ನವದೆಹಲಿ: ಇತ್ತೀಚಿನ ದಿನದಲ್ಲಿ ವಾತಾವರಣ ಹಾಗೂ ನಾವು ಸೇವಿಸುವ ಆಹಾರದ ಮೇಲೆ ಚರ್ಮ ರೋಗದ ಸಮಸ್ಯೆಗಳು ಅನೇಕರನ್ನು ಕಾಡುತ್ತಲೇ ಇರುತ್ತದೆ. ಸೇವಿಸುವ ಆಹಾರ, ಬಳಕೆ ಮಾಡುವ ವಸ್ತು ಎಲ್ಲದರ ಮೇಲೆ ಎಷ್ಟು ನಿಗಾ ವಹಿಸಿದರೂ ಕಡಿಮೆಯೇ. ಚರ್ಮ ಸಂಬಂಧಿತ ಸೋಂಕು ಬರಬಾರದು ಎಂಬ ಕಾರಣಕ್ಕೆ ಅನೇಕರು ಬಿಸಿ ನೀರಿನಲ್ಲಿ ಸ್ನಾನ (Hot Water Baths) ಮಾಡುತ್ತಾರೆ. ಆದರೆ ಈ ಬಿಸಿ ನೀರಿನ ಸ್ನಾನ ನಿಜಕ್ಕೂ ಚರ್ಮದ ಆರೈಕೆ ಮಾಡುತ್ತದಾ? ಅಥವಾ ಚರ್ಮಕ್ಕೆ ಇದರಿಂದಾಗಿ ಏನಾದರು ಹಾನಿಯಾಗಬಹುದಾ? ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಬಿಸಿ ನೀರಿನ ಸ್ನಾನ ಮಾಡುವುದರಿಂದ ಚರ್ಮಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆ ಎದುರಾಗುತ್ತದೆ. ಚರ್ಮದ ಸೋಂಕು ಕ್ಯಾನ್ಸರ್‌ಗೂ ಕಾರಣವಾಗಬಹುದು. ಬೇಗ ವಯಸ್ಸಾಗುವಿಕೆ ಸಮಸ್ಯೆ ಕೂಡ ಬರಬಹುದು ಎಂದು ಇತ್ತೀಚಿನ ವೈದ್ಯಕೀಯ ಅಧ್ಯಯನ ತಂಡದ ವರದಿಯ ಮೂಲಕ ತಿಳಿದು ಬಂದಿದೆ.
ಬಹುತೇಕರ ಬೆಳಗ್ಗೆ ಆರಂಭ ಆಗುವುದೇ ಬೆಳಗ್ಗಿನ ಬಿಸಿ ನೀರಿನ ಸ್ನಾನದ ಮೂಲಕ ಎನ್ನಬಹುದು. ಕೆಲವರು ಬಿಸಿ ನೀರಿನ ಸ್ನಾನದಿಂದ ಆಗುವ ಪರಿಣಾಮಗಳ ಬಗ್ಗೆ ಯೋಚಿಸದೆ ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ತಮ್ಮಷ್ಟಕ್ಕೆ ತಾವೇ ನಿರ್ಧಾರ ಕೈಗೊಳ್ಳುತ್ತಾರೆ. ಆದರೆ ನಾವು ಮಾಡುವ ಸಾಮಾನ್ಯ ತಪ್ಪುಗಳಿಂದ ಚರ್ಮದ ನೈಸರ್ಗಿಕ ಅಂಶಗಳಿಗೆ ಹಾನಿಯನ್ನುಂಟು ಮಾಡಬಹುದು. ಇದು ಸೋಂಕುಗಳಿಗೂ ಕಾರಣವಾಗಿ ಅಕಾಲಿಕ ವಯಸ್ಸಾಗುವಿಕೆ, ಚರ್ಮದ ಕ್ಯಾನ್ಸರ್‌ಗೆ ಗುರಿ ಯಾಗುವಂತೆ ಮಾಡುತ್ತದೆ ಎಂದು ಚರ್ಮರೋಗ ತಜ್ಞರು ಈ ಬಗ್ಗೆ ತಿಳಿಸಿದ್ದಾರೆ.
ಬಿಸಿ ನೀರಿನ ಸ್ನಾನ ಸೂಕ್ತವೇ?
ಚರ್ಮರೋಗ ತಜ್ಞರ ಪ್ರಕಾರ ಅತಿಯಾಗಿ ಬಿಸಿ ನೀರು ಬಳಸುವುದು ಅಷ್ಟೊಂದು ಸೂಕ್ತ ಅಲ್ಲ. ತುಂಬಾ ಶಾಖ ಹೊಂದಿರುವ ಬಿಸಿನೀರು ಬಳಕೆ ಮಾಡುವುದರಿಂದ ಚರ್ಮದ ನೈಸರ್ಗಿಕ ಪೋಷಕಾಂಶ ಕಳೆಗುಂದಲಿದೆ. ಚರ್ಮವು ಇದರಿಂದ ಒಣಗುತ್ತದೆ ಮತ್ತು ದುರ್ಬಲಗೊಳ್ಳುತ್ತದೆ. ಹೀಗಾಗಿ ಚರ್ಮಕ್ಕೆ ಮಾಲಿನ್ಯಕಾರಕ ಸೋಂಕು, ತುರಿಕೆ, ಅಲರ್ಜಿ ಇತ್ಯಾದಿ ಸಮಸ್ಯೆ ಉಂಟಾಗಲಿದೆ.
ಇದನ್ನು ಓದಿ:Egg Health Benefits: ಒಂದು ಮೊಟ್ಟೆಯಲ್ಲಿ ಎಷ್ಟು ಪ್ರೊಟೀನ್ ದೊರೆಯುತ್ತದೆ?
ಈ ಬಗ್ಗೆ ಜಾಗೃತಿ ವಹಿಸಿ
- ಚರ್ಮದ ಆರೈಕೆ ಮಾಡಲು ಬಯಸುವವರು ಸೋಪಿನ ಆಯ್ಕೆಯಲ್ಲಿಯೂ ಬಹಳ ಎಚ್ಚರವಹಿಸಬೇಕು. ರಾಸಾಯನಿಕವಾಗಿದ್ದನ್ನು, ಹೆಚ್ಚಿನ ಪಿಎಚ್ ಮೌಲ್ಯಗಳನ್ನು ಹೊಂದಿರುವ ಸೋಪುಗಳನ್ನು ಬಳಸಬಾರದು. ಇವುಗಳನ್ನು ಬಳಸುವುದರಿಂದ ಚರ್ಮದ ಕಾಂತಿ ಕಳೆಗುಂದುವ ಜತೆಗೆ ಎಸ್ಜಿಮಾ ಮತ್ತು ಡರ್ಮಟೈಟಿಸ್‌ನಂತಹ ಸಮಸ್ಯೆ ಬರಲಿದೆ.
- ಅಧಿಕ ಹೊತ್ತು ಸ್ನಾನ ಮಾಡುವುದರಿಂದ ಚರ್ಮದ ತೇವಾಂಶ ಕಡಿಮೆಯಾಗುತ್ತದೆ ಮತ್ತು ಅದರ ಹೊರ ಪದರಕ್ಕೆ ಹಾನಿಯಾಗುತ್ತದೆ. ಇದು ನಿರಂತರ ಶುಷ್ಕತೆಗೆ ಕಾರಣವಾಗುತ್ತದೆ.
- ಸ್ನಾನದ ಬಳಿಕ ನೀವು ಟವಲ್‌ನಿಂದ ಚರ್ಮವನ್ನು ಬಲವಾಗಿ ಉಜ್ಜುವುದರಿಂದ ಸೂಕ್ಷ್ಮ ಭಾಗಗಳ ಸವೆತ ಉಂಟಾಗಬಹುದು. ಅಂತಹ ಸಂದರ್ಭದಲ್ಲಿ ಚರ್ಮವನ್ನು ನಿಧಾನವಾಗಿ ಒಣಗಿಸಬೇಕು.
- ಸ್ನಾನದ ನಂತರ ಮಾಯಿಶ್ಚರೈಸಿಂಗ್ ಅನ್ನು ಬಳಕೆ ಮಾಡುವುದು ಚರ್ಮದ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ. ಒರಟು ಚರ್ಮದ ಸಮಸ್ಯೆಗೆ ಮಾಯಿಶ್ಚರೈಸರ್‌ಗಳು ಉತ್ತಮ ಪರಿಣಾಮ ಬೀರುತ್ತದೆ. ಅದರೊಂದಿಗೆ ಪರಿಸರ ಮಾಲಿನ್ಯಕಾರಕಗಳ ವಿರುದ್ಧ ನಿಮ್ಮ ಚರ್ಮಕ್ಕೆ ರಕ್ಷಣೆ ಸಿಗುತ್ತದೆ.