ಅಹಮದಾಬಾದ್: ಜಪಾನ್‌ನ ಭಾರತ ರಾಯಭಾರಿ (Japanese Ambassador ) ಒನೊ ಕೀಚಿ (Ono Keiichi) ಅವರು ಗುಜರಾತ್‌ನ (Gujarat) ಹಂಸಲ್‌ಪುರದಲ್ಲಿ (Hansalpur) ನಡೆದ ಕಾರ್ಯಕ್ರಮದಲ್ಲಿ ಗುಜರಾತಿಯಲ್ಲಿ ಸರಳವಾಗಿ ಮಾತನಾಡಿ ಎಲ್ಲರ ಮನಗೆದ್ದರು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾರುತಿ ಸುಜುಕಿಯ ಎಲೆಕ್ಟ್ರಿಕ್ ವಾಹನ (ಇವಿ) ಮತ್ತು ಬ್ಯಾಟರಿ ಕಾರ್ಖಾನೆಯನ್ನು ಉದ್ಘಾಟಿಸಿದರು. ಜೊತೆಗೆ, ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಇ-ವಿಟಾರಾಗೆ ಚಾಲನೆ ನೀಡಿದರು, ಇದನ್ನು 100ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುವುದು. ಇದೇ ವೇಳೆ ಮೋದಿ ಅವರು ಭಾರತ, ಜಪಾನ್ ಮತ್ತು ಸುಜುಕಿ ಮೋಟಾರ್ ಕಾರ್ಪೊರೇಷನ್‌ಗೆ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಒನೊ ಕೀಚಿ, “ನಮಸ್ತೆ ಮಿತ್ರೋ! ಕೇಮ್ ಛೋ!” (ನಮಸ್ಕಾರ ಸ್ನೇಹಿತರೇ, ನೀವು ಹೇಗಿದ್ದೀರಿ?) ಎಂದು ಗುಜರಾತಿಯಲ್ಲಿ ಮಾತನಾಡಿದರು. “ಮೇರಾ ನಾಮ್ ಕೀಚಿ ಒನೊ ಛೇ ಆನೇ ಹು ಜಾಪನೀಸ್ ರಾಜದೂತ್ ಛು” (ನನ್ನ ಹೆಸರು ಕೀಚಿ ಒನೊ, ನಾನು ಜಪಾನ್ ರಾಯಭಾರಿ) ಎಂದು ಹೇಳಿ, ಪ್ರೇಕ್ಷಕರಿಂದ ಮತ್ತು ಮೋದಿಯವರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಒನೊ ಅವರ ಪ್ರಯತ್ನವನ್ನು ಮೆಚ್ಚಿದ್ದಾರೆ.
Viral News: ನೀಲಿ ಮೊಟ್ಟೆಯಿಟ್ಟ ನಾಟಿ ಕೋಳಿ; ದಾವಣಗೆರೆಯಲ್ಲಿ ನಡೆಯಿತು ವಿಚಿತ್ರ ಘಟನೆ
ಮೋದಿ ಅವರು, “ಭಾರತ-ಜಪಾನ್ ಸಂಬಂಧ ಕೇವಲ ರಾಜತಾಂತ್ರಿಕವಲ್ಲ, ಇದು ಸಾಂಸ್ಕೃತಿಕ ಮತ್ತು ವಿಶ್ವಾಸದ ಆಧಾರಿತವಾಗಿದೆ. ಒಬ್ಬರ ಪ್ರಗತಿಯಲ್ಲಿ ಇನ್ನೊಬ್ಬರ ಪ್ರಗತಿಯನ್ನು ಕಾಣುತ್ತೇವೆ. ಮಾರುತಿ ಸುಜುಕಿಯೊಂದಿಗೆ ಆರಂಭವಾದ ನಮ್ಮ ಪಯಣ ಈಗ ಬುಲೆಟ್ ಟ್ರೈನ್ ವೇಗವನ್ನು ತಲುಪಿದೆ” ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಸುಜುಕಿ ಮೋಟಾರ್ ಕಾರ್ಪೊರೇಷನ್‌ನ ಅಧ್ಯಕ್ಷ ತೋಶಿಹಿರೊ ಸುಜುಕಿ ಮತ್ತಿತರರು ಉಪಸ್ಥಿತರಿದ್ದರು.
ಮೋದಿ ಅವರು ಆಗಸ್ಟ್ 29-30 ರಂದು ಜಪಾನ್‌ಗೆ ಭೇಟಿಯಾಗಲಿದ್ದಾರೆ. ಜಪಾನ್‌ನ ಪ್ರಧಾನಮಂತ್ರಿ ಶಿಗೇರು ಇಶಿಬಾ ಅವರೊಂದಿಗೆ ಶೃಂಗಸಭೆಯಲ್ಲಿ ಭಾಗವಹಿಸಿ, ರಕ್ಷಣೆ, ವ್ಯಾಪಾರ, ತಂತ್ರಜ್ಞಾನ ಕುರಿತು ಚರ್ಚಿಸಲಿದ್ದಾರೆ. ಇದು ಏಳು ವರ್ಷಗಳ ಬಳಿಕ ಮೋದಿಯವರ ಮೊದಲ ಸ್ವತಂತ್ರ ಜಪಾನ್ ಭೇಟಿಯಾಗಿದೆ. ಜಪಾನ್‌ನಿಂದ, ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಗಾಗಿ ಚೀನಾದ ಟಿಯಾಂಜಿನ್‌ಗೆ ತೆರಳಲಿದ್ದಾರೆ, ಅಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ. ಈ ಭೇಟಿಗಳು ಭಾರತ-ಜಪಾನ್ ಸಂಬಂಧವನ್ನು ಮತ್ತಷ್ಟು ಬಲಪಡಿಸಲಿವೆ.