ಎಫ್‌ಬಿಐನಿಂದ ಪೆಗಾಸಸ್ ಬಳಕೆ ?
ಎಫ್‌ಬಿಐನಿಂದ ಪೆಗಾಸಸ್ ಬಳಕೆ ?
Vishwavani News
November 15, 2022
ರವಿ ದುಡ್ಡಿನಜಡ್ಡು
ಪೆಗಾಸಸ್ ಸಾಫ್ಟ್ ವೇರ್ ಕುರಿತು ನೀವು ಕೇಳಿರಬೇಕು. ಇಸ್ರೇಲಿನ ಎನ್‌ಎಸ್‌ಒ ಗ್ರೂಪ್ ಎಂಬ ತಂತ್ರಜ್ಞಾನ ಸಂಸ್ಥೆ ತಯಾರಿಸಿರುವ ಈ ತಂತ್ರಾಂಶದ ಸಹಾಯದಿಂದ, ಬೇರೆಯವರ ಸ್ಮಾರ್ಟ್ಫೋನ್‌ಗಳ ಮಾಹಿತಿಯನ್ನು ಕದಿಯಬಹುದು. ನಮ್ಮ ದೇಶದಲ್ಲೂ
ಪೆಗಾಸಸ್ ತಂತ್ರಾಂಶವನ್ನು ಬಳಸಲಾಗಿದೆ ಎಂದು ಕಳೆದ ನಾಲ್ಕಾರು ವರ್ಷಗಳಿಂದ ಆರೋಪ, ಪ್ರತ್ಯಾರೋಪಗಳು ನಡೆ
ಯುತ್ತಲೇ ಇವೆ.
ಇದೊಂದು ದುಬಾರಿ ತಂತ್ರಾಂಶವಾಗಿದ್ದು, ಇಸ್ರೇಲಿನಲ್ಲಿ ಪೆಗಾಸಸ್‌ನ್ನು ಶಸ್ತ್ರಗಳ ಸಾಲಿಗೆ ಸೇರಿಸಲಾಗಿದೆ. ಆದ್ದರಿಂದ, ಎನ್‌ಎಸ್‌ಒ ಸಂಸ್ಥೆಯು ಇದನ್ನು ಯಾರಿಗಾದರೂ ಮಾರ ಬೇಕಾದರೆ, ಇಸ್ರೇಲ್ ಸರಕಾರದ ಅನುಮತಿ ಅಗತ್ಯ. ಪೆಗಾಸಸ್ ತಂತ್ರಾಂಶವನ್ನು ಇತರರ ಮಾಹಿತಿ ಕದಿಯುವ ಉದ್ದೇಶದಿಂದಲೇ ತಯಾರಿಸಿದ್ದೇನೆ ಎಂದು ಎನ್‌ಎಸ್‌ಒ ಗ್ರೂಪ್ ಹೇಳಿಕೊಂಡಿದೆ. ಮುಖ್ಯವಾಗಿ ಉಗ್ರಗಾಮಿಗಳ ಕೃತ್ಯವನ್ನು ತಡೆಯಲು, ಅವರ ಸ್ಮಾರ್ಟ್ ಫೋನ್‌ಗಳನ್ನು ಹ್ಯಾಕ್ ಮಾಡಿ ಮಾಹಿತಿ ಸಂಗ್ರಹಿಸು ವುದೇ ಪೆಗಾಸಸ್‌ನ ಉದ್ದೇಶ ಎಂದು ಅದು ಹೇಳಿದೆ.
ಈ ದುಬಾರಿ ತಂತ್ರಾಂಶವನ್ನು ಬೇರೆ ಬೇರೆ ದೇಶಗಳ ಸರಕಾರಗಳಿಗೆ ಮಾತ್ರ ಮಾರಲಾಗು ತ್ತದೆಯೇ ಹೊರತು, ಖಾಸಗಿ ವ್ಯಕ್ತಿಗಳಿಗೆ ಕೊಡುವುದಿಲ್ಲ ಎಂದೂ ಅದು ಹೇಳಿಕೊಂಡಿದೆ. ಮಾನವ ಹಕ್ಕುಗಳ ಕಾರ್ಯಕರ್ತರು ಪೆಗಾಸಸ್ ವಿರುದ್ದ ಸಣ್ಣ ಮಟ್ಟದ ಹೋರಾಟವನ್ನೇ ಮಾಡಿದ್ದಾರೆ. ಸರಕಾರದ ದುರಾಚಾರಗಳ ವಿರುದ್ಧ ಹೋರಾಡುವ ಪತ್ರಕರ್ತರು, ವಿರೋಧಿ ಬಣದ ರಾಜಕೀಯ ನಾಯಕರು ಮೊದಲಾದವರ ಸ್ಮಾರ್ಟ್ ಫೋನ್‌ನ ಮಾಹಿತಿಯನ್ನು ರಹಸ್ಯವಾಗಿ ಸಂಗ್ರಹಿಸಲು ವಿವಿಧ ದೇಶಗಳ ಅಧಿಕಾರಸ್ಥರು ಪೆಗಾಸಸ್‌ನ್ನು ಉಪಯೋಗಿಸಿ ದ್ದಾರೆಂಬ ಬಲವಾದ ಆರೋಪ ಚಾಲ್ತಿಯಲ್ಲಿದೆ.
ಅತ್ತ ಅಮೆರಿಕದ ಎಫ್ಬಿಐ ಸಂಸ್ಥೆಯು ಪೆಗಾಸಸ್‌ನ್ನು ತನ್ನ ತನಿಖೆಗೆ ಬಳಸಿಕೊಳ್ಳಲು 2021ರಲ್ಲಿ ಯೋಚಿಸಿತ್ತು ಎಂಬ ವರದಿ ಈಗ
ಹೊರಬಿದ್ದಿದ್ದು, ಅದು ಅಮೆರಿಕದಲ್ಲಿ ಸಣ್ಣ ಮಟ್ಟದ ಸಂಚಲನವನ್ನು ಮಾಡಿದೆ. 2020 ಮತ್ತು 2021ರ ಆರಂಭ ಕಾಲದಲ್ಲಿ ಎಫ್ಬಿಐ ನಾಯಕತ್ವವು ಪೆಗಾಸಸ್‌ನ್ನು ತನ್ನ ತನಿಖೆಗೆ ಉಪಯೋಗಿಸಲು ಹೆಚ್ಚು ಕಡಿಮೆ ನಿರ್ಧರಿಸಿತ್ತು ಎಂದು ಈಗ ಬಯಲಾಗಿದೆ.
ನ್ಯಾಯಾಲಯದಲ್ಲಿರುವ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ, ಹೆಚ್ಚಿನ ಮಾಹಿತಿಯನ್ನು ರಹಸ್ಯವಾಗಿ ಕಲೆಹಾಕಲು ಪೆಗಾಸಸ್ ನ್ನು ಹೇಗೆ ಉಪಯೋಗಿಸಬಹುದು ಎಂಬ ಕಾರ್ಯ ಸೂಚಿಯನ್ನು ಸಹ ಎಫ್ ಬಿಐ ಸಿದ್ಧಪಡಿಸಿತ್ತು. ಆದರೆ, ಈ ಸಂದರ್ಭದಲ್ಲಿ ಅಮೆರಿಕದ ನಾಗರಿಕರ ಸ್ಮಾರ್ಟ್ ಫೋನ್‌ಗಳ ಮೇಲೆ ಪೆಗಾಸಸ್‌ನ್ನು ಪ್ರಯೋಗಿಸಲಾಯಿತೆ, ಇಲ್ಲವೆ ಎಂಬುದು ಖಚಿತವಾಗಿಲ್ಲ.
ಏಕೆಂದರೆ, ೨೦೨೧ರ ಜುಲೈ ಸಮಯದಲ್ಲಿ, ಪೆಗಾಸಸ್ ಉಪಯೋಗ ಅಗತ್ಯವಿಲ್ಲ ಎಂದು ಎಫ್ ಬಿಐ ಅಧಿಕೃತವಾಗಿ ನಿರ್ಧರಿಸಿತು. ಆದರೆ ಮುಂದೆ ಆ ಸ್ಪೈವೇರ್ ನ್ನು ತಾನು ಉಪಯೋಗಿಸಲೂ ಬಹುದು ಎಂಬ ಇಂಗಿತವನ್ನು ಎಫ್ ಬಿಐ ವ್ಯಕ್ತಪಡಿಸಿದೆ.
ಆದರೆ, ಇದೇ ಸಮಯದಲ್ಲಿ, ಅಂದರೆ ಜುಲೈ ೨೦೨೧ರಲ್ಲಿ ಪ್ರಕಟಗೊಂಡ ವಾಷಿಂಗ್ಟನ್ ಪೋಸ್ಟ್‌ನ ಒಂದು ವರದಿಯ ಪ್ರಕಾರ, ಇಬ್ಬರು ಮಹಿಳೆಯರ ಸ್ಮಾರ್ಟ್ ಫೋನ್‌ನ ಮಾಹಿತಿಯನ್ನು ರಹಸ್ಯವಾಗಿ ಸಂಗ್ರಹಿಸಲಾಗಿತ್ತು! ಸೌದಿ ಪತ್ರಕರ್ತ ಜಮಾಲ್ ಖಸೋಗ್ಗಿಯ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದು ನಡೆದಿತ್ತು ಎಂದು ಆ ಪತ್ರಿಕೆ ವರದಿ ಮಾಡಿತ್ತು. ಆದರೆ, ಆ ವರದಿ ಯಲ್ಲಿ ಪೆಗಾಸಸ್‌ನ ಹೆಸರು ಇರಲಿಲ್ಲ.
ಈ ಎಲ್ಲಾ ವಿಚಾರವನ್ನು ಗಮನಿಸಿದರೆ ಅಧಿಕೃತವಾಗಿ ಅಮೆರಿಕದಲ್ಲಿ ಪೆಗಾಸಸ್ ಉಪಯೋಗವು ದೃಢಪಟ್ಟಿಲ್ಲವಾದರೂ,
ಅದೊಂದು ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ನಮ್ಮ ದೇಶವೂ ಸೇರಿದಂತೆ, ಜಗತ್ತಿನ ವಿವಿಧ ಕಡೆಗಳಲ್ಲಿ ಈ ಸ್ಪೈವೇರ್ ಉಪಯೋಗ ಸಾಕಷ್ಟು ಧಾರಾಳವಾಗಿಯೇ ಆದಂತಹ ವರದಿ ಬರುತ್ತಿವೆ. ಹಲವು ದೇಶಗಳ ಸರಕಾರಗಳು ಅದನ್ನು ನಿರಾಕರಿಸಿ ದರೂ, ಮೇಲ್ನೋಟಕ್ಕೆ ಪೆಗಾಸಸ್ ಬಳಕೆ ವಿಶ್ವವ್ಯಾಪಿ ಎಂಬುದು ಸ್ಪಷ್ಟ.
ನಮ್ಮ ದೇಶದಲ್ಲಿ ಸುಪ್ರೀಂ ಕೋರ್ಟ್ ಉದ್ಯೋಗಿಯೊಬ್ಬರ ಸ್ಮಾರ್ಟ್ ಫೋನ್‌ನಲ್ಲಿ ಪೆಗಾಸಸ್ ತಂತ್ರಾಂಶ ಪತ್ತೆಯಾಗಿದೆ ಎಂಬ
ವರದಿಯಿದೆ. ವಿರೋಧ ಪಕ್ಷದ ನಾಯಕರು, ಭೀಮಾಕೋರೆಗಾಂ ಕಾರ್ಯಕರ್ತರು ಮೊದಲಾದವರು ಪೆಗಾಸಸ್ ದಾಳಿಗೆ
ತುತ್ತಾಗಿದ್ದಾರೆಂಬ ಆರೋಪವಿದೆ. ಸ್ಮಾರ್ಟ್ ಫೋನ್‌ಗೆ ಬಂದ ಒಂದು ಲಿಂಕ್‌ನ ಮೂಲಕ ಪೆಗಾಸಸ್, ಆಪಲ್ ಸೇರಿದಂತೆ ಎಲ್ಲಾ
ವಿಧದ ಸ್ಮಾರ್ಟ್ ಫೋನ್‌ನ ಒಳಗೆ ಸೇರಿಕೊಳ್ಳಬಲ್ಲದು.
ಫೋನ್‌ನಲ್ಲಿರುವ ಮಾಹಿತಿ, ದಾಖಲೆಗಳು, ವಾಯ್ಸ್ ರೆಕಾರ್ಡಿಂಗ್ ಎಲ್ಲವನ್ನೂ ಮಾಡಬಲ್ಲ ಈ ಸ್ಪೈವೇರ್, ಈಗಿನ ತಂತ್ರಜ್ಞಾನದ ಯುಗದಲ್ಲಿ ಯಾವುದೂ ರಹಸ್ಯವಲ್ಲ, ಯಾವುದೂ ಖಾಸಗಿಯಾಗಿ ಉಳಿಯಬೇಕಿಲ್ಲ ಎಂಬುದನ್ನು ಒತ್ತಿ ಹೇಳುತ್ತಿದೆ!