ಬಾಗಲಕೋಟೆ: ಮನೆ ಮುಂದೆ ಹಚ್ಚಿದ ದೀಪದಿಂದ ಘೋರ ದುರಂತ ಸಂಭವಿಸಿದೆ. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಎಂಟು ಜನ ಗಾಯಗೊಂಡು, ಏಳು ಬೈಕ್ಗಳು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ (Cylinder Explosion) ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿ ಜರುಗಿದೆ. ಭಾನುವಾರ ಮುಂಜಾನೆ ಸಿಲಿಂಡರ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಒಟ್ಟು 8 ಜನರಿಗೆ ಗಂಭೀರ ಗಾಯಗಳಾಗಿವೆ.
ಗಾಯಾಳುಗಳನ್ನು ಕಲ್ಮೇಶ್ ದರಿಯಪ್ಪ ಲೋಕಣ್ಣಬಾರ (30), ಸಚಿನ್ ಪ್ರಕಾಶ್ ಮೇರಿ (28), ಗಣೇಶ್ (26), ದಾಪು ದೇವಿ (28), ಡಿಂಪಲ್ ಪಟೇಲ್ (1), ಸ್ನೇಹಾ (22), ಐಶ್ವರ್ಯಾ (13) ಹಾಗೂ ಶ್ರುತಿ (23) ಎಂದು ಗುರುತಿಸಲಾಗಿದೆ.

ಈ ಘಟನೆಯಲ್ಲಿ, ಏಳು ಬೈಕ್ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಎಲ್ಲಾ ಗಾಯಾಳುಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಅವಘಡದ ಮಾಹಿತಿ ದೊರೆತ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ನಿರ್ಲಕ್ಷ್ಯತನ ಹಾಗೂ ಅಪಾಯಕಾರಿ ವಸ್ತುಗಳನ್ನು ಸುರಕ್ಷತಾ ಕ್ರಮವಿಲ್ಲದೆ ಸಂಗ್ರಹಿಸಿದ್ದ ಆರೋಪ ಹಿನ್ನೆಲೆಯಲ್ಲಿ ಬೋರ್‌ವೆಲ್ ಅಂಗಡಿ ಮಾಲೀಕ ಮತ್ತು ಕಟ್ಟಡದ ಮಾಲೀಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 287 ಮತ್ತು 125ರ ಅಡಿಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಚಿಕ್ಕಬಳ್ಳಾಪುರ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರೆಸ್ಟೋರೆಂಟ್ ಮುಂಭಾಗದಲ್ಲಿ ತಳಿರುತೋರಣ ಕಟ್ಟಲು ಹೋದ ಯುವಕನಿಗೆ ವಿದ್ಯುತ್ ಸ್ವರ್ಶಿಸಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಡಿ.ಕೆ ಫ್ಯಾಮಿಲಿ ರೆಸ್ಟೋರೆಂಟ್ನಲ್ಲಿ ಶನಿವಾರ ಬೆಳಗ್ಗೆ 11.30ರ ಸಮಯದಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ನೇಪಾಳ ಮೂಲದ ಪದಮ್ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿ ಡಿ.ಕೆ.ಫ್ಯಾಮಿಲಿ ರೆಸ್ಟೋರೆಂಟ್ನಲ್ಲಿ ಆಡುಗೆ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ | Bomb Threat: ವಿಮಾನದಲ್ಲಿ ಬಾಂಬ್ ಇದೆ... ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್!
ರೆಸ್ಟೋರೆಂಟ್ನಲ್ಲಿ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿತ್ತು. ಹಬ್ಬಕ್ಕೆ ಪದಮ್ ರೆಸ್ಟೋರೆಂಟ್ ಮುಂಭಾಗದಲ್ಲಿ ಮಾವಿನ ತಳಿರುತೋರಣ ಕಟ್ಟಲು ಮುಂದಾಗಿದ್ದಾನೆ. ಮುಂಭಾಗದಲ್ಲಿದ್ದ ಪಾನ್ ಶಾಪ್ ಮೇಲೆ ಹತ್ತಿದ ಆತನಿಗೆ ತಲೆ ಮೇಲೆ ಹಾದು ಹೋಗಿದ್ದ ವಿದ್ಯುತ್ ಲೈನ್ ತಗುಲಿದೆ. ವಿದ್ಯುತ್ ಸ್ವರ್ಶದಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅವಘಡದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.