ನವದೆಹಲಿ: ಕಾಫಿ ಪ್ರಿಯರಿಗೆ ಹೊತ್ತಾರೆ ಒಂದು ಸ್ಟ್ರಾಂಗ್ ಕಾಫಿ ಹೊಟ್ಟೆ ಸೇರದಿದ್ದರೆ ಸರಿಯಾಗಿ ಬೆಳಗೇ ಆಗುವುದಿಲ್ಲ. ಸಂಜೆಯಾಗುತ್ತಿದ್ದಂತೆ ಮತ್ತೆ ಕಾಫಿಯತ್ತ ಮನಸ್ಸು ತುಡಿಯಲು ಆರಂಭಿ ಸುತ್ತದೆ. ಇನ್ನು ಚಳಿ ದೇಶಗಳಲ್ಲಂತೂ ಕಾಫಿಯ ಅಳತೆ ಕಪ್‌ಗಳಲ್ಲಿ ಅಲ್ಲ, ಮಗ್‌ಗಳಲ್ಲಿ! ಘಂ ಎನ್ನುವ ಪರಿಮಳ ಮತ್ತು ರುಚಿಗೆ ಮನಸೋತು, ದೇಹದಲ್ಲೂ ಶಕ್ತಿ ಸಂಚಯನ ಆಗುತ್ತದೆಂಬ ನೆಪವೊಡ್ಡಿ ಆಗಾಗ ಕಾಫಿ ಕುಡಿಯುವ ಅಭ್ಯಾಸ (Drink Coffee) ಅಥವಾ ಚಟ ಮಾಡಿಕೊಂಡರೆ ಮಾತ್ರ ಕೆಲಸ ಕೆಟ್ಟಿತೆಂದೇ ಅರ್ಥ. ಕಾಫಿ ಚಟ ಆರೋಗ್ಯಕ್ಕೆ ಮಾರಕವಾಗುವ ಹಾಗೆ ಇರದಂತೆ ಏನು ಮಾಡಬಹುದು?
ಓವರ್‌ಡೋಸ್!: ಇದೇ ದೊಡ್ಡ ಸಮಸ್ಯೆ. ಬೆಳಗ್ಗೆ ಮತ್ತು ಸಂಜೆ ಮಾಮೂಲಿ ಡೋಸ್ ಕಾಫಿ; ನಡುವೆ ಮನೆಗ್ಯಾರೋ ಬಂದರು- ಅವರೊಂದಿಗೆ; ಹೊರಗೆ ಹೋದಾಗ ಫ್ರೆಂಡ್ ಸಿಕ್ಕಿದ್ದರು- ಅವ ರೊಂದಿಗೆ; ಆಫೀಸ್‌ನಲ್ಲಿ ಸಹೋದ್ಯೋಗಿ ಕಾಫಿಗೆ ಕರೆದಾಗ ಇಲ್ಲ ಎನ್ನುವುದು ಹೇಗೆ? ಇಷ್ಟರ ಲ್ಲಾಗಲೇ ಐದು ಕಪ್ ಕಾಫಿ ಹೊಟ್ಟೆ ಸೇರಿಯಾಯ್ತು. ದೇಹ ಹಾಳಾಗುವುದಕ್ಕೆ ಈ ಪ್ರಮಾಣದ ಕಾಫಿ ಬೇಕಾದಷ್ಟಾಯಿತು. ನಿದ್ದೆಗೇಡು, ಬಿಪಿ, ಹೃದ್ರೋಗ- ಯಾವುದು ಬೇಕು? ಅತ್ಯಂತ ಕಟ್ಟುನಿಟ್ಟಾಗಿ, ಏನೇ ಆದರೂ ದಿನಕ್ಕೆ ಮೂರು ಕಪ್ ಮೀರುವುದಿಲ್ಲ ಎಂಬ ನಿಶ್ಚಯ ಮಾಡಿಕೊಂಡು- ಅದರಂತೆ ನಡೆಯಿರಿ. ಅಂದಹಾಗೆ, ಕಪ್ ಅಳತೆ ಸಣ್ಣದಿದ್ದಷ್ಟೂ ಒಳ್ಳೆಯದು
ಹೆಚ್ಚು ನೀರು ಬೇಕು: ಕಾಫಿ ಕುಡಿದಷ್ಟೂ ಹೆಚ್ಚಿನ ಮೂತ್ರ ದೇಹದಿಂದ ಹೊರಹೋಗುತ್ತದೆ. ಅಂದರೆ, ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರನ್ನೂ ಒದಗಿಸಬೇಕಾಗುತ್ತದೆ. ಇಲ್ಲದಿದ್ದರೆ ಸುಸ್ತು, ಆಯಾಸ, ತಲೆನೋವು ಮುಂತಾದ ಹಲವು ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ಬೇಸಿಗೆ ಯಲ್ಲಿ ಕಾಫಿ ಮಾತ್ರ ಕುಡಿದು, ನೀರು ಸರಿಯಾಗಿ ಕುಡಿಯದಿದ್ದರೆ ಆಸ್ಪತ್ರೆ ಸೇರುವುದು ಖಚಿತ. ಹಾಗಾಗಿ ನಿರ್ಜಲೀಕರಣ ತಪ್ಪಿಸಲು ಬೇಕಾಗಿ, ಚೆನ್ನಾಗಿ ನೀರು ಕುಡಿಯಲೇಬೇಕು.
ಇದನ್ನೂ ಓದಿ:Spinal health: ಬೆನ್ನು ಮೂಳೆಯ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಕಾಫಿ ಬೀಜವೂ ಮುಖ್ಯ: ಕಾಫಿಯ ಪರಿಮಳ ಮತ್ತು ರುಚಿ ನಿರ್ಧಾರವಾಗುವುದು, ಬೀಜವನ್ನು ಪುಡಿ ಮಾಡುವ ವಿಧಾನದ ಮೇಲೆ. ಅದಕ್ಕಿಂತಲೂ ಮುಖ್ಯವಾಗಿ ಕಾಫಿ ಬೀಜಗಳ ಗುಣಮಟ್ಟ ಮತ್ತು ಆಯಸ್ಸಿನ ಮೇಲೆ. ಹಾಗಾಗಿ ಆದಷ್ಟೂ ತಾಜಾ ಬೀಜಗಳನ್ನೇ ಪುಡಿ ಮಾಡಿಸಿ. ಬೀಜಗಳು ಹಳೆಯದಾದಷ್ಟೂ ಕೆಡುವುದು ರುಚಿಯೊಂದೇ ಅಲ್ಲ, ಆರೋಗ್ಯವೂ.
ಕ್ರೀಮ್ ಯಾಕೆ?: ಕಾಫಿಯ ಮೇಲೆ ವಿಪ್ ಕ್ರೀಮ್‌ನ ಚಿತ್ತಾರಗಳನ್ನು ಬರೆದುಕೊಂಡು, ಅದರೊಂದಿಗೆ ಸೆಲ್ಫೀ ತೆಗೆದು ಎಲ್ಲೆಂದರಲ್ಲಿ ಅಪ್ಲೋಡ್ ಮಾಡಿದರೆ ಮಾತ್ರವೇ ಕಾಫಿ ರುಚಿಸುವುದು ಎಂದೇ ನಿಲ್ಲವಲ್ಲ. ಹಾಗೆಲ್ಲ ವಿಪ್ ಕ್ರೀಮ್ ಸೇರಿಸಿಕೊಳ್ಳಲು ಕಾಫಿಯೇನು ಚಾಕಲೇಟ್ ಪೇಯವೇ? ಕಾಫಿಗೆ ಅಷ್ಟೊಂದು ಪ್ರಮಾಣದ ಕೊಬ್ಬು ಸೇರಿಸಿಕೊಂಡರೆ ಆರೋಗ್ಯದ ಗತಿಯೇನು? ಹಾಗಾಗಿ ಅಪರೂಪಕ್ಕೆ ಸೆಲ್ಫಿಗೆ ಬಿಟ್ಟರೆ, ಉಳಿದಂತೆ ಕ್ರೀಮ್ ಇಲ್ಲದ ಕಾಫಿಯೇ ಇರಲಿ.
ಕಹಿಯೇ ಇರಲಿ!: ಕಾಫಿಗೆ ಸಿಕ್ಕಾಪಟ್ಟೆ ಸಕ್ಕರೆ ಸುರಿದುಕೊಂಡು ಕುಡಿಯುವವರೂ ಇದ್ದಾರೆ. ಕಾಫಿಯ ರುಚಿ ಸ್ವಲ್ಪ ಕಹಿಯಿದ್ದರೇ ಸರಿ. ಪಾಯಸದಂತಿದ್ದರೆ ಆರೋಗ್ಯಕ್ಕೆ ಇನ್ನಷ್ಟು ತೊಂದ ರೆಯೇ ಹೊರತು ಮತ್ತೇನಿಲ್ಲ. ಅತಿಯಾದ ಸಕ್ಕರೆ ಸೇವನೆಯೂ ಬಹಳಷ್ಟು ಸಮಸ್ಯೆಗಳಿಗೆ ಕಾರಣವಾಗಬಲ್ಲದು. ಜೊತೆಗೆ ಕಹಿ ಕಾಫಿಯನ್ನು ಎಷ್ಟು ಕುಡಿಯಲು ಸಾಧ್ಯ?
ಅತಿ ಬಿಸಿ ಬೇಡ: ಯಾವುದೇ ಪೇಯವಾದರೂ ಸುಡುವಂಥ ಬಿಸಿ ಕುಡಿಯುವ ಅಗತ್ಯವಿಲ್ಲ. ಇದರಿಂದ ಅನ್ನನಾಳಕ್ಕೆ ಹಾನಿ ಎನ್ನುತ್ತಾರೆ ಆರೋಗ್ಯ ಪರಿಣತರು. ಅತಿಯಾದ ಬಿಸಿ ಸೇವನೆಯಿಂದ ಅನ್ನನಾಳದ ಕ್ಯಾನ್ಸರ್ ಬರುವ ಸಾಧ್ಯತೆ ಮೂರು ಪಟ್ಟು ಹೆಚ್ಚು. ಹಾಗಾಗಿ ಚಳಿ, ಮಳೆ ಇತ್ಯಾದಿ ಕಾರಣಗಳನ್ನು ನೀಡಿ ಒಲೆ ಮೇಲಿಂದ ನೇರ ಗಂಟಲಿಗೆ ಸುರಿಯುವ ಬದಲು, ಸ್ವಲ್ಪ ಒಗ್ಗಲಿ, ಬಿಡಿ.