ಬೆಳಗಾವಿ: ವಾಲ್ಮೀಕಿ ನಾಯಕ ಸಮುದಾಯದ ವಿರುದ್ಧ ಅವಾಚ್ಯ ಪದ ಬಳಕೆ ಆರೋಪದಲ್ಲಿ ಮಾಜಿ ಸಂಸದ ರಮೇಶ್ ಕತ್ತಿ (Ramesh Katti) ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ ಮಾಜಿ ಸಂಸದ ರಮೇಶ್ ಕತ್ತಿ ಅವರು ವಾಲ್ಮೀಕಿ ಸಮುದಾಯದ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎಂದು ರಾಜಶೇಖರ ತಳವಾರ ಎಂಬುವರು ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಈ ದೂರು ಆಧರಿಸಿ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ರಮೇಶ್ ಕತ್ತಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮಾಜಿ ಸಂಸದ ರಮೇಶ್ ಕತ್ತಿ ಅವರು ನಾಯಕ ಸಮುದಾಯದ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ್ದ ವೀಡಿಯೋ ವೈರಲ್ ಆಗಿತ್ತು. ಬೆಳಗಾವಿಯ ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ಬಿ.ಕೆ ಮಾಡೆಲ್ ಶಾಲೆಯ ಆವರಣದಲ್ಲಿ ಅವರು ಅವಾಚ್ಯವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಾಜಿ ಸಂಸದರ ಹೇಳಿಕೆ ಖಂಡಿಸಿದೆ ಬೆಳಗಾವಿ ಜಿಲ್ಲೆಯಾದ್ಯಂತ ಬಂದ್ ಮಾಡಲು ವಾಲ್ಮೀಕಿ ನಾಯಕ ಸಮಾಜ ಕರೆ ನೀಡಿದೆ.
ಡಿಸಿಸಿ ಬ್ಯಾಂಕ್ ಚುನಾವಣೆ; ಭಾರಿ ಅಂತರದಿಂದ ಲಕ್ಷ್ಮಣ ಸವದಿ ಗೆಲುವು
ಜಾರಕಿಹೊಳಿ ಬ್ರದರ್ಸ್ ಮತ್ತು ಸವದಿ-ಕತ್ತಿ ಟೀಂ ನಡುವೆ ತೀವ್ರ ಹಣಾಹಣಿಗೆ ಭಾನುವಾರ ನಡೆದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಸಾಕ್ಷಿಯಾಯಿತು. ಜಾರಕಿಹೊಳಿ ಸಹೋದರರು ಒಂದು ಬಣವಾದರೇ, ಸಂಸದ ರಮೇಶ್ ಕತ್ತಿ ಹಾಗೂ ಶಾಸಕ ಲಕ್ಷ್ಮಣ ಸವದಿ ಒಂದು ಬಣ. ಇಂದಿನ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲಿ 2 ಕ್ಷೇತ್ರಗಳಲ್ಲಿ ಸವದಿ ಬಣ ಗೆಲುವು ಸಾಧಿಸಿದರೆ, 1 ಕ್ಷೇತ್ರದಲ್ಲಿ ಜಾರಕಿಹೊಳಿ ಬಣ ಗೆಲುವು ಸಾಧಿಸಿದೆ.
ಇಂದು ಬೆಳಗ್ಗೆ ಮತದಾನದ ವೇಳೆ ಜಾರಕಿಹೊಳಿ ಬಣ ಮತ್ತು ಸವದಿ-ಕತ್ತಿ ಬಣದ ಸದಸ್ಯರ ನಡುವೆ ಗಲಾಟೆ ನಡೆದಿತ್ತು. ಮತದಾರರಿಗೆ ಡೆಲಿಗೇಷನ್ ಪಾರ್ಮ್ ಕೊಡುತ್ತಿಲ್ಲ ಎಂದ ಜಾರಕಿಹೊಳಿ ಬಣದ ಅಪ್ಪಾಸಾಹೇಬ್ ಕುಲಗೋಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಡಿಸಿಪಿ ನಾರಾಯಣ ಭರಮನಿ ಚುನಾವಣಾಧಿಕಾರಿಗೆ ದೂರು ನೀಡುವಂತೆ ಸವದಿ ಬೆಂಬಲಿಗರ ಮನವೊಲಿಕೆ ಮಾಡಿದರು. ನಂತರ ಜಾರಕಿಹೊಳಿ ಬಣದ ಕಾರ್ಯಕರ್ತರ ವಿರುದ್ಧ ರಾಯಭಾಗ ಕ್ಷೇತ್ರದಿಂದ ಕಣಕ್ಕಿಳಿದಿರುವ ಬಸಗೌಡ ಆಸಂಗಿ ಕೋರ್ಟ್ ಮೆಟ್ಟಿಲೇರಿದ್ದರು.
ಇನ್ನು ಮತದಾನದ ಹಕ್ಕಿಗಾಗಿ ಪಿಕೆಪಿಎಸ್ ಸದಸ್ಯರು ಕೋರ್ಟ್ ಮೊರೆ ಹೋಗಿದ್ದರು. ಇದರಿಂದ ನಾಲ್ಕು ತಾಲೂಕಿನ ಫಲಿತಾಂಶದ ಕುರಿತು ಚುನಾವಣಾ ಫಲಿತಾಂಶವನ್ನು ಪ್ರಕಟಿಸದಂತೆ ಚುನಾವಣಾಧಿಕಾರಿಗಳಿಗೆ ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ 4 ಕ್ಷೇತ್ರಗಳಾದ ನಿಪ್ಪಾಣಿ, ಕಿತ್ತೂರು, ಬೈಲಹೊಂಗಲ, ಹುಕ್ಕೇರಿ ಕ್ಷೇತ್ರದ ಫಲಿತಾಂಶವನ್ನು ತಡೆಹಿಡಿಯಲಾಗಿದೆ. ನ್ಯಾಯಾಲಯದಲ್ಲಿ ಚುನಾವಣಾ ಫಲಿತಾಂಶ ಘೋಷಣೆ ಮಾಡದಂತೆ ಆದೇಶ ಬರುತ್ತಿದ್ದಂತೆ ನಾಲ್ಕು ತಾಲೂಕಿನ ಅಭ್ಯರ್ಥಿಗಳು ಸಂಭ್ರಮಾಚರಣೆ ಮಾಡಿದರು.
ರಾಮದುರ್ಗ ತಾಲೂಕಿನ ಫಲಿತಾಂಶ:
ಮಲಣ್ಣಾ ಯಾದವಾಡ – 19 ಮತಗಳು
ಶ್ರೀಕಾಂತ್ ಧವನ – 16 ಮತಗಳು
ಮಲ್ಲಣ್ಣಾ ಯಾದವಾಡ 3 ಮತಗಳಿಂದ ಗೆಲುವು
ಅಥಣಿ ತಾಲೂಕಿನ ಫಲಿತಾಂಶ:
ಲಕ್ಷ್ಮಣ ಸವದಿ- 122 ಮತಗಳು
ಮಹೇಶ್ ಕುಮಟಳ್ಳಿ – 3 ಮತಗಳು
ಲಕ್ಷ್ಮಣ ಸವದಿ 119 ಮತಗಳಿಂದ ಗೆಲುವು
ರಾಯಭಾಗ ತಾಲೂಕಿನ ಫಲಿತಾಂಶ:
ಅಪ್ಪಾಸಾಹೇಬ್ ಕುಲಗೋಡೆ – 120 ಮತಗಳು
ಬಸನಗೌಡ ಆಸಂಗಿ – 64 ಮತಗಳು
ಅಪ್ಪಾಸಾಹೇಬ್ ಕುಲಗೋಡೆ 56 ಮತಗಳಿಂದ ಗೆಲುವು
ಈ ಸುದ್ದಿಯನ್ನೂ ಓದಿ | RSS procession: ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ RSS ಪಥ ಸಂಚಲನಕ್ಕೆ ಬ್ರೇಕ್; ಮಹತ್ವದ ಆದೇಶ
7 ಕ್ಷೇತ್ರಗಳಲ್ಲಿ ಅಥಣಿ, ರಾಯಬಾಗ, ರಾಮದುರ್ಗ ಸೇರಿ 3 ಕ್ಷೇತ್ರಗಳ ಚುನಾವಣೆ ಫಲಿತಾಂಶ ಅಧಿಕೃತ ಘೋಷಣೆಯಾಗಿದ್ದು, ಉಳಿದ ಹುಕ್ಕೇರಿ, ನಿಪ್ಪಾಣಿ, ಬೈಲಹೊಂಗಲ, ಕಿತ್ತೂರು ಕ್ಷೇತ್ರಗಳ 4ರ ಫಲಿತಾಂಶ ನ್ಯಾಯಾಲಯದ ಆದೇಶ ಹಿನ್ನೆಲೆಯಲ್ಲಿ ಪ್ರಕಟವಾಗಿಲ್ಲ.
ಡಿಸಿಸಿ ಬ್ಯಾಂಕಿನ 16 ನಿರ್ದೇಶಕರ ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆ ನಡೆದಿದೆ. ಇದರಲ್ಲಿ 7 ನಿರ್ದೇಶಕರು ಜಾರಕಿಹೊಳಿ ಬ್ರದರ್ಸ್ ಬಣದವರಾಗಿದ್ದಾರೆ. ಇದೀಗ ಏಳು ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಸದ್ಯ ಮೂರು ಸ್ಥಾನಗಳ ಫಲಿತಾಂಶ ಘೋಷಣೆಯಾಗಿದೆ. ಇಂದು ಗೆದ್ದಿರುವ ಒಂದು ಸ್ಥಾನ ಸೇರಿದರೆ 8 ಸ್ಥಾನ ಜಾರಕಿಹೊಳಿ ಬ್ರದರ್ಸ್ ಬಣ ಗೆದ್ದಂತಾಗಲಿದೆ. ಇನ್ನೊಂದು ಸ್ಥಾನ ಗೆದ್ದರೆ ಡಿಸಿಸಿ ಬ್ಯಾಂಕ್ ಗದ್ದುಗೆ, ಜಾರಕಿಹೊಳಿ ಬ್ರದರ್ಸ್ ಬಣದ ಪಾಲಾಗಲಿದೆ.