ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸುಲಲಿತ ವಾಣಿಜ್ಯ ಸಂಸ್ಕೃತಿಯಲ್ಲಿ ಇಡೀ ದೇಶದಲ್ಲೇ ರಾಜ್ಯವನ್ನು ನಂ.1 ಮಾಡಲಾಗುವುದು: ಎಂ.ಬಿ. ಪಾಟೀಲ್‌

MB Patil: ಸಂಪುಟ ಸಭೆ ತೀರ್ಮಾನದಂತೆ ಪ್ರತಿಯೊಂದು ಕೈಗಾರಿಕಾ ಅನುಮೋದನೆಗಳಿಗೂ ಕಾಲಮಿತಿಯನ್ನು ನಿಗದಿಪಡಿಸಲಾಗುತ್ತದೆ. ಇದನ್ನು ಮೀರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಯವರು ಎಚ್ಚರಿಕೆ ನೀಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.

ಬೆಂಗಳೂರು: ಸುಲಲಿತ ವಾಣಿಜ್ಯ ಸಂಸ್ಕೃತಿಯಲ್ಲಿ ರಾಜ್ಯವನ್ನು ಇಡೀ ದೇಶದಲ್ಲೇ ನಂ.1 ಮಾಡಲಾಗುವುದು. ಹೂಡಿಕೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕ್ಷಿಪ್ರಗತಿಯಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ನಾನಾ ಇಲಾಖೆಗಳಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ನಿರ್ದೇಶನ ನೀಡಿ, ವರದಿ ಕೊಡುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಲಾಗಿದೆ. ಇದನ್ನು ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ, ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ (MB Patil) ತಿಳಿಸಿದ್ದಾರೆ. ‌

ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಉನ್ನತ ಮಟ್ಟದ ಯೋಜನಾ ಒಪ್ಪಿಗೆ ನೀಡಿಕೆ ಸಮಿತಿಯ ಸಭೆಯ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಸಂಪುಟ ಸಭೆ ತೀರ್ಮಾನದಂತೆ ಪ್ರತಿಯೊಂದು ಕೈಗಾರಿಕಾ ಅನುಮೋದನೆಗಳಿಗೂ ಕಾಲಮಿತಿಯನ್ನು ನಿಗದಿಪಡಿಸಲಾಗುತ್ತದೆ. ಇದನ್ನು ಮೀರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಯವರು ಎಚ್ಚರಿಕೆ ನೀಡಿದ್ದಾರೆ ಎಂದರು.

ಕೈಗಾರಿಕಾ ಯೋಜನೆಗಳಿಗೆ ಸಂಬಂಧಿಸಿದಂತೆ ನೆರೆಹೊರೆಯ ತೆಲಂಗಾಣ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಯಾವ್ಯಾವ ಕೆಲಸಗಳಿಗೆ ಎಷ್ಟೆಷ್ಟು ದಿನಗಳಲ್ಲಿ ಒಪ್ಪಿಗೆ ಕೊಡಲಾಗುತ್ತಿದೆ ಎನ್ನುವುದನ್ನು ಮುಖ್ಯಮಂತ್ರಿಗಳು ಸಭೆಯಲ್ಲಿ ಚರ್ಚಿಸಿದರು. ಇಂತಹ ವಿಚಾರಗಳಲ್ಲಿ ಭೂ ಬಳಕೆಯ ಉದ್ದೇಶ ಬದಲಾವಣೆ, ವಿದ್ಯುತ್ ಸೌಲಭ್ಯ, ಮರ ಕಡಿಯಲು/ ಸ್ಥಳಾಂತರಕ್ಕೆ ಒಪ್ಪಿಗೆ, ನೀರಿನ ಪೂರೈಕೆ, ಅಗ್ನಿಶಾಮಕ ಇಲಾಖೆಯ ಒಪ್ಪಿಗೆ, ಕೈಗಾರಿಕೆಗಳ ನೋಂದಣಿ ಮತ್ತು ಲೈಸೆನ್ಸ್, ಬಾಯ್ಲರ್ ನೋಂದಣಿ, ಲಿಫ್ಟ್ ಬಳಕೆಗೆ ಲೈಸೆನ್ಸ್ ಮುಂತಾದವು ಇವೆ. ಆ ರಾಜ್ಯಗಳಲ್ಲಿ ಈ ಸೇವೆಗಳನ್ನು ಕನಿಷ್ಠ 7 ದಿನಗಳಿಂದ ಹಿಡಿದು ಗರಿಷ್ಠ 66 ದಿನಗಳಲ್ಲಿ ಒದಗಿಸಲಾಗುತ್ತಿದೆ. ಆದರೆ ರಾಜ್ಯದಲ್ಲಿ ಇವುಗಳ ಪೈಕಿ ಕೆಲವಕ್ಕೆ ಕನಿಷ್ಠ 20 ದಿನಗಳಿಂದ ಗರಿಷ್ಠ 120 ದಿನಗಳು ಹಿಡಿಯುತ್ತಿವೆ. ಇದನ್ನೆಲ್ಲ ಬಗೆಹರಿಸುವಂತೆ ಮುಖ್ಯಮಂತ್ರಿಯವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಮುಖ್ಯವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಅಗ್ನಿಶಾಮಕ ಇಲಾಖೆಯಿಂದ ವಿಪರೀತ ವಿಳಂಬವಾಗುತ್ತಿದೆ ಎಂದು ಹೂಡಿಕೆದಾರರು ಹೇಳುತ್ತಿದ್ದಾರೆ. ಇದನ್ನು ತಪ್ಪಿಸಲು ಹೂಡಿಕೆದಾರರ ಸಮಾವೇಶದಲ್ಲಿ ಬಿಡುಗಡೆ ಮಾಡಿದ, ಮೈಕ್ರೋಸಾಫ್ಟ್ ಕಂಪನಿ ರೂಪಿಸಿರುವ ಅತ್ಯಾಧುನಿಕ ಏಕಗವಾಕ್ಷಿ ಪೋರ್ಟಲ್ ಅಡಿ 20 ಇಲಾಖೆಗಳ 115 ಸೇವೆಗಳನ್ನು ತರಲಾಗಿದೆ. ಆದರೆ ಮುದ್ರಾಂಕ ಮತ್ತು ನೋಂದಣಿ, ಮಾಲಿನ್ಯ ನಿಯಂತ್ರಣ ಮಂಡಳಿ, ಕಾರ್ಮಿಕ ಇಲಾಖೆ, ಅಗ್ನಿಶಾಮಕ ಸೇವೆ, ಬಿಡಿಎ, ಕಂದಾಯ, ಔಷಧ ನಿಯಂತ್ರಣ, ಕೆಐಎಡಿಬಿ, ಬಿಎಂಆರ್ ಡಿಎ ಮುಂತಾದ ಇಲಾಖೆಗಳ ಇನ್ನೂ 29 ಸೇವೆಗಳು ಬಾಕಿ ಇವೆ. ಇವುಗಳನ್ನೂ ಶೀಘ್ರದಲ್ಲೇ ಏಕಗವಾಕ್ಷಿ ಅಡಿಗೆ ತರಬೇಕಾದ ತುರ್ತಿನ ಬಗ್ಗೆ ಗಮನ ಹರಿಸಲಾಗುವುದು ಎಂದು ಅವರು ಹೇಳಿದ್ದಾರೆ.‌

ಈ ಸುದ್ದಿಯನ್ನೂ ಓದಿ | Invest Karnataka: ಕರ್ನಾಟಕದಲ್ಲಿ 13 ಕಂಪನಿಗಳಿಂದ ₹27 ಸಾವಿರ ಕೋಟಿ ಹೂಡಿಕೆಗೆ ಅಸ್ತು: 8 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ

ಸಭೆಯಲ್ಲಿ ಏಕಗವಾಕ್ಷಿ ವ್ಯವಸ್ಥೆಯ ಬಗ್ಗೆ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ಕೈಗಾರಿಕಾ ರಂಗದಲ್ಲಿ ನಮಗೆ ಗುಜರಾತ್, ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ, ಒಡಿಶಾ ಮತ್ತು ಉತ್ತರಪ್ರದೇಶದಿಂದ ತೀವ್ರ ಸ್ಪರ್ಧೆ ಇದೆ. ಹೂಡಿಕೆದಾರರಿಗೆ ಸಮಯವೇ ಹಣವಿದ್ದಂತೆ. ನಾವು ಅನುಮೋದನೆ ಇತ್ಯಾದಿಗಳನ್ನು ವಿಳಂಬ ಮಾಡಿದರೆ ರಾಜ್ಯಕ್ಕೆ ನಷ್ಟವಾಗುತ್ತದೆ. ಇದಕ್ಕೆ ತೆರೆ ಎಳೆಯಲು ತೀರ್ಮಾನಿಸಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.