ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Worms in Humans: ಜಂತುಹುಳು ದೊಡ್ಡವರನ್ನೂ ಕಾಡಬಹುದು.. ಎಚ್ಚರ!

Worms in Humans: ಮಕ್ಕಳಿಗೆ ಮಾತ್ರವಲ್ಲ ದೊಡ್ಡವರನ್ನೂ ಜಂತು ಹುಳುವಿನ ಬಾಧೆ ಕಾಡಬಹುದು. ಕಲುಷಿತ ನೀರು ಮತ್ತು ಆಹಾರದಿಂದ ಅವರಿಗೂ ಕರುಳಿನಲ್ಲಿ ಹುಳುಗಳು ಸೇರಿ, ಆರೋಗ್ಯವನ್ನು ಅಲ್ಲಾಡಿಸಬಹುದು. ಔಷಧಿಯಿಂದ ಈ ಸಮಸ್ಯೆಗೆ ಪರಿಹಾರವಂತೂ ಖಂಡಿತಾ ಇದೆ. ಅದಕ್ಕೂ ಮುನ್ನ, ಜಂತು ಹುಳುಗಳ ಬಾಧೆಯ ಲಕ್ಷಣಗಳನ್ನು ತಿಳಿದುಕೊಂಡಿರಬೇಕಲ್ಲವೇ?

ಜಂತುಹುಳು

ನವದೆಹಲಿ: ಮಕ್ಕಳಲ್ಲಿ ಪದೇಪದೆ ಹೊಟ್ಟೆ ನೋವು, ಮಲಬದ್ಧತೆ, ಹಸಿವಿಲ್ಲದಿರುವುದು ಅಥವಾ ಅಜೀರ್ಣದಂಥ ಸಮಸ್ಯೆಗಳು ಕಂಡುಬಂದರೆ ವೈದ್ಯರು ಮೊದಲು ಔಷಧಿ ಕೊಡುವುದು ಜಂತು ಹುಳು ನಿರ್ಮೂಲನೆಗೆ. ವಿಷಯವೇನೆಂದರೆ, ಮಕ್ಕಳಿಗೆ ಮಾತ್ರವಲ್ಲ ದೊಡ್ಡವರನ್ನೂ ಜಂತು ಹುಳುವಿನ ಬಾಧೆ (Worms in Humans) ಕಾಡಬಹುದು. ಕಲುಷಿತ ನೀರು ಮತ್ತು ಆಹಾರದಿಂದ ಅವರಿಗೂ ಕರುಳಿನಲ್ಲಿ ಹುಳುಗಳು ಸೇರಿ, ಆರೋಗ್ಯವನ್ನು ಅಲ್ಲಾಡಿಸ ಬಹುದು. ಔಷಧಿಯಿಂದ ಈ ಸಮಸ್ಯೆಗೆ ಪರಿಹಾರವಂತೂ ಖಂಡಿತಾ ಇದೆ. ಅದಕ್ಕೂ ಮುನ್ನ, ಜಂತು ಹುಳುಗಳ ಬಾಧೆಯ ಲಕ್ಷಣಗಳನ್ನು ತಿಳಿದುಕೊಂಡಿರಬೇಕಲ್ಲವೇ?

ತೂಕ ಇಳಿಕೆ: ನಮಗಾಗಿ ನಾವು ತಿಂದಿದ್ದೆಲ್ಲವನ್ನೂ ಹೊಟ್ಟೆ ಯಲ್ಲಿರುವ ಹುಳುಗಳ ಪಾಲೇ ಆಗುವುದರಿಂದ, ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ದೊರೆಯದೆ ಸೊರಗುವುದು ನಿಶ್ಚಿತ. ಆಹಾರ ಕ್ರಮ ಎಂದಿನಂತೆಯೇ ಇದ್ದು, ಅನಾರೋಗ್ಯದಂಥ ಬೇರಾವುದೇ ಕಾರಣವಿಲ್ಲದೆಯೇ ತೂಕ ಇಳಿಯುತ್ತಿದ್ದರೆ ವೈದ್ಯರನ್ನು ಕಾಣುವುದು ಅಗತ್ಯ. ಹೊಟ್ಟೆಯಲ್ಲಿ ಜಂತು ಹುಳುವಿನ ಕಾಟ ಇರಬಹುದು.

ಮಲಬದ್ಧತೆ: ಆಹಾರದಲ್ಲಿ ಸಾಕಷ್ಟು ನಾರಿನಂಶ ಇದ್ದು, ನೀರು ಸಾಕಷ್ಟು ಕುಡಿಯುತ್ತಿದ್ದರೂ ಮಲಬದ್ಧತೆ ಆಗುತ್ತಿದೆಯೇ? ಹಾಗಾದರೆ ಹೊಟ್ಟೆಯ ಹುಳುಗಳಿಂದಾಗಿ ಉರಿಯೂತ ಆಗಿರಬಹುದು, ಇದರಿಂದ ನೀರು-ನಾರುಗಳು ಸಾಕಷ್ಟಿದ್ದರೂ, ಅವುಗಳನ್ನು ಹೀರಿಕೊಳ್ಳುವುದಕ್ಕೆ ಜೀರ್ಣಾಂಗಕ್ಕೆ ಸಮಸ್ಯೆ ಯಾಗುತ್ತದೆ. ಇದರಿಂದ ಅಜೀರ್ಣ, ಹೊಟ್ಟೆಯುಬ್ಬರ, ಅಸಿಡಿಟಿ, ವಾಕರಿಕೆ ಇಂಥವೆಲ್ಲಾ ಕಿರಕಿರಿಗಳು ಆಗುತ್ತಿರಬಹುದು

ಇದನ್ನು ಓದಿ:Ajwain For Health: ಓಂಕಾಳು ಘಾಟುಮದ್ದಿನ ಬಗ್ಗೆ ಗೊತ್ತೇ?

ಆಯಾಸ: ತಿಂದಿದ್ದು ದೇಹಕ್ಕೆ ದಕ್ಕುತ್ತಿಲ್ಲ, ಹುಳುಗಳೇ ಎಲ್ಲವನ್ನೂ ಮುಕ್ಕುತ್ತಿವೆ ಎಂದರೆ ಆಯಾಸ ಆಗದೆ ಇರುತ್ತದೆಯೇ? ಸುಸ್ತು, ಆಯಾಸ, ಬಳಲಿಕೆ ಇಂಥವುಗಳು ಸಹಜವಾಗಿ, ಸ್ವಲ್ಪ ಚಟು ವಟಿ ಕೆಗೂ ದೇಹ ಇನ್ನಷ್ಟು ದಣಿಯುತ್ತದೆ. ದಣಿವಾಗಿ, ಹಸಿವಾಗಿ ಆಹಾರ ಸೇವಿಸಿದರೆ ದೇಹಕ್ಕೆ ದೊರೆಯದೆ ಜಂತುಗಳು ಮತ್ತಷ್ಟು ಬೆಳೆಯುತ್ತವೆ. ದೇಹ ಮತ್ತೂ ಸೊರಗುತ್ತದೆ. ಈ ಚಕ್ರ ಮುಂದುವರಿಯುತ್ತದೆ.

ನಿದ್ರಾ ಹೀನತೆ: ರಾತ್ರಿ ಪದೇಪದೆ ಎಚ್ಚರಾಗುವುದು, ಗಾಢವಾಗಿ ನಿದ್ರೆ ಬಾರದಿರುವುದು ಜಂತುಗಳು ಇರುವ ಮತ್ತೊಂದು ಲಕ್ಷಣ. ಈ ಹುಳುಗಳು ಮೊಟ್ಟೆ ಇಡುವ ಸಂದರ್ಭಗಳಲ್ಲಿ ವಿಷಕಾರಿ ರಾಸಾ ಯನಿಕಗಳು ರಕ್ತ ಸೇರಿ, ಮೆದುಳಿನವರೆಗೂ ಸಂಚರಿಸಿ, ಆರೋಗ್ಯದಲ್ಲಿ ವ್ಯತ್ಯಯ ಉಂಟು ಮಾಡುತ್ತವೆ. ಇದರಿಂದ ನಿದ್ರೆ ದೂರವಾಗುತ್ತದೆ, ಮಾನಸಿಕ ತಳಮಳ, ಮೂಡ್‌ ವ್ಯತ್ಯಯ ಮುಂತಾದವು ಸಾಮಾನ್ಯವಾಗುತ್ತವೆ.

ಚರ್ಮದ ತೊಂದರೆ: ಹೊಟ್ಟೆಯೊಳಗೆ ಸೇರುವ ಕೆಲವು ರೀತಿಯ ಹುಳುಗಳಿಂದ ರಕ್ತಕ್ಕೆ ಸೇರುವ ವಿಷಕಾರಿ ರಾಸಾಯನಿಕಗಳು ಚರ್ಮದ ಮೇಲೆ ಒಂದಿಷ್ಟು ಕಿರಿಕಿರಿಗಳನ್ನು ತರುತ್ತವೆ. ತುರಿಕೆ, ದದ್ದು, ಕೆಂಪು ಗುಳ್ಳೆಗಳು- ಇಂಥವುಗಳು ಎಕ್ಸಿಮಾದಂತೆ ಕಾಣುತ್ತವೆ

ಕೀಲು ನೋವು: ಈ ಜಂತುಗಳಿಂದ ರಕ್ತ ಸೇರುವ ರಾಸಾಯನಿಕ ಗಳು ಕೆಲವೊಮ್ಮೆ ಮಾಂಸ ಖಂಡಗಳಲ್ಲಿ ಮತ್ತು ಕೀಲುಗಳಲ್ಲಿ ನೋವು ತರುತ್ತವೆ. ನೋವು ಹೇಳುವಷ್ಟು ಹೆಚ್ಚಿಲ್ಲದಿದ್ದರೂ, ಹಲವಾರು ದಿನಗಳವರೆಗೆ ಇದ್ದು, ದೇಹದ ತೊಂದರೆಯನ್ನು ಇನ್ನಷ್ಟು ಹೆಚ್ಚಿಸಬಲ್ಲದು.

ಹಲ್ಲು ಕಡಿಯುವುದು: ಸದಾ ನಿಶ್ಶಬ್ದವಾಗಿ ನಿದ್ದೆ ಮಾಡುತ್ತಿದ್ದವರು ಈಗ ಇದ್ದಕ್ಕಿದ್ದಂತೆ ಕಟಕಟನೇ ಹಲ್ಲು ಕಡಿಯಬಹುದು. ಇದೇನು ಯಾರ ಮೇಲಿನ ಸಿಟ್ಟಿನಿಂದ ಎಂದು ಭಾವಿಸಬೇಡಿ, ಹೊಟ್ಟೆ ಹುಳುಗಳಿಂದ ಉಂಟಾಗುವ ಕಿರಿಕಿರಿ, ತಳಮಳಗಳಿಂದ ನಿದ್ದೆಯಲ್ಲಿ ದೇಹ ತೋರಿಸುವ ಪ್ರತಿಕ್ರಿಯೆ ಇದಾಗಿರಬಹುದು.

ಹೊಟ್ಟೆಯಲ್ಲಿ ಜಂತಾಗುವುದು ಆಗಬಾರದ ಸಮಸ್ಯೆಯೇನಲ್ಲ. ಮಕ್ಕಳಿಗೆ ಮಾತ್ರವಲ್ಲ, ಯಾವುದೇ ವಯಸ್ಸಿನವರನ್ನೂ ಇದು ಬಾಧಿಸಬಹುದು. ಇದಕ್ಕೆ ಔಷಧಿಯೂ ಇದ್ದು, ಚಿಕಿತ್ಸೆ ಆರಂಭಿಸಿದ ಕೆಲವೇ ವಾರಗಳಲ್ಲಿ ಆರೋಗ್ಯ ಸುಧಾರಿಸಬಲ್ಲದು. ಆದರೆ ಕಲುಷಿತ ನೀರು ಮತ್ತು ಆಹಾರಗಳಿಂದ ದೂರ ಇರುವುದು ಮುಖ್ಯ. ಮಾತ್ರವಲ್ಲ, ಪ್ರತಿಬಾರಿ ಆಹಾರ ಸೇವಿಸುವಾಗಲೂ ಕೈಗಳನ್ನು ಸೋಪಿ ನಿಂದ ಸ್ವಚ್ಛ ಮಾಡುವುದು ಅಗತ್ಯ. ಸ್ವಚ್ಛತೆಯ ಕೊರತೆಯಿಂದಲೇ ಹೆಚ್ಚಿನ ಬಾರಿ ಇಂಥ ಸಮಸ್ಯೆಗಳು ವಕ್ಕರಿಸಿಕೊಳ್ಳುತ್ತವೆ.