ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stomach problems: ಹಬ್ಬದೂಟದಿಂದ ಹೊಟ್ಟೆ ಭಾರವೇ? ಇಲ್ಲಿದೆ ಮನೆಮದ್ದು!

ನವರಾತ್ರಿ ಎಂದರೆ ಹಬ್ಬದ ಸಾಲು… ಊಟದಲ್ಲಿ ಸಿಹಿಗಳದ್ದೇ ಸಿಂಹಪಾಲು. ಉಪವಾಸ ಮಾಡು ವವರಿಗೂ ನಂತರ ಭರ್ಜರಿ ಊಟ. ಶಾರದೆ ಸ್ಥಾಪಿಸಿದರೆ ದಿನಕ್ಕೊಂದು ಭಕ್ಷ್ಯದ ನೈವೇದ್ಯ. ಗೊಂಬೆ ಕೂರಿಸಿದರೆ ದಿನಕ್ಕೊಂದು ರೀತಿಯ ಗೊಂಬೆ ತಿಂಡಿ. ತಿನ್ನುವುದೇನೊ ಸರಿ, ಅದನ್ನು ಅರಗಿಸಬೇಕಲ್ಲ. ಪರಿಣಾಮ ವಾಗಿ ಹೊಟ್ಟೆ ಭಾರವಾಗುವುದು, ಹೊಟ್ಟೆ ಉಬ್ಬರಿಸುವುದು, ಹುಳಿತೇಗು, ಆಸಿಡಿಟಿ, ಅಜೀರ್ಣದಂಥ ತೊಂದರೆಗಳು ಕಾಟ ಕೊಡುತ್ತವೆ.ಸಾಲು ಹಬ್ಬಗಳ ನಡುವೆಯೂ ಹೊಟ್ಟೆ ಹಾಳಾಗದಂತೆ ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿವೆ ಒಂದಿಷ್ಟು ಮನೆಮದ್ದುಗಳು

ನವದೆಹಲಿ: ನವರಾತ್ರಿ ಎಂದರೆ ಹಬ್ಬದ ಸಾಲು… ಊಟದಲ್ಲಿ ಸಿಹಿಗಳದ್ದೇ ಸಿಂಹಪಾಲು. ಉಪವಾಸ ಮಾಡುವವರಿಗೂ ನಂತರ ಭರ್ಜರಿ ಊಟ. ಶಾರದೆ ಸ್ಥಾಪಿಸಿದರೆ ದಿನಕ್ಕೊಂದು ಭಕ್ಷ್ಯದ ನೈವೇದ್ಯ. ಗೊಂಬೆ ಕೂರಿಸಿದರೆ ದಿನಕ್ಕೊಂದು ರೀತಿಯ ಗೊಂಬೆ ತಿಂಡಿ. ಇವೆಲ್ಲದರ ಫಲವೆಂದರೆ ದೇವರ ಹೆಸರಲ್ಲಿ ಮನೆಮಂದಿಗೆ ರಸಕವಳ. ತಿನ್ನುವುದೇನೊ ಸರಿ, ಅದನ್ನು ಅರಗಿಸಬೇಕಲ್ಲ. ಎಲ್ಲರ ಪಚನ ಶಕ್ತಿಯೂ ಒಂದೇಸಮ ಇರುವುದಿಲ್ಲ. ಪರಿಣಾಮ ವಾಗಿ ಹೊಟ್ಟೆ ಭಾರವಾಗುವುದು, ಹೊಟ್ಟೆ ಉಬ್ಬರಿಸುವುದು, ಹುಳಿತೇಗು, ಆಸಿಡಿಟಿ, ಅಜೀರ್ಣದಂಥ ತೊಂದರೆಗಳು (Problems eating Festive food) ಕಾಟ ಕೊಡುತ್ತವೆ. ಹಬ್ಬ ಮುಗಿಯುವಷ್ಟರಲ್ಲಿ ಹೊಟ್ಟೆಯೇ ಹಾಳಾದಂಥ ಅವಸ್ಥೆಗೆ ಬಂದು ತಲುಪುತ್ತೇವೆ. ಸಾಲು ಹಬ್ಬಗಳ ನಡುವೆಯೂ ಹೊಟ್ಟೆ ಹಾಳಾಗದಂತೆ ಕಾಪಾಡಿ ಕೊಳ್ಳುವುದು ಹೇಗೆ? ಇಲ್ಲಿವೆ ಒಂದಿಷ್ಟು ಮನೆಮದ್ದುಗಳು

ಜೀರಿಗೆ: ನೈಸರ್ಗಿಕವಾಗಿ ಹೊಟ್ಟೆಯಲ್ಲಿರುವ ವಾಯುವನ್ನು ನಿರ್ಮೂಲಗೊಳಿಸಿ, ಜೀರ್ಣಕ್ರಿಯೆ ಯನ್ನು ಸರಾಗ ಮಾಡುವಂಥ ವಸ್ತುವಿದು. ಜೀರಿಗೆಯನ್ನು ಚಹಾದಂತೆ ಡಿಕಾಕ್ಷನ್‌ ತೆಗೆದು ಕುಡಿಯಬಹುದು. ಪುಡಿ ಮಾಡಿ ಕಷಾಯ ಮಾಡಿಕೊಳ್ಳಬಹುದು. ಜೀರಿಗೆ ಪುಡಿಯನ್ನು ಬಿಸಿಯಾದ ಅನ್ನಕ್ಕೆ ಸ್ವಲ್ಪವೇ ತುಪ್ಪ ಮತ್ತು ಚಿಟಿಕೆ ಉಪ್ಪು ಸೇರಿಸಿ ಊಟ ಮಾಡಬಹುದು. ಅಂತೂ ಯಾವುದೇ ರೀತಿಯಲ್ಲಿ ಜೀರಿಗೆಯನ್ನು ಸೇವಿಸಿದರೂ ಹೊಟ್ಟೆಯ ತೊಂದರೆಗಳಿಗೆ ಉಪಶಮನ ದೊರೆಯುತ್ತದೆ

ಪೆಪ್ಪರ್‌ಮಿಂಟ್‌ ಚಹಾ: ಪೆಪ್ಪರ್‌ಮಿಂಟ್‌ನಲ್ಲಿರುವ ಮೆಂಥಾಲ್‌ ಅಂಶವು ಜೀರ್ಣಾಂಗಗಳ ಸ್ನಾಯುಗಳನ್ನು ವಿಕಸನಗೊಳಿಸುತ್ತದೆ. ಇದರಿಂದ ಹೊಟ್ಟೆ ಭಾರವಾಗಿ, ಉಬ್ಬರಿಸಿದಂತಾಗಿದ್ದರೆ ಅಥವಾ ಹೊಟ್ಟೆ ನೋವಿದ್ದರೆ ಕಡಿಮೆಯಾಗುತ್ತದೆ. ಊಟವಾದ ಸ್ವಲ್ಪ ಹೊತ್ತಿನಲ್ಲಿ ಒಂದು ಕಪ್‌ ಹದ ಬಿಸಿಯಾದ ಪೆಪ್ಪರ್‌ಮಿಂಟ್‌ ಚಹಾ ಹೀರುವುದು ಆರಾಮ ನೀಡುತ್ತದೆ

ಶುಂಠಿ: ಇದನ್ನು ಹಲವು ರೀತಿಗಳಲ್ಲಿ ಉಪಯೋಗಿಸಬಹುದು. ಜೀರ್ಣಾಂಗಗಳಿಗೆ ಆರಾಮ ನೀಡಿ, ಅಜೀರ್ಣವಾಗದಂತೆ ಕಾಪಾಡುವ ಸಾಮರ್ಥ್ಯ ಇದರದ್ದು. ಶುಂಠಿ ಚಹಾ ಮಾಡಬಹುದು, ಕಷಾ ಯದಂತೆ ಸೇವಿಸಬಹುದು, ಮಜ್ಜಿಗೆಯಲ್ಲಿ ನೆನೆಸಿ ಒಣಗಿಸಿಟ್ಟುಕೊಂಡು ಕ್ಯಾಂಡಿಗಳಂತೆ ಚೀಪ ಬಹುದು, ಭಾವನಾಶುಂಠಿ ಎಂಬ ಹೆಸರಿನಲ್ಲಿ ಆಯುರ್ವೇದ ಅಂಗಡಿಗಳಲ್ಲಿ ಇರುವುದನ್ನು ಉಪಯೋಗಿಸಬಹುದು, ಹಸಿ ಶುಂಠಿಯನ್ನೇ ಅಡುಗೆಯಲ್ಲಿ ಸ್ವಲ್ಪ ಹೆಚ್ಚು ಬಳಸಬಹುದು. ಹೇಗೆ ಬಳಸಿದರೂ ಅದು ತನ್ನ ಪರಿಣಾಮವನ್ನು ಬೀರುತ್ತದೆ.

ಸೋಂಪು: ಊಟವಾದ ನಂತರ ಜಗಿಯುವುದಕ್ಕೆ ಸೋಂಪು ಬಳಸುವ ಪದ್ಧತಿ ಸಾಮಾನ್ಯವಾಗಿ ದೇಶದ ಉದ್ದಗಲಕ್ಕೆ ಚಾಲ್ತಿಯಲ್ಲಿದೆ. ಊಟದ ನಂತರ ತಾಂಬೂಲ ಸೇವಿಸುವಷ್ಟೇ ಇದು ಸಹ ಜನಪ್ರಿಯ. ಸೋಂಪು ಸಹ ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ. ವಾಯು ತುಂಬಿ ಡುಮ್ಮಗಾದ ಹೊಟ್ಟೆಯನ್ನು ಸಹಜ ಸ್ಥಿತಿಗೆ ತರುತ್ತದೆ. ಸೋಂಪು ಜಗಿಯುವುದು ಇಷ್ಟವಾಗದಿದ್ದರೆ ಅದರ ಚಹಾ ಸಹ ಪ್ರಯೋಜನಕಾರಿ

ಪ್ರೊಬಯಾಟಿಕ್:‌ ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳನ್ನು ಕಾಪಾಡಲು ಪ್ರೊಬ ಯಾಟಿಕ್‌ ಕಿಣ್ವಗಳ ಅಗತ್ಯವಿರುತ್ತದೆ. ಹಾಗಾಗಿ ಮೊಸರು, ಮಜ್ಜಿಗೆಯಂಥವು ಅಗತ್ಯವಾಗಿ ಬೇಕಾಗುತ್ತವೆ. ಇವುಗಳ ಜೊತೆಗೆ ಇಂಗು, ಜೀರಿಗೆ ಪುಡಿ ಅಥವಾ ಶುಂಠಿ ರಸ ಇತ್ಯಾದಿಗಳನ್ನು ಸೇರಿಸಿಕೊಂಡರೆ ಇನ್ನೂ ಉತ್ತಮ ಪರಿಣಾಮ ಪಡೆಯಬಹುದು

ಅಗಿದು ತಿನ್ನುವುದು: ಅವಸರದಲ್ಲಿ ಅಗಿಯದೆ ನುಂಗುವುದು ಬಹಳಷ್ಟು ಜನರ ಅಭ್ಯಾಸ. ಹೀಗೆ ಮಾಡುವಾಗ ಆಹಾರದ ಜೊತೆಗೆ ಸಾಕಷ್ಟು ಗಾಳಿಯೂ ಹೊಟ್ಟೆ ಸೇರುತ್ತದೆ. ಜಠರವನ್ನು ಬುಡಮೇಲು ಮಾಡುವುದಕ್ಕೆ ಇಷ್ಟು ಸಾಕಾಗುತ್ತದೆ. ಹಾಗಾಗಿ ನಿಧಾನವಾಗಿ ಅಗಿದು ತಿನ್ನುವುದರಿಂದಲೂ ಜೀರ್ಣಕ್ರಿಯೆಯನ್ನು ಸುಧಾರಿಸಬಹುದು

ನಿಂಬೆ ನೀರು: ಬೆಚ್ಚಿನ ನೀರಿಗೆ ಒಂಚು ಚಮಚ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದಲೂ ಜೀರ್ಣಾಂಗಗಳನ್ನು ಚುರುಕು ಮಾಡಬಹುದು. ಕೆಲವರಿಗೆ ಚಿಟಿಕೆ ಸೈಂಧವ ಲವಣವನ್ನು ಬೆರೆಸಿ ಕುಡಿಯುವ ಅಭ್ಯಾಸವೂ ಇರುತ್ತದೆ. ಇದಕ್ಕೆ ಜೇನುತುಪ್ಪ ಇತ್ಯಾದಿಗಳನ್ನು ಬೆರೆಸುವ ಅಗತ್ಯವಿಲ್ಲ. ಇದಿಷ್ಟೇ ಅಲ್ಲ, ದಿನವಿಡೀ ಚೆನ್ನಾಗಿ ನೀರು ಕುಡಿಯುವುದೂ ಅಗತ್ಯ. ದೇಹಕ್ಕೆ ನೀರು ಸಾಕಾಗದಿದ್ದರೂ ಜೀರ್ಣಕ್ರಿಯೆ ಏರುಪೇರಾಗುತ್ತದೆ.

ಇದನ್ನು ಓದಿ:Egg Health Benefits: ಒಂದು ಮೊಟ್ಟೆಯಲ್ಲಿ ಎಷ್ಟು ಪ್ರೊಟೀನ್‌ ದೊರೆಯುತ್ತದೆ?

ಆಹಾರ, ವ್ಯಾಯಾಮ: ಕೆಲವು ಆಹಾರಗಳು ಹೆಚ್ಚು ವಾಯುಕಾರಕವಾಗಿರುತ್ತವೆ. ಉದಾ, ಕಾಳುಗಳು, ಎಲೆಕೋಸು, ಆಲೂಗಡ್ಡೆ ಮುಂತಾದವು. ಹೊಟ್ಟೆ ಸರಿಯಿಲ್ಲ ಎನ್ನುವಾಗ ಇಂಥ ಆಹಾರಗಳನ್ನು ಅಗತ್ಯವಾಗಿ ದೂರ ಇಡಿ. ಸೋಡಾದಂಥ ಪೇಯಗಳು ಸಹ ಪರಿಸ್ಥಿತಿಯನ್ನು ಹದಗೆಡಿಸಬಹುದು. ಅತಿಯಾಗಿ ಸಿಹಿ ತಿನ್ನುವುದು ಮತ್ತು ಸಿಕ್ಕಾಪಟ್ಟೆ ನಾರು ತಿನ್ನುವುದರಿಂದಲೂ ಪಚನಕ್ರಿಯೆ ಬುಡಮೇಲಾಗುತ್ತದೆ. ಹಬ್ಬವೆಂದು ವ್ಯಾಯಾಮಕ್ಕೆ ರಜೆ ನೀಡಬೇಕೆಂದಿಲ್ಲ. ಊಟದ ನಂತರ ಕೊಂಚ ವಾಕಿಂಗ್‌, ಸಂಜೆ ಅಥವಾ ಬೆಳಗಿನ ಹೊತ್ತಿನ ಮಾಮೂಲಿ ವ್ಯಾಯಾಮಗಳನ್ನು ಬಿಡಬೇಡಿ. ಎಷ್ಟೇ ಪುರುಸೊತ್ತಿಲ್ಲ ಎಂಬ ಕಾರಣ ಹೇಳಿದರೂ, ವ್ಯಾಯಾಮಕ್ಕೆ ಸ್ವಲ್ಪವಾದರೂ ಸಮಯ ತೆಗೆಯಲೇಬೇಕು.