ಬೆಂಗಳೂರು: ನಮ್ಮ ಅಜ್ಜಿಯರ ಕಾಲದ ಹೆರಳು ಹಾಕುವ ಕ್ರಮವನ್ನೊಮ್ಮೆ ನೆನಪಿಸಿಕೊಳ್ಳಿ. ತಲೆಯ ಚರ್ಮಕ್ಕೆ, ಬೈತಲೆಗೆಲ್ಲ ಸರಿಯಾಗಿ ಎಣ್ಣೆ ಹಚ್ಚಿ, ತಲೆಯನ್ನು ಚೆನ್ನಾಗಿ ಬಾಚಿ, ಕೂದಲಿನ ಸಿಕ್ಕು ಬಿಡಿಸಿ ನಂತರ ಹೆರಳು ಹಾಕುತ್ತಿದ್ದರು. ಹೀಗೆ ಜಡೆ ಹಾಕಿದರೆ ಮಾರನೇ ದಿನ ಆ ಹೊತ್ತಿನವರೆಗೆ ಹೆರಳು ಬಿಚ್ಚುತ್ತಿರಲಿಲ್ಲ, ಭದ್ರವಾಗಿ ಹಾಗೆಯೇ ಕುಳಿತಿರುತ್ತಿತ್ತು. ಈಗಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳನ್ನು ಬಿಟ್ಟರೆ, ಉಳಿದವರಲ್ಲಿ ಎಷ್ಟು ಮಂದಿ ತಲೆ ಬಾಚುತ್ತಾರೆ ಎಂಬುದು ಚರ್ಚಾಸ್ಪದ ವಿಷಯ. ಕಾರಣ, ಒಂದೋ ಬಾಚುವಷ್ಟು ಕೂದಲು ಉಳಿದಿರುವುದಿಲ್ಲ ಅಥವಾ ಬಾಚದೆ ಕೆದಿರಿಕೊಂಡಿರುವುದು ʻಕೂಲ್ʼ ಎನಿಸುತ್ತದೆ. ಇಲ್ಲವೇ ತಲೆ ಬಾಚುವುದಕ್ಕೆಲ್ಲ ವ್ಯವಧಾನವೇ ಇರುವುದಿಲ್ಲ. ಆದರೆ ತಲೆಯನ್ನು ಚೆನ್ನಾಗಿ ಬಾಚುವುದರಿಂದ ಆರೋಗ್ಯಕ್ಕೆ ಲಾಭಗಳಿವೆ ಎನ್ನುತ್ತವೆ ಅಧ್ಯಯನಗಳು. ಏನು ಲಾಭವಿದೆ?
ತಲೆ ಬಾಚುವುದೆಂದರೆ ಕೂಲಿನ ಸಿಕ್ಕು ಬಿಡಿಸಿ, ಕೇಶಗಳನ್ನು ವ್ಯವಸ್ಥಿತಗೊಳಿಸುವುದು ಎನ್ನುವುದು ಮೇಲ್ನೋಟಕ್ಕೆ ಕಾಣುವ ಅಂಶ. ಆದರೆ ಅದಷ್ಟೇ ಅಲ್ಲ, ತಲೆಯ ಚರ್ಮದ ಮತ್ತು ಕೂದಲುಗಳ ಬುಡದ ಆರೋಗ್ಯವನ್ನು ಕಾಪಾಡುವಲ್ಲಿನ ಅಗತ್ಯ ಕೆಲಸವಿದು. ತಲೆಯ ಚರ್ಮದಲ್ಲಿ ಉತ್ಪಾದನೆಯಾಗುವ ನೈಸರ್ಗಿಕ ತೈಲದ ಅಂಶವು ಕೂದಲಿನ ಸಹಜ ಕಂಡೀಶನರ್ ರೀತಿಯಲ್ಲಿ ವರ್ತಿಸುತ್ತದೆ. ಹಾಗಾಗಿ ದಿನವೂ ಅದನ್ನು ಕೂದಲಿನ ಎಲ್ಲೆಡೆ ಹರಡುವುದು ಮುಖ್ಯ. ಅದನ್ನು ಒಂದೆಡೆ ಹಾಗೆಯೇ ಉಳಿಯಲು ಬಿಟ್ಟರೆ ತಲೆಯ ಸೋಂಕಿಗೆ ಕಾರಣವಾಗಬಹುದು. ಹಾಗಾಗಿ ತಲೆಯನ್ನು ಸಾದ್ಯಂತವಾಗಿ ಬಾಚುವುದು ಅಗತ್ಯ.
ಇನ್ನೊಂದು ಮುಖ್ಯ ಲಾಭವೆಂದರೆ ತಲೆಯ ಭಾಗಕ್ಕೆ ಹೆಚ್ಚುವ ರಕ್ತ ಸಂಚಾರ. ಇದರಿಂದ ತಲೆಯ ಚರ್ಮಕ್ಕೆ ಮತ್ತು ಕೂದಲಿನ ಬುಡಕ್ಕೆ ಹೆಚ್ಚಿನ ಪ್ರಮಾಣದ ಆಮ್ಲಜನಕ ಸರಬರಾಜಾಗುತ್ತದೆ. ಜತೆಗೆ ಸತ್ವಗಳೂ ಹೆಚ್ಚಾಗಿ ದೊರೆಯುತ್ತವೆ. ಇದಲ್ಲದೆ ಕೂದಲಿನ ಬುಡವನ್ನು ಬಾಚುವುದರಿಂದ ಮೃತಕೋಶಗಳನ್ನು ತೆಗೆದುಹಾಕಿ, ಹೊಸ ಕೋಶಗಳು ಬರುವುದಕ್ಕೆ ನೆರವಾಗುತ್ತದೆ. ಇದರಿಂದ ತಲೆಹೊಟ್ಟಿನ ಬಾಧೆಯನ್ನೂ ನಿಯಂತ್ರಣಕ್ಕೆ ತರಬಹುದು.
ಎಷ್ಟು ಬಾರಿ?
ಕೂದಲು ಬಾಚುವುದು ಅಗತ್ಯ ಎನ್ನುವುದು ಸರಿ. ಎಷ್ಟು ದಿನಕ್ಕೊಮ್ಮೆ ಅಥವಾ ದಿನಕ್ಕೆಷ್ಟು ಬಾರಿ ಕೂದಲು ಬಾಚಬೇಕು? ನೆನಪಾದಾಗೆಲ್ಲ ಬಾಚಣಿಕೆಗೆ ಕೈಯಿಕ್ಕಬೇಕೆ? ಇದಕ್ಕೊಂದು ಶಿಸ್ತು ಮಾಡಿಕೊಳ್ಳುವುದೇ… ಹೇಗೆ? ದಿನಕ್ಕೆ ಎರಡು ಬಾರಿ ಬಾಚುವುದು ಸಾಕಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಬೆಳಗಿನ ಹೊತ್ತು ಮತ್ತು ರಾತ್ರಿ ಮಲಗುವ ಮುನ್ನ ತಲೆಯನ್ನೆಲ್ಲ ಕೂಲಂಕಷವಾಗಿ ಬಾಚುವುದು ಒಳ್ಳೆಯ ಅಭ್ಯಾಸ. ಕೂದಲು ಮಿತಿಮೀರಿ ಗುಂಗುರಾಗಿದ್ದರೆ ಬಾಚುವಾಗ ಎಚ್ಚರಿಕೆ ಬೇಕಾಗುತ್ತದೆ. ಹಾಗೆಯೇ ಒದ್ದೆ ಕೂದಲನ್ನು ಎಂದಿಗೂ ಬಾಚಬೇಡಿ. ಕೂದಲು ಒದ್ದೆ ಇದ್ದಾಗ ಬೇಗನೇ ತುಂಡಾಗುತ್ತದೆ. ಹೆಚ್ಚಿನ ಸಾರಿ ಬುಡದಿಂದಲೇ ಕಿತ್ತು ಬರುತ್ತದೆ.
ಈ ಸುದ್ದಿಯನ್ನು ಓದಿ. Viral Video: ಅವಲಕ್ಕಿ ಚಿತ್ನಾನ್ನಕ್ಕೆ 500 ರೂ.! ನಟ ಗೋವಿಂದ ಪತ್ನಿಯ ಪ್ರತಿಕ್ರಿಯೆ ಹೀಗಿತ್ತು
ತಲೆಯಲ್ಲಿ ತೀರಾ ಎಣ್ಣೆಯ ಚರ್ಮವಿದ್ದರೆ, ಹೆಚ್ಚು ಸಾರಿ ಬಾಚಿದಷ್ಟಕ್ಕೂ ಚರ್ಮದಲ್ಲಿರುವ ಎಣ್ಣೆಯಂಶವನ್ನು ಎಲ್ಲೆಡೆ ಹರಡಬಹುದು. ಇದರಿಂದ ಒಂದೆಡೆ ಜಿಡ್ಡು ಜಮೆಯಾಗಿ, ಚರ್ಮದ ಆರೋಗ್ಯ ಹಾಳಾಗುವುದನ್ನು ತಪ್ಪಿಸಬಹುದು. ತಲೆ ಚರ್ಮದ ನೈಸರ್ಗಿಕ ತೈಲ ಅಥವಾ ಸೇಬಂ ಕೂದಲಿನ ಬುಡಕ್ಕೆ ಅಂಟಿಕೊಂಡಿದ್ದರೆ ಹಲವು ರೀತಿಯಲ್ಲಿ ತೊಂದರೆಗಳು ಬರಬಹುದು. ತಲೆ ಚರ್ಮದ ಉಸಿರಾಟಕ್ಕೆ ತಡೆಯಾಗುವಂತೆ, ಸೂಕ್ಷ್ಮ ರಂಧ್ರಗಳು ಮುಚ್ಚಿಹೋಗಬಹುದು. ಇದರಿಂದ ಕೂದಲಿನ ಬೆಳವಣಿಗೆ ನಿಂತು ಹೋಗಿ, ತಲೆಗೂದಲು ತೆಳ್ಳಗಾಗಬಹುದು.
ಬಾಚಣಿಕೆ ಹೇಗಿರಬೇಕು?
ಇದೂ ಒಂದು ಪ್ರಶ್ನೆಯೇ ಎಂದು ನಗಬೇಡಿ. ಕೂದಲಿನ ಸಿಕ್ಕು ಬಿಡಿಸುವ ಉದ್ದೇಶವಿದ್ದರೆ ಅಗಲವಾದ ಹಲ್ಲುಗಳಿರುವ ಬಾಚಣಿಕೆಯ ಬಳಕೆ ಸರಿ. ತಲೆಯ ಚರ್ಮದಲ್ಲಿರುವ ತೈಲದಂಶವನ್ನು ಎಲ್ಲೆಡೆ ಸಮನಾಗಿ ಹರಡುವ ಉದ್ದೇಶವಿದ್ದರೆ ಒತ್ತೊತ್ತಾಗಿ ಹಲ್ಲುಗಳಿರುವ ಬಾಚಣಿಕೆ ಬೇಕಾಗುತ್ತದೆ. ಚೂಪಾದ ಮೊನೆಗಳಿರುವ ಪ್ಲಾಸ್ಟಿಕ್ ಬಾಚಣಿಕೆಗಳಿಗಿಂತ ಮೊಂಡಾದ ತುದಿಗಳಿರುವ ಮರದ ಬಾಚಣಿಕೆಗಳು ಒಳ್ಳೆಯವು. ಆದರೀಗ ನಾನಾ ರೀತಿಯ ಹೇರ್‌ಬ್ರಷ್‌ಗಳು ಲಭ್ಯವಿದ್ದು, ಹೆಚ್ಚಿನವುಗಳ ತುದಿ ಪರಚುವಂತೆ ಇರುವುದಿಲ್ಲ. ರಕ್ತ ಸಂಚಾರಕ್ಕೂ ಅನುಕೂಲ ಮಾಡುವಂತೆ ಇರುತ್ತವೆ.