ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Benifits of Yam: ಚಿನ್ನದಂಥಾ ಸುವರ್ಣ ಗಡ್ಡೆಯನ್ನು ತಿಂದವನೇ ಗಟ್ಟಿ

ನಾವು ಪ್ರತಿದಿನ ಬಳಸುವ ಕೆಲವು ಆಹಾರ ಪದಾರ್ಥಗಳಲ್ಲಿ ನಾನಾ ಆರೋಗ್ಯ ಪ್ರಯೋಜನಗಳ ಇರುತ್ತದೆ. ಆದರೆ ಅದರ ಬಗ್ಗೆ ಅನೇಕರಿಗೆ ತಿಳಿದೇ ಇರೋದಿಲ್ಲ. ಅಂತಹ ಆಹಾರ ಪದಾರ್ಥಗಳಲ್ಲಿ ಸುವರ್ಣ ಗಡ್ಡೆಯು ಒಂದಾಗಿದ್ದು, ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ

ಸುವರ್ಣ ಗಡ್ಡೆ

ಬೆಂಗಳೂರು: ಗಡ್ಡೆ-ಗೆಣಸುಗಳ ಕಾಲವಿದು. ಮಳೆಗಾಲದಲ್ಲಿ(Rainy Season) ಭೂಮಿಯೊಳಗೆ ಸೊಂಪಾಗಿ ಬೆಳೆದ ಬಹಳಷ್ಟು ಗಡ್ಡೆಗಳನ್ನು ಈಗ ತೆಗೆದು ಬಳಸಲಾಗುತ್ತದೆ. ಅರಿಶಿನ, ಸಿಹಿ ಗೆಣಸು, ಮರಗೆಣಸು, ಸುವರ್ಣ ಗಡ್ಡೆ(Elephant Foot Yam) ಮುಂತಾದವು ಈಗ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇವುಗಳಲ್ಲಿ ಸುವರ್ಣ ಗಡ್ಡೆಯನ್ನು ಕೃಷಿ ಮಾಡುವುದಕ್ಕಿಂತ, ಅದು ತನ್ನಷ್ಟಕ್ಕೆ ಬೆಳೆಯುವುದೇ ಹೆಚ್ಚು. ಕಾಡು, ಬೆಟ್ಟದಂಥ ಜಾಗಗಳಲ್ಲಿ ಬೆಳೆಯುವ ಕಾಡು ಸುವರ್ಣ ಗಡ್ಡೆಯನ್ನು ಸಾಮಾನ್ಯವಾಗಿ ಮಳೆಗಾಲದಲ್ಲಿ ತೆಗೆಯಲಾಗುತ್ತದೆ. ಆದರೆ ಮನೆ ಬದಿಯ ಹಿತ್ತಲುಗಳಲ್ಲಿ ಬೆಳೆಯುವ ಆನೆ ಕಾಲಿನಂತೆ ಕಾಣುವ ಸಾಮಾನ್ಯ ಸುವರ್ಣ ಗಡ್ಡೆಯನ್ನು ಮಣ್ಣಿಂದ ತೆಗೆಯುವುದು ದೀಪಾವಳಿಯ ಹಿಂದೆ-ಮುಂದೆ ಅಥವಾ ಚಳಿಗಾಲದ(Winter Season) ಆರಂಭದಲ್ಲಿ. ಹಲವು ರೀತಿಯ ಅಡುಗೆಗಳಿಗೆ ಇದನ್ನು ಬಳಸಲಾಗುತ್ತದೆ. ಸಾಂಬಾರ್‌, ಪಲ್ಯ, ಕೂಟು, ಬಾಜಿ, ಪೋಡಿ, ಬಜ್ಜಿ ಮುಂತಾಗಿ ಯಾವುದೇ ಪಕ್ವಾನ್ನಕ್ಕೂ ಹೊಂದಿಕೊಳ್ಳಬಲ್ಲ ರುಚಿ ಇದರದ್ದು. ಏನಿದರ ಸೇವನೆಯ ಲಾಭಗಳು(Benifits of Yam) ಎಂಬುದನ್ನು ನೋಡೋಣ.

ಮಧುಮೇಹಿಗಳಿಗೆ ಅನುಕೂಲ:

ಸುವರ್ಣ ಗಡ್ಡೆಯಲ್ಲಿರುವ ಅಲ್ಲನ್‌ಟೋನ್‌ ಎಂಬ ರಾಸಾಯನಿಕವು ಮಧುಮೇಹಿಗಳಿಗೆ ಅಗತ್ಯವಾದಂಥ ಪರಿಣಾಮವನ್ನು ನೀಡಬಲ್ಲದು ಎಂಬುದನ್ನು ವೈಜ್ಞಾನಿಕ ಪ್ರಯೋಗಗಳು ಹೇಳುತ್ತವೆ. ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಳಿತ ಆಗದಂತೆ ನಿರ್ವಹಿಸುವ ಸಾಧ್ಯತೆ ಈ ರಾಸಾಯನಿಕಕ್ಕಿದೆ. ಇದರಲ್ಲಿ ನಾರಿನಂಶವೂ ಹೇರಳವಾಗಿದ್ದು, ಗ್ಲೈಸೆಮಿಕ್‌ ಸೂಚಿಯೂ ಕಡಿಮೆಯೇ ಇದೆ. ಹಾಗಾಗಿ ಸಕ್ಕರೆ ಕಾಯಿಲೆ ಇದ್ದವರಿಗೆ ಇದು ಸೇವಿಸಲು ಸೂಕ್ತವಾದಂಥ ಆಹಾರ.


ಕ್ಯಾನ್ಸರ್‌ ತಡೆ:

ಇದರಲ್ಲಿರುವ ಎಲ್‌-ಆರ್ಜಿನೈನ್‌ ಎಂಬ ಸಂಯುಕ್ತವು ಕೆಲವು ರೀತಿಯ ಕ್ಯಾನ್ಸರ್‌ ಭೀತಿಯನ್ನು ದೂರ ಮಾಡುತ್ತದೆ. ಕ್ಯಾನ್ಸರ್‌ಗೆ ಪ್ರತಿಯಾಗಿ ದೇಹಕ್ಕೆ ಅಗತ್ಯವಾದ ಪ್ರತಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ಅಂದರೆ, ಇದರಿಂದ ಕ್ಯಾನ್ಸರ್‌ ಗುಣವಾಗುತ್ತದೆ ಎಂದಲ್ಲ. ಆದರೆ ಚಿಕಿತ್ಸೆಯ ಸಂದರ್ಭದಲ್ಲಿ ದೇಹಕ್ಕೆ ಕೆಲವು ಅಗತ್ಯವಾದ ಅಂಶಗಳನ್ನು ಒದಗಿಸಬಲ್ಲದು.

ಈ ಸುದ್ದಿಯನ್ನು ಓದಿ: Ratan Tata: ರತನ್ ಟಾಟಾ ಪುಣ್ಯತಿಥಿ; ಕೈಗಾರಿಕೋದ್ಯಮಿಯ ಯಶೋಗಾಥೆಯ ಒಂದು ಮೆಲುಕು


ತೂಕ ಇಳಿಕೆಗೆ:

ಇದರಲ್ಲಿರುವ ಫ್ಲೆವನಾಯ್ಡ್‌ ಅಂಶಗಳು ಬೊಜ್ಜು ಕಡಿಮೆ ಮಾಡುವ ಗುಣವನ್ನು ಹೊಂದಿವೆ. ಇದರಲ್ಲಿರುವ ನಾರು ಮತ್ತು ಸಂಕೀರ್ಣ ಪಿಷ್ಟಗಳು ಸಹ ದೇಹದಲ್ಲಿ ಕೊಬ್ಬು ಶೇಖರವಾಗದಂತೆ ತಡೆಯುವಲ್ಲಿ ನೆರವಾಗುತ್ತವೆ. ಸೇವಿಸಿದ ನಂತರ ಬಹಳ ಹೊತ್ತಿನವರೆಗೆ ಹಸಿವಾಗದಂತೆ ತಡೆಯುವ ಸುವರ್ಣ ಗಡ್ಡೆಯು ತೂಕ ಇಳಿಸುವವರಿಗೂ ಅನುಕೂಲ ಒದಗಿಸುತ್ತದೆ.


ಉತ್ಕರ್ಷಣ ನಿರೋಧಕ:

ಹಲವು ರೀತಿಯ ಫ್ಲೆವನಾಯ್ಡ್‌ಗಳು ಇರುವುದರಿಂದ ದೇಹದಲ್ಲಿನ ಉರಿಯೂತ ತಗ್ಗಿಸಲು ಇವು ನೆರವಾಗುತ್ತವೆ. ದೇಹದಲ್ಲಿ ಉತ್ಕರ್ಷಣೆಯ ಅಂಶ ನಶಿಸಿದಷ್ಟೂ, ಮಾರಕ ರೋಗಗಳನ್ನು ದೂರ ಮಾಡಬಹುದು. ಕರುಳಿನ ಕ್ಯಾನ್ಸರ್‌ನ ಭೀತಿ ದೂರ ಮಾಡಲು ಈ ಗಡ್ಡೆ ನೆರವಾಗುತ್ತದೆ ಎನ್ನುತ್ತವೆ ಅಧ್ಯಯನಗಳು

ಋತುಬಂಧದ ದಿನಗಳಲ್ಲಿ ನೆರವು:

ರಜೋನಿವೃತ್ತಿಯ ದಿನಗಳು ಸವಾಲಿನವು. ಮುಖ ಕೆಂಪೇರಿ ಮೈ ಬಿಸಿಯಾಗುವುದು, ನಿದ್ರಾಹೀನತೆ, ಮೂಡ್‌ ಬದಲಾವಣೆ ಮುಂತಾದವೆಲ್ಲ ಒಟ್ಟಿಗೆ ಅಮರಿಕೊಂಡು ತೊಂದರೆ ಕೊಡುತ್ತವೆ. ಸುವರ್ಣ ಗಡ್ಡೆಯನ್ನು ಆಗೀಗ ಸೇವಿಸುವುದು ಈಸ್ಟ್ರೊಜೆನ್‌ ಮಟ್ಟ ಸುಧಾರಿಸಿ, ಇಂಥ ಕೆಲವು ಲಕ್ಷಣಗಳಿಂದ ಉಪಶಮನ ದೊರೆಯುತ್ತದೆ. ಇದಕ್ಕಾಗಿ ಕೆಲವೆಡೆ ಸುವರ್ಣ ಗಡ್ಡೆಯ ಸತ್ವವನ್ನು ಹೊಂದಿನ ಮಾತ್ರೆಗಳೂ ದೊರೆಯುತ್ತವೆ. ಆದರೆ ಇವನ್ನೆಲ್ಲಾ ಸೇವಿಸುವುದಕ್ಕೆ ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ.

ವಿಟಮಿನ್‌ ಬಿ6:

ಕೆಲವು ಅಗತ್ಯ ಪೋಷಕಾಂಶಗಳ ಕೊರತೆಯೂ ಸಮಸ್ಯೆಗಳನ್ನು ತಂದಿಡಬಲ್ಲದು. ಬಿ6 ಜೀವಸತ್ವದ ಕೊರತೆಯೂ ಇವುಗಳಲ್ಲಿ ಒಂದು. ಸುವರ್ಣ ಗಡ್ಡೆಯನ್ನು ನಿಯಮಿತವಾಗಿ ಸೇವಿಸುವುದರಿಂದ ವಿಟಮಿನ್‌ ಬಿ6 ಕೊರತೆಯನ್ನು ಕಡಿಮೆ ಮಾಡಬಹುದು. ಆತಂಕ, ಒತ್ತಡ, ಕಿರಿಕಿರಿಯಂಥ ಮಾನಸಿನ ಸಮಸ್ಯೆಗಳು ಇದರಿಂದ ತಹಬಂದಿಗೆ ಬರುತ್ತವೆ

ರಕ್ತಹೀನತೆ:

ಫೋಲೇಟ್‌ ಮತ್ತು ಕಬ್ಬಿಣದಂಶಗಳ ಕೊರತೆಯಿಂದ ದೇಹ ರಕ್ತಹೀನತೆಗೆ ತುತ್ತಾಗುತ್ತದೆ. ಕಬ್ಬಿಣ ಮತ್ತು ಫೋಲೇಟ್‌ಗಳಿಂದ ಸಾಂದ್ರವಾದ ಸುವರ್ಣ ಗಡ್ಡೆಯನ್ನು ಆಗೀಗ ಸೇವಿಸುವುದರಿಂದ ರಕ್ತಹೀನತೆಯನ್ನು ಕಡಿಮೆ ಮಾಡಬಹುದು.

ಮೆದುಳಿಗೆ ಪೂರಕ:

ಇದರಲ್ಲಿರುವ ಮೆಗ್ನೀಶಿಯಂ, ಸತು, ಸೆಲೆನಿಯಂ ಮತ್ತು ಒಮೆಗಾ ೩ ಕೊಬ್ಬಿನಾಮ್ಲಗಳು ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತವೆ. ಮೆದುಳಿನ ನರಗಳಿಗೆ ಪೋಷಣೆ ಒದಗಿಸಿ, ನೆನಪಿನ ಶಕ್ತಿಯನ್ನು ವೃದ್ಧಿಸುತ್ತವೆ.

ಕೂದಲು, ತ್ವಚೆ…: ಇವುಗಳಿಗೆಲ್ಲಾ ಸುವರ್ಣಗಡ್ಡೆಯ ಸೇವನೆ ಲಾಭದಾಯಕ. ಕೂದಲನ್ನು ನಯವಾಗಿಸಿ ಹೊಳಪು ನೀಡುತ್ತದೆ. ಜೊತೆಗೆ, ಚರ್ಮದ ಮೇಲಿನ ಸೂಕ್ಷ್ಮ ಸುಕ್ಕುಗಳನ್ನು ನಿವಾರಿಸಿ ಕಾಂತಿಯುಕ್ತವಾಗಿಸುತ್ತದೆ. ಇದರಿಂದ ವಯಸ್ಸಾದಂತೆ ಕಾಣುವುದನ್ನು ಮುಂದೂಡಲು ಸಾಧ್ಯವಾದರೆ ಯಾಕೆ ಬೇಡ!