Benefits of Spring Onions: ಈರುಳ್ಳಿ ಸೊಪ್ಪು: ರುಚಿ, ಘಮ, ಸತ್ವಗಳ ಸಂಗಮ
Benefits of Spring Onions: ರುಚಿ, ಸತ್ವ ಮತ್ತು ಸುಲಭ- ಈ ಮೂರನ್ನೂ ಸಾಧಿಸುವುದಕ್ಕೆ ಉಪಯುಕ್ತ ಈರುಳ್ಳಿ ಸೊಪ್ಪು. ಲಘುವಾದ ಘಾಟು, ಬಹಳಷ್ಟು ರುಚಿ ಮತ್ತು ಸತ್ವಗಳನ್ನು ಹೊಂದಿರುವ ಈ ಸೊಪ್ಪಿನಂಥ ತರಕಾರಿಯನ್ನು ಬಳಸುವುದು ಕಷ್ಟವಲ್ಲ. ಸೊಪ್ಪಿನಂತೆ ಕಂಡರೂ, ಉಳಿದೆಲ್ಲ ಸೊಪ್ಪುಗಳಂತೆ ಬಿಡಿಸಿ, ಸ್ವಚ್ಛಗೊಳಿಸುವ ತಾಪತ್ರಯವಿಲ್ಲ. ಈರುಳ್ಳಿಯಂತೆ ಕಂಡರೂ, ಗಡ್ಡೆಯಲ್ಲ. ಸೂಪ್, ಸಲಾಡ್‌ಗಳಿಂದ ಹಿಡಿದು, ಪಲ್ಯ, ಪಲಾವ್‌ಗಳವರೆಗೆ ತರಹೇವಾರಿ ಅಡುಗೆಗಳಿಗೆ ಇದು ಹೊಂದಿಕೊಳ್ಳಬಲ್ಲದು.

ಈರುಳ್ಳಿ ಸೊಪ್ಪು.

ಬೆಂಗಳೂರು: ಮನೆಯಲ್ಲಿ ಅಡುಗೆ ಮಾಡಿಕೊಳ್ಳುವುದೆಂದರೆ ಕೆಲವರಿಗೆ ಇಷ್ಟ, ಹಲವರಿಗೆ ಕಷ್ಟ. ಆದರೆ ಕಡಿಮೆ ಸಮಯದಲ್ಲಿ, ರುಚಿಯಾದ ಮತ್ತು ಪೌಷ್ಟಿಕವಾದ ಏನನ್ನಾದರೂ ತಯಾರಿಸಲು ಸಾಧ್ಯವಾದರೆ ಹೆಚ್ಚಿನವರಿಗೆ ಅಡುಗೆಯೆಂದರೆ ರೇಜಿಗೆ ಹುಟ್ಟುವುದಿಲ್ಲ. ಆದರೆ ಕಡಿಮೆ ಸಮಯದಲ್ಲಿ ಇವೆಲ್ಲವೂ ಆಗಬೇಕು ಎನ್ನುವಾಗ, ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಹುಟ್ಟುತ್ತದೆ. ಇಂಥ ಕೆಲಸಗಳಿಗೆ ಸಹಕಾರಿಯಾಗಿ ಒದಗುವುದು ಈರುಳ್ಳಿ ಸೊಪ್ಪು (Spring Onions). ರುಚಿ, ಸತ್ವ ಮತ್ತು ಸುಲಭ- ಈ ಮೂರನ್ನೂ ಸಾಧಿಸುವುದಕ್ಕೆ ಉಪಯುಕ್ತವೆಂದರೆ ಈರುಳ್ಳಿ ಸೊಪ್ಪು (Benefits of Spring Onions) ಅಥವಾ ಸ್ಪ್ರಿಂಗ್ ಆನಿಯನ್.
ಲಘುವಾದ ಘಾಟು, ಬಹಳಷ್ಟು ರುಚಿ ಮತ್ತು ಸತ್ವಗಳನ್ನು ಹೊಂದಿರುವ ಈ ಸೊಪ್ಪಿನಂಥ ತರಕಾರಿಯನ್ನು ಬಳಸುವುದು ಕಷ್ಟವಲ್ಲ. ಸೊಪ್ಪಿನಂತೆ ಕಂಡರೂ, ಉಳಿದೆಲ್ಲ ಸೊಪ್ಪುಗಳಂತೆ ಬಿಡಿಸಿ, ಸ್ವಚ್ಛಗೊಳಿಸುವ ತಾಪತ್ರಯವಿಲ್ಲ. ಈರುಳ್ಳಿಯಂತೆ ಕಂಡರೂ, ಗಡ್ಡೆಯಲ್ಲ. ಸೂಪ್, ಸಲಾಡ್‌ಗಳಿಂದ ಹಿಡಿದು, ಪಲ್ಯ, ಪಲಾವ್‌ಗಳವರೆಗೆ ತರಹೇವಾರಿ ಅಡುಗೆಗಳಿಗೆ ಇದು ಹೊಂದಿಕೊಳ್ಳಬಲ್ಲದು; ರುಚಿಯನ್ನು ಹೆಚ್ಚಿಸಬಲ್ಲದು. ಏನಿದರ ಸತ್ವಗಳು ಎಂಬುದನ್ನು ತಿಳಿಯೋಣ.
ಈ ಸುದ್ದಿಯನ್ನೂ ಓದಿ: Health Tips: ಜೀರಿಗೆ ನೀರಿಗೆ, ನಿಂಬೆ ರಸ ಬೆರೆಸಿ ಕುಡಿದ್ರೆ ಎಷ್ಟೆಲ್ಲಾ ಆರೋಗ್ಯ ಲಾಭ ಇದೆ ಗೊತ್ತಾ?
ದೃಷ್ಟಿಗೆ ಪೂರಕ: ಈ ಹಸಿರು ಬಣ್ಣದ ಈರುಳ್ಳಿಯಲ್ಲಿ ವಿಟಮಿನ್ ಎ ಅಂಶ ಭರಪೂರ ಇದೆ. ಇದು ದೃಷ್ಟಿಯ ಆರೋಗ್ಯಕ್ಕೆ ಪೂರಕ. ಜತೆಗೆ ಕೆರೋಟಿನಾಯ್ಡ್‌ಗಳು ಅದರಲ್ಲೂ ಪ್ರಮುಖವಾಗಿ ಲೂಟಿನ್ ಮತ್ತು ಝೆಕ್ಸಾಂಥಿನ್ ಅಂಶಗಳು ಸಾಕಷ್ಟಿವೆ. ಈ ಸತ್ವಗಳು ವಯಸ್ಸಾಗುತ್ತಿದ್ದಂತೆ ದೃಷ್ಟಿ ಮಂದವಾಗುವ ಭೀತಿಯನ್ನು ದೂರ ಮಾಡಬಲ್ಲವು. ವಿಟಮಿನ್ ಎ ಅಂಶವು ಕಣ್ಣಿನ ಆರೋಗ್ಯಕ್ಕೆ ಮಾತ್ರವೇ ಅಲ್ಲ, ಚರ್ಮ ಮತ್ತು ಕೂದಲನ್ನೂ ಹೊಳಪಾಗಿಸಬಲ್ಲವು.
ರೋಗಗಳು ದೂರ: ಮಾರಕ ರೋಗಗಳು, ಅದರಲ್ಲೂ ಮುಖ್ಯವಾಗಿ ಕ್ಯಾನ್ಸರ್‌ನಂಥವು ಹತ್ತಿರ ಬಾರದಂತೆ ತಡೆಯುವ ಸತ್ವಗಳು ಈರುಳ್ಳಿ ಸೊಪ್ಪಿನಲ್ಲಿವೆ. ಇದರಲ್ಲಿರುವ ಫ್ಲೆವನಾಯ್ಡ್ ಮತ್ತು ಅಲೈಲ್ ಸಲ್ಫೈಡ್‌ಗಳು ಕ್ಯಾನ್ಸರ್ ಕೋಶಗಳು ಬೆಳೆಯಲು ಪೂರಕವಾಗ ಕಿಣ್ವಗಳನ್ನು ತಡೆಯುತ್ತವೆ. ಹಾಗಾಗಿ ಸುಲಭದಲ್ಲಿ ದೇಹಕ್ಕೆ ಅತ್ಯಂತ ಉಪಯುಕ್ತವಾದ ಸತ್ವಗಳನ್ನು ಪಡೆಯಲು ತಿನ್ನಲೇಬೇಕಾದ ಸೊಪ್ಪು ಅಥವ ತರಕಾರಿಯಿದು.
ಜೀರ್ಣಕಾರಿ: ಈರುಳ್ಳಿ ಸೊಪ್ಪು ಅಥವಾ ಈರುಳ್ಳಿ ಹೂವಿನಲ್ಲಿ ನಾರಿನಂಶ ವಿಪುಲವಾಗಿದೆ. ಅದರಲ್ಲೂ ಕರಗದಿರುವ ನಾರಿನಂಶವು ಮಲಬದ್ಧತೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ, ಆಸಿಡಿಟಿ, ಗ್ಯಾಸ್ಟ್ರಿಕ್ ತೊಂದರೆಗಳು, ಅಜೀರ್ಣ ಮುಂತಾದವನ್ನು ತಹಬಂದಿಗೆ ತರಲು ನೆರವಾಗುತ್ತದೆ. ಇದರಲ್ಲಿರುವ ನಾರಿನಂಶವು ಆಹಾರ ಪಚನವಾಗಲು ಸಹಾಯ ಮಾಡುತ್ತದೆ. ಹಾಗಾಗಿ ಜೀರ್ಣಾಂಗಗಳ ಸಮಸ್ಯೆ ಇರುವವರು ದಿನವೂ ಅಲ್ಪ ಪ್ರಮಾಣದಲ್ಲಿ ಈರುಳ್ಳಿ ಹೂವುಗಳನ್ನು ತಿನ್ನುವುದು ಉಪಯುಕ್ತ. ಇದನ್ನು ಹಸಿಯಾಗಿ, ಬೇಯಿಸಿ, ಹುರಿದು ಮುಂತಾದ ಯಾವುದೇ ರೂಪದಲ್ಲೂ ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ಮೂಳೆಗಳು ಸದೃಢ: ಈ ಸೊಪ್ಪಿನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಸತ್ವಗಳಿವೆ. ಇವು ಮೂಳೆಗಳು ಬಲಗೊಳ್ಳಲು ಸಹಕಾರಿ. ಮೂಳೆಗಳ ಸಾಂದ್ರತೆಯನ್ನು ಕಾಪಾಡುವಲ್ಲಿ ವಿಟಮಿನ್ ಕೆ ಮುಖ್ಯವಾಗಿ ಬೇಕಾಗುತ್ತದೆ. ವಿಟಮಿನ್ ಸಿ ಹೆಚ್ಚಾದಷ್ಟೂ ಕೊಲಾಜಿನ್ ಉತ್ಪಾದನೆಗೆ ಅನುಕೂಲ. ಮೂಳೆಗಳ ಮತ್ತು ಕೀಲುಗಳ ಶಕ್ತಿ ವರ್ಧಿಸುವಲ್ಲಿ ಕೊಲಾಜಿನ್ ಅಗತ್ಯವಾಗಿದೆ. ವಿಟಮಿನ್ ಸಿ ಮತ್ತು ಕೊಲಾಜಿನ್ ಹೆಚ್ಚಿರುವ ಆಹಾರಗಳಿಂದ ಚರ್ಮ ಮತ್ತು ಕೂದಲಿನ ಕಾಂತಿಯನ್ನೂ ವೃದ್ಧಿಸಿಕೊಳ್ಳಬಹುದು.
ಹೃದಯದ ಮಿತ್ರ: ಪೊಟಾಶಿಯಂ ಅಂಶವು ಇದರಲ್ಲಿ ನೈಸರ್ಗಿಕವಾಗಿಯೇ ಹೆಚ್ಚಿದೆ. ಇದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸುವುದು ಕಷ್ಟವಲ್ಲ. ಜೊತೆಗೆ, ದೇಹದಲ್ಲಿ ಅನಾರೋಗ್ಯಕರ ಕೊಬ್ಬನ್ನು ನಿಯಂತ್ರಿಸಿ, ಆರೋಗ್ಯಕರ ಕೊಬ್ಬಿನ ಪ್ರಮಾಣವನ್ನಿದು ಹೆಚ್ಚಿಸುತ್ತದೆ. ಹೃದಯದ ಸ್ನಾಯುಗಳ ಚೈತನ್ಯಕ್ಕೂ ಇದು ನೆರವಾಗುತ್ತದೆ. ಈ ಎಲ್ಲ ಕಾರಣಗಳಿಂದ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂಥ ತೊಂದರೆಗಳು ಹತ್ತಿರ ಬಾರದಂತೆ ನಮ್ಮನ್ನು ಕಾಪಾಡುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಈರುಳ್ಳಿ ಸೊಪ್ಪುಗಳನ್ನು ನಿತ್ಯ ಆಹಾರದಲ್ಲಿ ಮಿತವಾಗಿಯೇ ಸೇರಿಸಿಕೊಳ್ಳಿ, ಆರೋಗ್ಯವಂತರಾಗಿ.