ಪರಿಸರ ಸ್ನೇಹಿ ಸಂಶೋಧನೆ
ಪರಿಸರ ಸ್ನೇಹಿ ಸಂಶೋಧನೆ
Vishwavani News
August 2, 2022
ಟೆಕ್ ಸೈನ್ಸ್
ಎಲ್.ಪಿ.ಕುಲಕರ್ಣಿ
ಹಳೆಯ ಸಿ.ಡಿ.ಗಳನ್ನು ಲಾಭದಾಯಕವಾಗಿ, ಪರಿಸರಸ್ನೇಹಿಯಾಗಿ ಉಪಯೋಗಿಸಲು ಸಾಧ್ಯವೆ?
ಈಗಂತೂ ಸ್ಮಾರ್ಟ್ ಫೋನ್‌ಗಳ ಜಮಾನಾ. ಈ ಹಿಂದೆ ವಿಡಿಯೋ, ಆಡಿಯೋಗಳನ್ನು ಸಂಗ್ರಹಿಸಿಡಲು ಸಿಡಿಗಳನ್ನು ಬಳಸುತ್ತಿದ್ದೆವು. ಈಗಲೂ ಬಳಸುತ್ತಿದ್ದೇವೆ ಕೂಡ. ಸಿಡಿ ಮೇಲೆ ಸ್ವಲ್ಪ ಸ್ಕ್ರ್ಯಾಚ್ ಆದರೆ, ಅವುಗಳ ಬಳಕೆಗೆ ವಿರಾಮ.
ಹೀಗಾಗಿ, ಸ್ಕ್ರ್ಯಾಚ್ ಆದ ಸಿಡಿಗಳು ಕಸದ ಬುಟ್ಟಿಗೆ ಸೇರಿ ವೇಸ್ಟ್ ಆಗುತ್ತಿವೆ. ಅಂತಹ ಸಿಡಿಗಳನ್ನು ಬಳಸಿಕೊಂಡು ಲ್ಯಾಕ್ಟೇಟ್, ಗ್ಲುಕೋಸ್, ಪಿಎಚ್ ಹಾಗೂ ಆಮ್ಲಜನಕದ ಮಟ್ಟವನ್ನು ಪತ್ತೆಹಚ್ಚಬಲ್ಲ, ಹೃದಯ ಸ್ನಾಯುಗಳ ಮೇಲ್ವಿಚಾರಣೆ ಮಾಡಬಲ್ಲ ಜೈವಿಕ ಸಂವೇದಕಗಳನ್ನಾಗಿ ತಯಾರಿಸುವ ಕೆಲಸ ನಡೆದಿದೆ. ಈ ಸಂಶೋಧನೆಯನ್ನು ಇತ್ತೀಚೆಗೆ ‘ನೇಚರ್ ಕಮ್ಯುನಿಕೇಷನ್ಸ್’ ನಲ್ಲಿ ಪ್ರಕಟಿಸಲಾಗಿದೆ.
ಸಿಡಿಯಲ್ಲಿರುವ ತೆಳುವಾದ ಲೋಹದ ಪದರವನ್ನು ಬೇರ್ಪಡಿಸಿ, ಮಾನವ ಹೃದಯ ಹಾಗೂ ಸ್ನಾಯುಗಳಲ್ಲಿನ ವಿದ್ಯುತ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವ ಸಂವೇದಕಗಳಾಗಿ ಹೇಗೆ ಪರಿವರ್ತಿಸಬಹುದು ಎಂಬುದನ್ನು ಈ ಸಂಶೋಧನೆ ತೋರಿ ಸುತ್ತದೆ. ಜೀವ ದ್ರವಗಳಲ್ಲಿ ಲ್ಯಾಕ್ಟೇಟ್, ಗ್ಲೂಕೋಸ್, ಪಿಎಚ್ ಮತ್ತು ಆಮ್ಲಜನಕದ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಈ ಜೈವಿಕ ಸಂವೇದಕಗಳನ್ನು ಬಳಸಬಹುದು. ಇದಲ್ಲದೆ, ಈ ಸಂವೇದಕಗಳಿಂದ ಬ್ಲೂಟೂತ್ ಬಳಸಿ ಸ್ಮಾರ್ಟ್ ಫೋನ್‌ಗಳೊಂದಿಗೆ ಸಂವಹನವನ್ನು ಕೂಡ ನಡೆಸಬಹುದು.
ಇಂತಹ ಸಂವೇದಕಗಳ ತಯಾರಿಕೆಗೆ ಯಾವುದೇ ದುಬಾರಿ ಸಲಕರಣೆಗಳ ಅಗತ್ಯವಿಲ್ಲ ಮತ್ತು ಸುಮಾರು ೨೦ ರಿಂದ ೩೦ ನಿಮಿಷ ಗಳಲ್ಲಿ ತಯಾರಿಸಬಹುದು. ಇದರಲ್ಲಿ ಯಾವುದೇ ವಿಷಕಾರಿ ರಾಸಾಯನಿಕಗಳನ್ನು ಬಿಡುಗಡೆ ಮಾಡುವುದಿಲ್ಲ. ಇದಕ್ಕೆ, ಅತ್ಯಾಧುನಿಕ ಮೈಕ್ರೋಫ್ಯಾಬ್ರಿಕೇಶನ್ ಸೌಲಭ್ಯಗಳು, ದುಬಾರಿ ವಸ್ತುಗಳು ಅಥವಾ ಉನ್ನತ-ಕ್ಯಾಲಿಬರ್ ಎಂಜಿನಿಯರಿಂಗ್ ಕೌಶಲ್ಯಗಳ ಅಗತ್ಯವಿಲ್ಲ. ಎಂದು ಸಂಶೋಧಕರು ಹೇಳುತ್ತಿದ್ದಾರೆ.
ಈ ತಂತ್ರಜ್ಞಾನವು ಹೆಚ್ಚು ಹೆಚ್ಚು ಬಳಕೆಗೆ ಬಂದ ನಂತರ, ಬಳಸಿ ಎಸೆಯುವ ಸಿ.ಡಿ.ಗಳನ್ನು ಮರುಬಳಕೆಗೆ ಉಪಯೋಗಿಸ ಬಹುದು, ಆ ಮೂಲಕ ಇ-ವೇಸ್ಟ್‌ಗಳನ್ನು ತಗ್ಗಿಸಬಹುದು. ಆದ್ದರಿಂದ ಇದು ಪರಿಸರ ಸ್ನೇಹಿ ಸಂಶೋಧನೆ.