ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ನಾರಿಹಳ್ಳ ಜಲಾಶಯದ ಹಿನ್ನೀರಿನ ತಟದಲ್ಲಿರುವ ಶ್ರೀ ಗಂಡಿ ಬಸವೇಶ್ವರ ದೇವಸ್ಥಾನದ ಅವರಣದಲ್ಲಿರುವ ಉಭಯ ದೇವರುಗಳ ಆರಾಧನೆಯನ್ನು ಉಲ್ಲೇಖಿಸುವ ಅಪರೂಪದ ಮ್ಯಾಂಗನೀಸ್ ಶಿಲಾಶಾಸನ (Rock inscription) ಪತ್ತೆಯಾಗಿದೆ. ದೇಗುಲದ ಅರ್ಚಕ ಎಂ. ಎನ್. ವೀರಯ್ಯಸ್ವಾಮಿ, ಇತಿಹಾಸ ಉಪನ್ಯಾಸಕರಾದ ಡಾ. ತಿಪ್ಪೆರುದ್ರ, ನಾಗಭೂಷಣ ಅವರ ಸಹಕಾರದಿಂದ ವಿಜಯನಗರ ತಿರುಗಾಟ ಸಂಶೋಧನ ತಂಡದ ಪ್ರೊ. ತಿಪ್ಪೇಸ್ವಾಮಿ, ಡಾ. ಗೋವಿಂದ, ಡಾ. ಕೃಷ್ಣೆಗೌಡ, ಡಾ.ತಿಮ್ಮಲಾಪುರದ ನರಸಿಂಹ, ಡಾ. ವೀರಾಂಜಿನಯ್ಯ, ಸಂಶೋಧಕರಾದ ವೀರಭದ್ರಗೌಡ, ಎಚ್. ರವಿ ಅವರು ಶಾಸನ ಪತ್ತೆ ಹಚ್ಚಿದ್ದಾರೆ.
ಅಪರೂಪದ ವಿಶೇಷ ಮ್ಯಾಂಗನೀಸ್ ಶಿಲಾಶಾಸನ
ಸಂಡೂರಿನ ಸುಪ್ರಸಿದ್ಧ ಜಲಾಶಯ ಎಂದು ಖ್ಯಾತಿ ಗಳಿಸಿದ ನಾರಿಹಳ್ಳಿ ಜಲಾಶಯದ ಹಿನ್ನೀರಿನ ತಟದಲ್ಲಿರುವ ಶ್ರೀ ಗಂಡಿ ಬಸವೇಶ್ವರ ದೇಗುಲದ ಅವರಣದಲ್ಲಿರುವ ಮ್ಯಾಂಗನೀಸ್ ಬಂಡೆ ಮೇಲೆ ಶಾಸನ ಬರೆಸಲಾಗಿದೆ. ಈ ಶಾಸನವು ಉತ್ತರಾಭಿಮುಖವಾಗಿದ್ದು, ಶಾಸನದ ಎಡಗಡೆಗೆ ಸೂರ್ಯ, ಬಲಗಡೆಗೆ ಚಂದ್ರ ಹಾಗೂ ಮಧ್ಯದಲ್ಲಿ ಶಿವನ ಲಿಂಗದ ಚಿತ್ರಗಳಿದ್ದು ವಿಶೇಷವಾಗಿ ಬಲಬದಿಯ ಚಂದ್ರನ ಬಳಿಯಲ್ಲಿ ನಕ್ಷತ್ರದ ಚಿತ್ರವನ್ನು ಕೆತ್ತಲಾಗಿದೆ.

ಈ ಶಾಸನದ ಕಾಲಾವಧಿ ಉಲ್ಲೇಖವಾಗಿಲ್ಲ. ಆದರೂ ಲಿಪಿಯ ಶೈಲಿ ಹಾಗೂ ದುರ್ಮುಖಿ ಸಂವತ್ಸರದ ಮಾರ್ಗಶಿರಾ ಕಾರ್ತಿಕ ಎಂದು ಉಲ್ಲೇಖವಾಗಿರುದರಿಂದ ಇದು ಕ್ರಿ.ಶ. 10ನೇ ಶತಮಾನದ ಶಾಸನವಾಗಿರಬಹುದು. ಈ ಶಾಸನವು ನೆಲದಿಂದ 10 ಅಡಿ ಎತ್ತರದ ಮ್ಯಾಂಗನೀಸ್ ಕಲ್ಲಿಗೆ 3 ಅಡಿ ಎತ್ತರ, 3 ಅಡಿ ಅಗಲದಲ್ಲಿ ಆರು ಸಾಲುಗಳಲ್ಲಿ ಅಕ್ಷರಗಳನ್ನು ಬರೆಸಲಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಡಾ. ಗೋವಿಂದ ತಿಳಿಸಿದ್ದಾರೆ.
ಈ ಅಪರೂಪದ ಅಪ್ರಕಟಿತ ಶಿಲಾ ಶಾಸನದ ಆರು ಸಾಲುಗಳಲ್ಲಿ ದುರ್ಮುಖಿ ಸಂವತ್ಸರದ ಮಾರ್ಗಶಿರ ಕಾರ್ತಿಕ 1 ರಲು ಎಂದು ಆರಂಭಗೊಳ್ಳುತ್ತದೆ. ಆದರೆ ವಿಶೇಷವಾಗಿ ರಂಗಸಮುದ್ರ ಎಂದು ಉಲ್ಲೇಖಿಸಲಾಗಿದೆ. ಈಗ ಕರೆಯುವ ನಾರಿಹಳ್ಳ ಜಲಾಶಯವನ್ನು ರಂಗಸಮುದ್ರ ಎಂದು ಆಗ ಕರೆದಿರಬೇಕು. ಈಚೆಗೆ ಈ ಸ್ಥಳವನ್ನು ಮಾನಸ ಸರೋವರ ಎಂತಲೂ ಕರೆಯಲಾಗಿದೆ. ಶಾಸನದ ವಿವರಣೆಯಂತೆ ಈ ರಂಗಸಮುದ್ರದಲ್ಲಿದ್ದ ವಿರೂಪಾಕ್ಷ ಮತ್ತು ವಿಷ್ಣು ದೇವರನ್ನು ಆರಾಧನೆ ಮಾಡಲಾಗುತಿತ್ತು. ಶಾಸನದಲ್ಲಿ ಮರುಜನ್ಮ ವಿಳಸಿತನಾಗುವನು ಎಂದು ಉಲ್ಲೇಖವಾಗಿದೆ. ಈ ಹಿನ್ನೆಲೆಯಲ್ಲಿ ಈ ಶಾಸನವು ಮಾನವನಿಗೆ ನೀತಿ ಬೋಧಿಸುವ ಪ್ರತೀಕವಾಗಿದೆ ಎಂದು ವಿಜಯನಗರ ಕೃಷ್ಣದೇವರಾಯ ವಿಶ್ವಾವಿದ್ಯಾಲಯದ ಪ್ರೊ. ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | School Holidays: ಸೆ.20ರಿಂದ ರಾಜ್ಯದ ಶಾಲೆಗಳಿಗೆ ದಸರಾ ರಜೆ: ಎಷ್ಟು ದಿನ? ಇಲ್ಲಿದೆ ಮಾಹಿತಿ
ರಾಜರು ಹೇಳಿದ ರಾಜಾಜ್ಞೆಯನ್ನು ಕಲ್ಲಿನಲ್ಲಿ ಶಾಸನದ ರೂಪದಲ್ಲಿ ಬರೆಸಲಾಗುತಿತ್ತು. ಹೀಗೆ ಬರೆಸಿದ ಶಾಸನಗಳು ಶಾಶ್ವತವಾಗಿ ಇರಲಿ ಎಂದು ಶಾಸನದ ಕೊನೆ ಸಾಲಿನಲ್ಲಿ ಶಾಪಾಶಯವನ್ನು ಬರೆಸುತ್ತಿದ್ದರು. ಹೀಗೆ ಬರೆಸಿದ್ದರಿಂದ ಈಗಲೂ ಶಾಸನಗಳು ಉಳಿದಿವೆ. ಇಂತಹ ಅಪರೂಪದ ಶಿಲಾಶಾಸನಗಳನ್ನು ಸಂರಕ್ಷಣೆ ಮಾಡಿ, ಮುಂದಿನ ಪೀಳಿಗೆಗೆ ಇದರ ಮಹತ್ವ ತಿಳಿಸಬೇಕಾಗಿದೆ ಹಾಗೇನೆ ಸಂಬಂಧಪಟ್ಟ ಇಲಾಖೆ, ಇಲ್ಲವೇ ಆಡಳಿತಾಂಗವು ರಕ್ಷಣೆ ಮಾಡಲಿ ಎಂದು ಇತಿಹಾಸ ಉಪನ್ಯಾಸಕ ಡಾ. ತಿಪ್ಪೆರುದ್ರ ಕೋರಿದ್ದಾರೆ.