Electoral fraud: ಮತಗಳ್ಳತನದ ದಾಖಲೆ ಇದ್ದರೆ ಕಾಂಗ್ರೆಸ್ ಬಿಡುಗಡೆ ಮಾಡಲಿ: ಬಸವರಾಜ ಬೊಮ್ಮಾಯಿ
Basavaraj Bommai: ಮತಗಳ್ಳತನದ ಹೆಸರಿನಲ್ಲಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಸಂಶಯ ಬರುವ ಹಾಗೆ ಕಾಂಗ್ರೆಸ್ ನಡುಕೊಳ್ಳುತ್ತಿದೆ. ಮೊದಲು ಇವಿಎಂ ಮೇಲೆ, ಈಗ ಚುನಾವಣಾ ಆಯೋಗದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.


ಬೆಂಗಳೂರು: ಮತಗಳ್ಳತನದ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ ಉದ್ದೇಶಕ್ಕಾಗಿ ಸಾಂವಿಧಾನಿಕ ಸಂಸ್ಥೆ ಮೇಲೆ ಆರೋಪ (Electoral fraud) ಮಾಡುವುದು ಸರಿಯಲ್ಲ. ದಾಖಲೆ ಇದ್ದರೆ ಕ್ಷಣವೂ ಕಾಯದೆ ಬಿಡುಗಡೆ ಮಾಡಲಿ, ಆಟಂ ಬಾಂಬ್ ಇದ್ದರೆ ಬಿಡಿ, ನಿಮಲ್ಲೆ ಇದ್ದರೆ ಅಲ್ಲೇ ಸ್ಫೋಟ ಆಗಬಹುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತಗಳ್ಳತನದ ಹೆಸರಿನಲ್ಲಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಸಂಶಯ ಬರುವ ಹಾಗೆ ಕಾಂಗ್ರೆಸ್ ನಡುಕೊಳ್ಳುತ್ತಿದೆ. ಮೊದಲು ಇವಿಎಂ ಮೇಲೆ, ಈಗ ಚುನಾವಣಾ ಆಯೋಗದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇವಿಎಂ ಹ್ಯಾಕ್ ಗೊಂದಲ ನಿವಾರಣೆಗೆ ಪ್ರಾತ್ಯಕ್ಷಿಕೆಗೆ ಕರೆದಾಗ ಕಾಂಗ್ರೆಸ್‌ನವರು ಬಂದಿಲ್ಲ. ರಾಜ್ಯ ಸರ್ಕಾರದ ಅಧಿಕಾರಿಗಳೇ ರಾಜ್ಯದಲ್ಲಿ ಚುನಾವಣೆ ಮುಖ್ಯಸ್ಥರು. ರಾಜಕೀಯ ಪಕ್ಷಗಳಿಗೂ ಬೂತ್‌ಗಳಲ್ಲಿ ವ್ಯಕ್ತಿ ನೇಮಕಕ್ಕೆ ಅವಕಾಶ ಇದೆ. ಇದರಲ್ಲಿ ಚುನಾವಣಾ ಆಯೋಗ ಭಾಗಿಯಾಗಿದೆ ಅನ್ನುವುದು ಸರಿಯಲ್ಲ. ಮತದಾರರ ಹೆಸರು ಡಿಲೀಟ್ ಅಥವಾ ಸೇರ್ಪಡೆ ಆಗಿರುವ ಬಗ್ಗೆ ಅಂದೇ ಕೇಳಬೇಕಿತ್ತು ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ. ಮಂಜುನಾಥ್ ಚುನಾವಣೆ ವೇಳೆ ರಾಜಕೀಯಕ್ಕೆ ಬಂದವರು. ಚುನಾವಣೆ ಆಯೋಗದ ಮೇಲೆ ಆರೋಪ ಸರಿಯಲ್ಲ. ಅಧಿಕಾರಿಗಳ ಹಸ್ತಕ್ಷೇಪ ಇದ್ದರೆ ಸಾಕ್ಷಿ ಕೊಡಿ, ಚುನಾವಣಾ ಆಯೋಗದ ವಿಶ್ವಾಸರ್ಹತೆಗೆ ಧಕ್ಕೆ ತರುವ ಕೆಲಸ ಮಾಡಬಾರದು. ಚುನಾವಣಾ ಆಯೋಗ ಏನಾಗಿದೆ ಹೇಳಿ ಎಂದು ಕೇಳಿದೆ. ಆದರೆ, ಕಾಂಗ್ರೆಸ್ ಲಿಖಿತ ದೂರನ್ನೂ ಕೊಟ್ಟಿಲ್ಲ. ಇವಿಎಂ ಮೇಲಿನ ಆರೋಪಕ್ಕೆ ಕೋರ್ಟ್ ಉತ್ತರ ಕೊಟ್ಟಿದೆ. ನರೇಂದ್ರ ಮೋದಿ ಮೂರನೆ ಬಾರಿ ಪ್ರಧಾನಿ ಆಗಿದ್ದು, ಆ ಆಘಾತ ಕಾಂಗ್ರೆಸ್‌ಗೆ ಆಗಿದೆ. ಚುನಾವಣಾ ಆಯೋಗವೇ ಆರೋಪಿ ಎಂದು ಹೇಳುವ ಯತ್ನದಿಂದ ಸಂವಿಧಾನಕ್ಕೆ ಧಕ್ಕೆ ಯಾಗುವ ಸಾಧ್ಯತೆ ಇದೆ. ಆ ಕಾರಣಕ್ಕಾಗಿ ಬಿಜೆಪಿ ವಿರೋಧಿಸುತ್ತಿದೆ ಎಂದು ಹೇಳಿದರು.
ಒಳ ಮೀಸಲಾತಿ ಜಾರಿ ನಂಬಿಕೆ ಇಲ್ಲ
ಒಳಮೀಸಲಾತಿ ವರದಿ ಸಲ್ಲಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಇವತ್ತಿಗೂ ಸಿಎಂ ಸಿದ್ದರಾಮಯ್ಯ ಪ್ರಾಮಾಣಿಕರಾಗಿಲ್ಲ. ಒಳಮೀಸಲಾತಿ ಜಾರಿಗೆ ಸಂವಿಧಾನ ತಿದ್ದುಪಡಿ ಆಗಬೇಕು ಅನ್ನುತ್ತಿದ್ದರು. ಕಳೆದ ವರ್ಷ ಸುಪ್ರೀಂಕೋರ್ಟ್ ತೀರ್ಪು ಬಂದ ಮೇಲೆ ಸುಮ್ಮನಾಗಿದ್ದಾರೆ 2013 ರಿಂದಲೂ ಎಸ್‌ಸಿ ಸಮುದಾಯಗಳಿಗೆ ಕಾಂಗ್ರೆಸ್ ಮೂಗಿಗೆ ತುಪ್ಪ ಸವರಿಕೊಂಡೇ ಬಂದಿದೆ. ನಾಳೆ ವರದಿ ಸಲ್ಲಿಕೆ ಆಗಲಿದೆ, ಆದರೆ, ಈ ಸರ್ಕಾರ ವರದಿ ಜಾರಿ ಮಾಡುತ್ತದೆ ಅನ್ನುವ ವಿಶ್ವಾಸ ಎಸ್‌ಸಿ ಸಮುದಾಯಕ್ಕೇ ಇಲ್ಲ ಎಂದರು.
ಒಳಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ನಮ್ಮ ಮೇಲೆ ಆರೋಪ ಮಾಡುವ ಅಗತ್ಯ ಇಲ್ಲ. ನಾವು ಒಳಮೀಸಲಾತಿಗೆ ಸಂಪುಟ ಉಪಸಮಿತಿ ರಚನೆ ಮಾಡಿ ವರದಿ ಪಡೆದಿದ್ದೇವು. ಆದರೆ, ಇವರು ಸಂವಿಧಾನ ತಿದ್ದುಪಡಿ ಆಗಬೇಕು ಅಂತ ಸಬೂಬು ಕೊಡುತ್ತಿದ್ದರು. ಈಗ ಸುಪ್ರೀಂಕೋರ್ಟ್ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಜಾರಿ ಮಾಡಲೇಬೇಕು. ನ್ಯಾ. ನಾಗಮೋಹನ್ ದಾಸ್ ವರದಿ ಏನು ಹೇಳುತ್ತದೆ ನೋಡಬೇಕು. ಎಷ್ಟು ಪ್ರಮಾಣದಲ್ಲಿ ಒಳಮೀಸಲಾತಿ ಹಂಚುತ್ತಾರೆ ಅಂತ ನೋಡೋಣ. ಇವರು ಜಾರಿ ಮಾಡುತ್ತಾರೆ ಎಂದು ಆ ಸಮುದಾಯಕ್ಕೆ ವಿಶ್ವಾಸ ಇಲ್ಲ ಎಂದರು.
ಅಪರಾಧ ಪ್ರಕರಣ ಹೆಚ್ಚಳ
ಮೈಸೂರಲ್ಲಿ ಡ್ರಗ್ಸ್ ಪತ್ತೆಯಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಮೈಸೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ಇರುವ ಬಗ್ಗೆ ಪೊಲಿಸರಿಗೆ ಗೊತ್ತೇ ಇಲ್ಲ. ಇದು ದುರ್ದೈವ. ಗುಜರಾತ್ ಪೊಲಿಸರು ಬಂದು ಶಂಕಿತ ಉಗ್ರ ಮಹಿಳೆಯನ್ನು ಬಂದಿಸಿದ್ದಾರೆ. ಕರ್ನಾಟಕ ಪೊಲೀಸರು ಏನು ಮಾಡುತ್ತಿದ್ದರು. ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಸರ್ಕಾರಕ್ಕೂ, ಹಿರಿಯ ಅಧಿಕಾರಿಗಳಿಗೂ ಹಿಡಿತ ತಪ್ಪಿಹೋಗಿದೆ ಎಲ್ಲ ಕೈ ಚೆಲ್ಲಿ ಕುಳಿತಿದ್ದಾರೆ ಎಂದು ಹೇಳಿದರು.
ಹಾವೇರಿಯಲ್ಲಿ ಜೂಜಾಟ ಹೆಚ್ಚಿರುವ ಕುರಿತು ಡಿಜಿಪಿಗೆ ಪತ್ರ ಬರೆದಿದ್ದೇನೆ ಆದರೆ, ನಿರೀಕ್ಷಿತ ಮಟ್ಟಕ್ಕೆ ಪೊಲಿಸ್ ಕ್ರಮ ಆಗಿಲ್ಲ. ಪೊಲೀಸರು ರಾಜಕಿಯ ಒತ್ತಡಕ್ಕೆ ಮಣಿದಿದ್ದಾರೆ. ಇದರ ವಿರುದ್ದ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Belagavi News: ಮುಸ್ಲಿಂ ಮುಖ್ಯಶಿಕ್ಷಕನ ವರ್ಗಾವಣೆ ಮಾಡಿಸಲು ಶಾಲೆಯ ನೀರಿನ ಟ್ಯಾಂಕ್‌ಗೆ ವಿಷ; ಮೂವರ ಬಂಧನ
ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಕಾನೂನು ಪ್ರಕಾರ ಎಲ್ಲ ಆಗಿದೆ. ಇದರಲ್ಲಿ ಮಾತನಾಡುವಂತದ್ದು ಏನಿಲ್ಲ. ಇದರಿಂದ ಮೈತ್ರಿ ಮೇಲೆ ಏನೂ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.