ಬೆಂಗಳೂರು: ಅತ್ಯಂತ ಪ್ರತಿಷ್ಠಿಯ ವೈದ್ಯಕೀಯ ಸಂಸ್ಥೆಯಾಗಿರುವ ನಾರಾಯಣ ಹೆಲ್ತ್ ಆಸ್ಪತ್ರೆ ಯು ವೈದ್ಯಕೀಯ ವಿಭಾಗದಲ್ಲಿ ಎಐ ಅಳವಡಿಸಿಕೊಳ್ಳುವ ವಿಚಾರದಲ್ಲಿ ಮುಂಚೂಣಿಯಲ್ಲಿದ್ದು, ಈ ಆಸ್ಪತ್ರೆಯ ತಂತ್ರಜ್ಞಾನ ವಿಭಾಗವಾದ ಆತ್ಮ ಇಂದು ಆತ್ಮ ಐರಾ ಎಂಬ ಎಐ ಆಧರಿತ ವೈದ್ಯಕೀಯ ಸೇವಾ ಉತ್ಪನ್ನವನ್ನು ಬಿಡುಗಡೆ ಮಾಡಿದೆ.
ಈ ಮೂಲಕ ಆತ್ಮ ವಿಭಾಗವು ಎಐ ಉಪಕರಣಗಳನ್ನು ಪರೀಕ್ಷಾ ಪ್ರಯೋಗದಿಂದ ವಾಸ್ತವ ಜಗತ್ತಿನಲ್ಲಿ ಚಿಕಿತ್ಸೆ ಒದಗಿಸಲು ಬಳಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಸಂಚಲನ ಉಂಟು ಮಾಡಿದೆ. ಆತ್ಮದ ಬಲದಿಂದ ನಡೆಯುವ ಐರಾ ವ್ಯವಸ್ಥೆಯು ರೋಗಿಗಳ ದಾಖಲೆಗಳನ್ನು ಸ್ಪಷ್ಟ ವಾಗಿ, ಜಾಣತನದಿಂದ ಸೂಕ್ತ ಟೈಮ್ ಲೈನ್ ಗಳಾಗಿ ಸಂಯೋಜಿಸುವ ಮೂಲಕ ವೈದ್ಯರು ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸುವ ರೀತಿಯನ್ನೇ ಬದಲಿಸಲಿದೆ. ವಿಶೇಷವಾಗಿ ಅತ್ಯಂತ ಸೂಕ್ತ ರೀತಿಯಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಹೆಚ್‌ಪಿಐಯ ಮಾಜಿ ಅಧ್ಯಕ್ಷರಾದ ಡಾ. ಅಲೆಕ್ಸಾಂಡರ್ ಥಾಮಸ್ ಮತ್ತು ಸಿಎಹೆಚ್ಓದ ಪ್ರಧಾನ ಕಾರ್ಯದರ್ಶಿ ಡಾ. ಲಲ್ಲು ಜೋಸೆಫ್ ಅವರು ಈ ಉತ್ಪನ್ನವನ್ನು ಶ್ಲಾಘಿಸಿದರು ಮತ್ತು ಈ ರೀತಿಯ ವಿನೂತನ ಆವಿಷ್ಕಾರಗಳು ವೈದ್ಯಕೀಯ ಕ್ಷೇತ್ರ ವನ್ನು ಬದಲಿಸಲು ಎಷ್ಟು ಮುಖ್ಯ ಎಂದು ಸಾರಿದರು.
ಇದನ್ನೂ ಓದಿ: Srivathsa Joshi Column: ಅಡಿಕೆಮರದಿಂದ ಬಿದ್ದು ಡಿಪ್ಲೊಮಾ ಓದುತ್ತಿದ್ದ ಯುವಕನ ಸಾವು !
ಐರಾ ಉತ್ಪನ್ನವು ಸುಧಾರಿತ ಯಾಂತ್ರಿಕ ಬುದ್ಧಿಮತ್ತೆಯನ್ನು ಬಳಸಿಕೊಂಡು, ರೋಗಿಗಳ ಡಿಜಿಟಲ್ ಅಥವಾ ಸ್ಕ್ಯಾನ್ ಮಾಡಿದ ವರದಿಗಳನ್ನು ಓದಿ ತಕ್ಷಣವೇ ಕ್ಲಿನಿಕಲ್ ಟೈಮ್ ಲೈನ್‌ಗಳನ್ನು ಮತ್ತು ಸ್ಮಾರ್ಟ್ ಟ್ಯಾಗ್ ಗಳನ್ನು ರಚಿಸುತ್ತದೆ. ಯಾವುದೇ ಮುಖ್ಯ ವಿವರವನ್ನು ಕಳೆದುಹೋಗದಂತೆ ಜಾಗೃತೆ ವಹಿಸುತ್ತದೆ. ವೈದ್ಯರು ಸ್ಪರ್ಶದ ಮೂಲಕ, ಮಾತಿನ ಮೂಲಕ ಅಥವಾ ಸಮಾಲೋಚನೆ ಯ ಸಮಯದಲ್ಲಿ ಸುತ್ತಲಿನ ಶಬ್ದವನ್ನು ಕೇಳುತ್ತಲೇ ರಚನಾತ್ಮಕವಾಗಿ, ನಿಖರವಾದ ರೂಪದಲ್ಲಿ ಸ್ವಯಂಚಾಲಿತವಾಗಿ ಸಿದ್ಧಗೊಂಡ ದಾಖಲಾತಿ ಮೂಲಕ ಮಾಹಿತಿಯನ್ನು ಹೊಂದಬಹುದು.
ಈ ಸಂದರ್ಭದಲ್ಲಿ ಹಾಜರಿದ್ದ ನಾರಾಯಣ ಹೆಲ್ತ್ ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ದೇವಿ ಶೆಟ್ಟಿ ಅವರು ಮಾತನಾಡಿ, “ಬುದ್ಧಿವಂತ ಆಸ್ಪತ್ರೆ ಎಂಬುದು ಈಗ ಭವಿಷ್ಯದ ಪರಿಕಲ್ಪನೆಯಾಗಿ ಮಾತ್ರವೇ ಉಳಿದಿಲ್ಲ, ಈಗಲೇ ಅದು ನಿಜವಾಗಿದೆ. ಇಎಂಆರ್ ನಂತರದ ಜೀವನ ಹೇಗಿರುತ್ತದೆ ಎಂದರೆ ತಂತ್ರಜ್ಞಾನ ಮತ್ತು ವೈದ್ಯರು ಪರಸ್ಪರ ಜೊತೆಗೂಡಿ ಕೆಲಸ ಮಾಡಲಿದ್ದಾರೆ. ವೈದ್ಯಕೀಯ ತಪ್ಪುಗಳು ಸಂಭವಿಸುವುದು ನಿಲ್ಲುತ್ತದೆ ಮತ್ತು ರೋಗಿಗಳಿಗೆ ಸುರಕ್ಷಿತ ಆರೋಗ್ಯ ಸೇವೆ ದೊರೆಯುತ್ತದೆ.
ನಾವು ಕೇವಲ ಮಾಹಿತಿಯನ್ನು ಸಂಗ್ರಹಿಸುವ ವ್ಯವಸ್ಥೆಗಳಿಂದ ಮೀರಿ ಆ ಮಾಹಿತಿಯನ್ನು ವಿಶ್ಲೇಷಿಸುವ, ಕನೆಕ್ಟ್ ಮಾಡುವ ಮತ್ತು ಅದಕ್ಕೆ ತಕ್ಕಂತೆ ಕ್ರಮ ತೆಗೆದುಕೊಳ್ಳುವ ವ್ಯವಸ್ಥೆಗಳ ಕಡೆಗೆ ಸಾಗುತ್ತಿದ್ದೇವೆ. ಐರಾದ ಮೂಲಕ ಎಐ ಆಧರಿತ ಯಾಂತ್ರೀಕರಣ ಪ್ರಕ್ರಿಯೆ ನಡೆಯಲಿದೆ ಮತ್ತು ದೊಡ್ಡ ಪ್ರಮಾಣದ ಮಾಹಿತಿಯನ್ನು ಸ್ಪಷ್ಟ ಒಳನೋಟಗಳಾಗಿ ಪರಿವರ್ತಿಸುವ ಕೆಲಸ ನಡೆಯ ಲಿದೆ. ಈ ಮೂಲಕ ರೋಗಿಗಳಿಗೆ ನಾವು ಅತ್ಯುತ್ತಮ ಸೇವೆಯನ್ನು ಒದಗಿಸಲಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ಬುದ್ಧಿವಂತ ವೈದ್ಯಕೀಯ ಸೇವೆಯ ಹೊಸ ಅಧ್ಯಾಯವಾಗಿದೆ” ಎಂದು ಹೇಳಿದರು.
ಆತ್ಮದ ಉತ್ಪನ್ನ ವಿಭಾಗದ ಮುಖ್ಯಸ್ಥರಾದ ಜಗದೀಶ್ ರಾಮಸಾಮಿ ಅವರು ಮಾತನಾಡಿ, “ಎಐ ಹೇಗೆ ವೈದ್ಯಕೀಯ ಸೇವೆಯನ್ನು ಪ್ರತಿಕ್ರಿಯಾತ್ಮಕ ರೀತಿಯಿಂದ ಸಕ್ರಿಯಾತ್ಮಕ ರೀತಿಗೆ ಬದಲಾಯಿಸಲಿದೆ ಎಂಬುದನ್ನು ಐರಾ ತಿಳಿಸಿಕೊಡಲಿದೆ. ಊಹಾತ್ಮಕ ವಿಶ್ಲೇಷಣೆ (ಪ್ರಿಡಿಕ್ಟಿವ್ ಅನಾಲಿಟಿಕ್ಸ್) ಮತ್ತು ನಿರಂತರ ಮೇಲ್ವಿಚಾರಣಾ ಕ್ರಮವನ್ನು ಬಳಸಿಕೊಳ್ಳುವ ಮೂಲಕ ಆಸ್ಪತ್ರೆಗಳು ಸಂಕಷ್ಟಗಳು ಜರುಗುವ ಮುನ್ನವೇ ಅದನ್ನು ತಡೆಯಲು ಸಾಧ್ಯವಾಗುವಂತೆ ಮಾಡಲಾಗುತ್ತದೆ. ಜೊತೆಗೆ ತುರ್ತು ಚಿಕಿತ್ಸೆಯ ಬದಲಿಗೆ ಆರಂಭಿಕ ಹಂತದಲ್ಲಿಯೇ ಸಮಸ್ಯೆಯನ್ನು ಪತ್ತೆ ಹಚ್ಚಿ ಚಿಕಿತ್ಸೆ ಒದಗಿಸುವ ಕಡೆಗೆ ಗಮನ ಹರಿಸಲಾಗುತ್ತದೆ. ಇದು ವೈದ್ಯರಿಗೆ ಸಕಾಲಿಕ ಒಳನೋಟಗಳನ್ನು ಒದಗಿಸಿ ಸಶಕ್ತೀಕರಣಗೊಳಿಸುವ ಮೂಲಕ ಇಡೀ ವೈದ್ಯಕೀಯ ವ್ಯವಸ್ಥೆಯನ್ನು ಮರುರೂಪಿಸಲಿದೆ. ವಿಶೇಷವಾಗಿ ಬುದ್ಧಿವಂತ, ಭವಿಷ್ಯ ಸಿದ್ಧವಾದ ಆಸ್ಪತ್ರೆಗಳನ್ನು ನಿರ್ಮಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ” ಎಂದು ಹೇಳಿದರು.