊಡುಗೆಯಾಗಿ ನೀಡುತ್ತದೆ.
ಇದನ್ನೂ ಓದಿ Narendra Modi: ಒಂದೇ ವೇದಿಕೆಯಲ್ಲಿ ಮೋದಿ-ಪುಟಿನ್-ಜಿನ್ ಪಿಂಗ್; ಮಹತ್ವದ ಚರ್ಚೆ ಸಾಧ್ಯತೆ