ಬಾಗಲಕೋಟೆ: ಕೆಎಸ್‌ಆರ್‌ಟಿಸಿ ಬಸ್‌ಗೆ ಇನ್ನೋವಾ ಕಾರು ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೂಲಗೇರಿ ಗ್ರಾಮದ ಹುಬ್ಬಳ್ಳಿ -ವಿಜಯಪುರ ಹೆದ್ದಾರಿಯಲ್ಲಿ ನಡೆದಿದೆ. ಕಾರು ಓವರ್ ಟೇಕ್ ಮಾಡಲು ಹೋದ ವೇಳೆ ಅಪಘಾತ ನಡೆದಿದೆ. ಮೃತ ವ್ಯಕ್ತಿಯನ್ನು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಸಾಗರ ತೆಕ್ಕೆನ್ನವರ (62) ಎಂದು ಗುರತಿಸಲಾಗಿದೆ.
ಅಪಘಾತದಲ್ಲಿ ಬಸ್ ಮುಂದಿನ ಗಾಜು ಜಖಂ ಆಗಿದ್ದು, ಕಾರು ನುಜ್ಜುಗುಜ್ಜಾಗಿದೆ. ಇನ್ನು ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಕೆರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಿಯಕರನಿಗಾಗಿ ಮುದ್ದೆಯಲ್ಲಿ ವಿಷ ಹಾಕಿ ಅತ್ತೆಯನ್ನೇ ಕೊಂದ ಸೊಸೆ!
ಚಿಕ್ಕಮಗಳೂರು: ಮಹಿಳೆಯೊಬ್ಬಳು ತನ್ನ ಪ್ರಿಯಕರನಿಗಾಗಿ ಸ್ವಂತ ಅತ್ತೆಯನ್ನೇ ಮುದ್ದೆಯಲ್ಲಿ ವಿಷ ಹಾಕಿ ಕೊಂದಿರುವುದು (Murder Case) ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದ ತಡಗ ಗ್ರಾಮದಲ್ಲಿ ನಡೆದಿದೆ. ಅಶ್ವಿನಿ ಎಂಬ ಮಹಿಳೆ ಅತ್ತೆ ದೇವೀರಮ್ಮ(75) ಅವರನ್ನು ಕೊಲೆ ಮಾಡಿದ್ದಾಳೆ.
ಅಶ್ವಿನಿ ಪ್ರಿಯಕರ ಆಂಜನೇಯ ಎಂಬುವನ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಇದಕ್ಕೆ ಅತ್ತೆ ದೇವೀರಮ್ಮ ಅಡ್ಡಿಯಾಗಿದ್ದಳು. ಪ್ರಿಯಕರನಿಗಾಗಿ ಅಶ್ವಿನಿ ಮನೆಯಲ್ಲಿ ಚಿನ್ನಾಭರಣ ಹಾಗೂ ಕಳವು ಮಾಡುತ್ತಿದ್ದಳು. ಕದ್ದ ಹಣ ಹಾಗೂ ಚಿನ್ನಾಭರಣವನ್ನು ಪ್ರಿಯಕರ ಆಂಜನೇಯನಿಗೆ ಕೊಡುತ್ತಿದ್ದಳು.
ಈ ವಿಷಯ ಗೊತ್ತಾದ ಬಳಿಕ ಅತ್ತೆಯನ್ನೇ ಸೊಸೆ ಅಶ್ವಿನಿ ವಿಷ ಹಾಕಿ ಕೊಂದಿದ್ದಾಳೆ ಎನ್ನಲಾಗಿದೆ. ಬಳಿಕ ಮನೆಯವರಿಗೆ ದೇವಿರಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ನಂಬಿಸಿದ್ದಳು. ಮನೆಯಲ್ಲಿ 100 ಗ್ರಾಂ ಚಿನ್ನ ಹಾಗೂ 50 ಸಾವಿರ ಹಣ ಕಳವಾಗಿದ್ದರಿಂದ ಅಶ್ವಿನಿ ನಾದಿನಿ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಕಳ್ಳತನದ ಪ್ರಕರಣದ ತನಿಖೆ ನಡೆಸಿದಾಗ ಹತ್ಯೆಯ ಹಿಂದಿನ ರಹಸ್ಯ ಬಯಲಾಗಿದೆ. ಪೊಲೀಸರು ವಿಚಾರಣೆ ನಡೆಸಿದಾಗ ತಾನೇ ಅತ್ತೆಯನ್ನು ಕೊಂದಿರುವುದಾಗಿ ಅಶ್ವಿನಿ ತಪ್ಪೊಪ್ಪಿಕೊಂಡಿದ್ದಾಳೆ.