ಮಾಸ್ಕೋ: ಉಕ್ರೇನ್‌ನೊಂದಿಗಿನ ಯುದ್ಧವು ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವಾಗ, ನೆರೆಯ ಉಕ್ರೇನ್‌ಗೆ ಟೊಮಾಹಾಕ್ ಕ್ಷಿಪಣಿಗಳನ್ನು ಪೂರೈಸುವುದರ ವಿರುದ್ಧ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Putin) ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ. ರಷ್ಯಾದ ಭೂಪ್ರದೇಶವನ್ನು ಹೊಡೆಯಲು (Donald Trump) ಬಳಸಲಾಗುವ ಇಂತಹ ಕ್ಷಿಪಣಿಗೆ ಪ್ರತಿಕ್ರಿಯೆ 'ಗಂಭೀರವಾಗಿರುತ್ತದೆ ಎಂದು ಪುಟಿನ್ ಹೇಳಿದ್ದಾರೆ. ಸಂವಾದ ಯಾವಾಗಲೂ ಘರ್ಷಣೆ ಅಥವಾ ಯಾವುದೇ ವಿವಾದಗಳಿಗಿಂತ ಉತ್ತಮ, ವಿಶೇಷವಾಗಿ ಯುದ್ಧಕ್ಕಿಂತ ಉತ್ತಮ. ನಾವು ಯಾವಾಗಲೂ ಮಾತುಕತೆಯ ಮುಂದುವರಿಕೆಯನ್ನು ಬೆಂಬಲಿಸುತ್ತೇವೆ. ಆದರೆ ರಷ್ಯಾದ ಸುರಕ್ಷತೆ ವಿಷಯ ಬಂದರೆ ರಾಜಿಯ ಮಾತಿಲ್ಲ ಎಂದು ಅವರು ಹೇಳಿದರು.
ತೈಲ ಕಂಪನಿಗಳ ಮೇಲೆ ಕಠಿಣ ನಿರ್ಬಂಧ ಹೇರಿರುವ ಕುರಿತು ಮಾತನಾಡಿದ ಪುಟಿನ್, ರಡು ಪ್ರಮುಖ ತೈಲ ಕಂಪನಿಗಳನ್ನು ಗುರಿಯಾಗಿಸಿಕೊಂಡು ಅಮೆರಿಕದ ಇತ್ತೀಚಿನ ನಿರ್ಬಂಧಗಳು "ಗಂಭೀರ"ವಾಗಿವೆ, ಆದರೆ ಆರ್ಥಿಕತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವಷ್ಟು ಬಲವಾಗಿಲ್ಲ ಎಂದು ಹೇಳಿದ್ದಾರೆ. ಉಕ್ರೇನ್ ಯುದ್ಧದ ವಿಚಾರದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಅಮೆರಿಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ರಷ್ಯಾದ ಎರಡು ಅತಿದೊಡ್ಡ ತೈಲ ಕಂಪನಿಗಳ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ನಿರ್ಬಂಧಗಳನ್ನು ವಿಧಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಅಮೆರಿಕ-ಚೀನಾ ವಾಣಿಜ್ಯ ಸಂಘರ್ಷ ನವೆಂಬರ್ 1ರಿಂದ ಮತ್ತಷ್ಟು ತೀವ್ರ?
ಟ್ರಂಪ್ ಮತ್ತು ಪುಟಿನ್ ನಡುವೆ ಬುದಾಪೆಸ್ಟ್‌ನಲ್ಲಿ ನಡೆಯಬೇಕಿದ್ದ ಮಹತ್ವದ ಶೃಂಗಸಭೆ ರದ್ದಾದ ಕೇವಲ ಒಂದು ದಿನದ ಬಳಿಕ ಅಮೆರಿಕ ಈ ಕಠಿಣ ಕ್ರಮವನ್ನು ಪ್ರಕಟಿಸಿದೆ. ಯುದ್ಧಕ್ಕೆ ಹಣಕಾಸು ಒದಗಿಸುತ್ತಿರುವ ರಷ್ಯಾದ ಎರಡು ಅತಿದೊಡ್ಡ ತೈಲ ಕಂಪನಿಗಳಾದ ರಾಸ್ನೆಫ್ಟ್ ಮತ್ತು ಲುಕ್‌ಆಯಿಲ್ ಮೇಲೆ ನಿರ್ಬಂಧ ಹೇರಲಾಗಿದೆ. ಈ ನಿರ್ಬಂಧಗಳ ಸುದ್ದಿಯಿಂದಾಗಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 2.65 ಡಾಲರ್‌ಗಳಷ್ಟು ಏರಿಕೆಯಾಗಿ 63.97 ಡಾಲರ್‌ಗೆ ತಲುಪಿದೆ. ಅದೇ ರೀತಿ, ಡಬ್ಲ್ಯುಟಿಐ ಕಚ್ಚಾ ತೈಲದ ಬೆಲೆಯು 2.14 ಡಾಲರ್ ಹೆಚ್ಚಳವಾಗಿ 59.38 ಡಾಲರ್‌ಗೆ ಮುಟ್ಟಿದೆ. ಅಮೆರಿಕದಲ್ಲಿ ಇಂಧನ ಬೇಡಿಕೆ ಹೆಚ್ಚುತ್ತಿರುವುದು ಮತ್ತು ಕಚ್ಚಾ ತೈಲ ದಾಸ್ತಾನು ಕಡಿಮೆಯಾಗಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ.