Ajit Hanamakkanavar: ಸರ್ಕಾರಿ ಕಚೇರಿಯಲ್ಲಿ ದೇವರಿಗೆ ಜಾಗ ಇಲ್ಲಾಂದ್ರೆ, ದೇವಸ್ಥಾನಗಳಲ್ಲಿ ಸರ್ಕಾರಕ್ಕೇನು ಕೆಲಸ?: ಅಜಿತ್ ಹನುಮಕ್ಕನವರ್
Mysuru Dasara 2025: ಪರಿವರ್ತನಾ ಟ್ರಸ್ಟ್ ವತಿಯಿಂದ ಬೆಂಗಳೂರಿನಲ್ಲಿ ಸೋಮವಾರ ಆಯೋಜಿಸಿದ್ದ ಮೈಸೂರು ದಸರಾ ಕುರಿತ ವಿಚಾರಗೋಷ್ಠಿಯಲ್ಲಿ ಪತ್ರಕರ್ತ ಅಜಿತ್ ಹನುಮಕ್ಕನವರ್ ಅವರು ಮಾತನಾಡಿದ್ದಾರೆ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣೆಗಳು ಸೇರಿ ಎಲ್ಲವನ್ನೂ ಕೆಲವರು ಪ್ರಶ್ನೆ ಮಾಡುತ್ತಾರೆ. ಇದು ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಅಂಟಿಸಿಕೊಂಡಿರುವ ಹೊಸ ವ್ಯಾಧಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.

-

ಬೆಂಗಳೂರು: ಅಜಿತ್ ಹನುಮಕ್ಕನವರ್ ಜೈನ ಧರ್ಮದವರಾ? ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಅದರೆ, ಕನ್ನಡ, ಈ ನೆಲ, ಸಂಸ್ಕೃತಿಯನ್ನು ತಾಯಿ ಸ್ವರೂಪದಲ್ಲಿ ನೋಡಲು ನನಗೆ ಯಾವುದೇ ರೀತಿಯ ಹಿಂಜರಿಕೆ ಇಲ್ಲ. ಈ ಸಂಸ್ಕೃತಿ, ಭಾಷೆ ಶ್ರೀಮಂತಿಕೆಯನ್ನು ಅರಿಶಿನ, ಕುಂಕುಮವಾಗಿ ಎದೆ ಮೇಲೆ ಹಾಕಿಕೊಳ್ಳಲು ನನಗೆ ಬಹಳ ಹೆಮ್ಮೆಯಾಗುತ್ತದೆ ಎಂದು ಪತ್ರಕರ್ತ ಅಜಿತ್ ಹನುಮಕ್ಕನವರ್ (Ajit Hanamakkanavar) ಹೇಳಿದರು.
ಪರಿವರ್ತನಾ ಟ್ರಸ್ಟ್ ವತಿಯಿಂದ ಬೆಂಗಳೂರಿನಲ್ಲಿ ಸೋಮವಾರ ಆಯೋಜಿಸಿದ್ದ ಮೈಸೂರು ದಸರಾ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಯಾರು ಹಿಂದು ಹೌದು, ಅಲ್ಲ ಎಂದು ವಿಂಗಡಿಸುವ ಜವಾಬ್ದಾರಿಯನ್ನು ಕೆಲವರು ತೆಗೆದುಕೊಂಡಿದ್ದಾರೆ. ನಾನು ಏನು ಎನ್ನುವುದು ಬೇರೆ. ಆ ಕನ್ನಡ ತಾಯಿಗೆ ಗೌರವ ಸಲ್ಲಿಸಲು ನನ್ನ ಧರ್ಮ, ನಂಬಿಕೆ ಯಾವುದೂ ಅಡ್ಡಿಯಾಗಲ್ಲ. ಅಕಸ್ಮಾತ್ ಅಡ್ಡಿಯಾಗುವ ಪರಿಸ್ಥಿತಿ ಬಂದರೆ ನನಗೆ ಆ ತಾಯಿಯೇ ಮೊದಲ ಆದ್ಯತೆ ಎಂದು ತಿಳಿಸಿದರು.
ಇನ್ನು ಸರ್ಕಾರಿ ಕಚೇರಿಗಳಲ್ಲಿ ಯಾಕೆ ದೇವರ ಪೂಜೆ ಆಗಬೇಕು ಎಂಬ ಚರ್ಚೆಯಾಗುತ್ತಿದೆ. ಆದರೆ, ದೇವಸ್ಥಾನದಲ್ಲಿ ಯಾಕೆ ಸರ್ಕಾರವಿದೆ ಎಂಬ ಬಗ್ಗೆ ಸಮಾಜ ಯೋಚನೆ ಮಾಡಬೇಕು ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಒಮ್ಮೆ ಚರ್ಚೆಗೆ ಬಂದಾಗ, ನಾನು ವಿಧಾನಸೌಧಕ್ಕೆ ಹೋಗಿದ್ದೆ, ಅಲ್ಲಿ ಲಿಫ್ಟ್‌ನಲ್ಲಿ ದೇವರ ಫೋಟೊ ಹಾಕಿದ್ದರು, ಇದೆಲ್ಲಾ ಯಾಕೆ ಬೇಕು ಎಂದು ಪ್ರಶ್ನಿಸಿದ್ದರು. ಅದಕ್ಕೆ ನಾನು ದೇವಸ್ಥಾನಕ್ಕೆ ಹೋಗಿದ್ದೆ ಅಲ್ಲಿ ಸರ್ಕಾರವಿದೆ. ಅಲ್ಲಿನ ಪೂಜೆ ಪುನಸ್ಕಾರ, ಸಿಇಒ ಯಾರಾಗಬೇಕು ಎಂಬುವುದನ್ನು ಸರ್ಕಾರ ನಿರ್ಧಾರ ಮಾಡುತ್ತಿದೆ. ದೇವಸ್ಥಾನದ ಬಳಿಯ ಅಂಗಡಿಗಳನ್ನು ಯಾರಿಗೆ ಬಾಡಿಗೆ ಕೊಡಬೇಕು, ಕೊಡಬಾರದು ಎಂಬುವುದನ್ನು ಸರ್ಕಾರ ನಿರ್ಧರಿಸುತ್ತಿದೆ. ಸರ್ಕಾರಿ ಕಚೇರಿಯಲ್ಲಿ ದೇವರಿಗೆ ಜಾಗವಿಲ್ಲ ಎಂದರೆ, ದೇವಸ್ಥಾನದಲ್ಲಿ ಸರ್ಕಾರಕ್ಕೇನು ಕೆಲಸ ಎಂಬುದಾಗಿ ಪ್ರಶ್ನಿಸಿದ್ದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವದಲ್ಲಿ ಸರ್ಕಾರ ಒಂದು ನಿರ್ಧಾರ ತೆಗೆದುಕೊಂಡಿದೆ ಎಂದು ದಸರಾ ಬಗ್ಗೆ ರಾಜಕಾರಣಿಯೊಬ್ಬರು ಹೇಳಿದ್ದಾರೆ. ಆದರೆ, ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಬರುವುದಕ್ಕಿಂತ ಮೊದಲಿನಿಂದ ದಸರಾ ಆಚರಣೆ ನಡೆಯುತ್ತಿದೆ. 700 ವರ್ಷಗಳ ಅಖಂಡ ಇತಿಹಾಸ ದಸರಾಗಿದೆ. ಆ ಆಚರಣೆ ನಡೆಸುವವರ ಮನೋಭಾವಕ್ಕೆ ಗೌರವ ಕೊಡಬೇಕು ಎಂಬುದು ನನ್ನ ಭಾವನೆ ಎಂದು ಹೇಳಿದರು.
ಆ ಚಾಮುಂಡೇಶ್ವರಿ ತಾಯಿ ಇಂತಹವರೇ ಉದ್ಘಾಟನೆ ಮಾಡಬೇಕು ಎಂದು ಹೇಳಲ್ಲ. ಆದರೆ, ಜವಾಬ್ದಾರಿಯುತ ಪ್ರಜೆಯಾಗಿ ಜನರನ್ನು ಎಚ್ಚರಿಸುವುದು ನಮ್ಮ ಹೊಣೆಯಾಗಿದೆ. ದಸರಾ ಉದ್ಘಾಟನೆಯಲ್ಲಿ ಭಾಗಿಯಾಗುವುದರಿಂದ ಮೂರ್ತಿ ಪೂಜೆ ಬಗ್ಗೆ ನಂಬಿಕೆ ಇಲ್ಲದವರ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗುತ್ತದೆ ಎಂದು ನಾವು ಎಚ್ಚರಿಸಿದ್ದೇವೆ.
ನಿಸಾರ್ ಅಹಮದ್ ಅವರು ದಸರಾ ಉದ್ಘಾಟಿಸಿದಾಗ ಯಾರಿಗೂ ಬೇಸರವಾಗಿರಲಿಲ್ಲ. ಅವರು ನಿತ್ಯೋತ್ಸವ ತಾಯಿ ನಿತ್ಯೋತ್ಸವ ಎಂದು ಹೇಳಿದವರು. ಬಾಲ ಕೃಷ್ಣನ ಕುರಿತು ನಿಸಾರ್ ಅಹಮದ್ ಅವರು ಬರೆದಿರುವ ಕವಿತೆಗಳನ್ನು ಕೇಳಿದರೆ ಇಂದಿಗೂ ತಾಯಂದಿರ ಎದೆತುಂಬಿ ಬರುತ್ತದೆ. ನನಗೆ ಬಂದಿರುವ ಉಳಿದೆಲ್ಲಾ ಗೌರವ, ಪ್ರಶಸ್ತಿಗಳಿಗಿಂತ ದಸರಾ ಉದ್ಘಾಟನೆ ಮಾಡುವ ಸೌಭಾಗ್ಯ ಸಿಕ್ಕಿದ್ದು ನನಗೆ ಬಹುದೊಡ್ಡ ಗೌರವ ಎಂದಿದ್ದರು. ಅಂತಹವರ ನಡುವೆ ಕನ್ನಡ ತಾಯಿ ಭುವನೇಶ್ವರಿಯನ್ನು ಒಪ್ಪಲು ತಯಾರಿಲ್ಲದ ವ್ಯಕ್ತಿಗಳಿಗೆ ಒಂದು ಜವಾಬ್ದಾರಿಯುತ ಸಮಾಜವಾಗಿ ನಾವು ಎಚ್ಚರಿಕೆ ನೀಡಬೇಕು ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Mysuru Dasara: ಮೈಸೂರು ದಸರಾ ಉದ್ಘಾಟನೆ: ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿದ ಅರ್ಜಿಗಳ ವಜಾ
ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣೆಗಳು ಸೇರಿ ಎಲ್ಲವನ್ನೂ ಈ ರೀತಿ ಪ್ರಶ್ನೆ ಮಾಡುತ್ತೀರಿ ಎಂದರೆ, ಇದು ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಅಂಟಿಸಿಕೊಂಡಿರುವ ಹೊಸ ವ್ಯಾಧಿಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.