ಬೆಂಗಳೂರು: ರಾಜ್ಯ ಸರಕಾರ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷೆ ಯೋಜನೆಯ 'ಜಪ'ವನ್ನು ಬಿಬಿಎಂಪಿ ಬಜೆಟ್‌ನಲ್ಲಿ (BBMP Budget 2025) ಮುಂದುವರಿಸಲಾಗಿದ್ದು, 2025-26ನೇ ಸಾಲಿನಲ್ಲಿ 1368 ಕೋಟಿ ರು. ಅನುದಾನವನ್ನು ಬಿಬಿಎಂಪಿಯಿಂದ ಮೀಸಲಿಟ್ಟಿರುವುದಾಗಿ ಘೋಷಿಸಲಾಗಿದೆ. ಸತತ ಐದನೇ ವರ್ಷವೂ ಅಧಿಕಾರಿ ಗಳಿಂದಲೇ ಮಂಡನೆಯಾಗಿರುವ ಬಿಬಿಎಂಪಿ ಬಜೆಟ್ ಗಾತ್ರ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.50ರಷ್ಟು ಹೆಚ್ಚಿಸಲಾಗಿದೆ.
2024-25ನೇ ಸಾಲಿನಲ್ಲಿ 12,371 ರು. ಮಂಡಿಸಲಾಗಿತ್ತು. ಆದರೆ 2025-26ನೇ ಸಾಲಿನಲ್ಲಿ 19,972 ಕೋಟಿ ರು. ಮೊತ್ತದ ಬಜೆಟ್ ಮಂಡಿಸಲಾಗಿದೆ. ಈ ಬಾರಿ ಯಾವುದೇ ತೆರಿಗೆಗಳಾಗಲಿ, ಯಾವುದೇ ಬದಲಾವಣೆ ಮಾಡದಿದ್ದರೂ ಕಸಕ್ಕೂ ಕರ ವಿಧಿಸುವ ಮೂಲಕ ಆದಾಯ ಮೂಲ ಹೆಚ್ಚಿಸಿಕೊಳ್ಳುವ ಮಾರ್ಗ ಕಂಡುಕೊಂಡಿದೆ.
ಬ್ರ್ಯಾಂಡ್ ಬೆಂಗಳೂರಿನ ಆರಂಭಿಕ ಹಂತವಾಗಿ ಸ್ವಚ್ಛ ಬೆಂಗಳೂರು ಮಾಡುವ ಉದ್ದೇಶದಿಂದ, ಘನ ತ್ಯಾಜ್ಯ ಸಂಸ್ಕರಣೆ, ಕಸ ವಿಲೇವಾರಿ ಸೇರಿ ಹಲವು ಯೋಜನೆ ಹಾಗೂ ಅನುದಾನವನ್ನು ಘೋಷಿಸಿದೆ. ಇದರೊಂದಿಗೆ ಬೆಂಗಳೂರಿಗರಿಗೆ ಕಸ ಸಂಗ್ರಹಣಾ ಬಳಕೆ ಶುಲ್ಕ ವಿಧಿಸಲು ನಿರ್ಧರಿಸಿದೆ.
2025-26ನೇ ಸಾಲಿನಿಂದ ನಾಗರಿಕರಿಂದ ಕಸ ಸಂಗ್ರಹಣಾ ಬಳಕೆ ಶುಲ್ಕವನ್ನು ಆಸ್ತಿ-ತೆರಿಗೆ ಯೊಂದಿಗೆ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಈ ಮುಂಚೆ ಬಿಬಿಎಂಪಿ ರಾಜ್ಯ ಸರಕಾರಕ್ಕೆ ಸಲ್ಲಿಸಲಾದ ಪ್ರಸ್ತಾವನೆಯಲ್ಲಿ ಪ್ರತಿ ಮನೆಗೆ ಮಾಸಿಕ ಕಸ ಸಂಗ್ರಹಣಾ ಶುಲ್ಕ ವಿಧಿಸಲು ಪ್ರಸ್ತಾಪಿಸಿತ್ತು. ಈ ಪ್ರಸ್ತಾವನೆಯ ಪ್ರಕಾರ 46 ಲಕ್ಷ ಮನೆಗಳು ಇದರ ವ್ಯಾಪ್ತಿಗೆ ಬರಲಿವೆ.
ಇನ್ನು ರಾಜಧಾನಿಯಲ್ಲಿ ಪದೇ ಪದೆ ಕೇಳಿ ಬರುವ ಕಸದ ಸಮಸ್ಯೆಗೆ ಪರಿಹಾರವಾಗಿ ಮುಂದಿನ 30 ವರ್ಷಗಳವರೆಗೆ ಸಮಗ್ರ ತ್ಯಾಜ್ಯ ನಿರ್ವಹಣೆಗಾಗಿ ನಗರದ 4 ದಿಕ್ಕು ಗಳಲ್ಲಿ ಪ್ರತಿ ಪ್ಯಾಕೇಜ್‌ನಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಯೋಜಿಸಿದಂತೆ, 4 ಪ್ಯಾಕೇಜ್ ಗಳಲ್ಲಿ ಸಮಗ್ರತ್ಯಾಜ್ಯ ನಿರ್ವಹಣೆ ಯೋಜನೆ ಯನ್ನು ಈ ವರ್ಷ ಕಾರ್ಯರೂಪಕ್ಕೆ ತರಲು ಯೋಜಿಸಲಾಗಿದೆ.
2025-26ನೇ ಸಾಲಿನಲ್ಲಿ ಆಸ್ತಿ ತೆರಿಗೆ, ಕರ ಹಾಗೂ ತೆರಿಗೆ ಸಂಬಂಧಿಸಿದ ಆದಾಯ ಮೂಲದಿಂದ ಶೇ.29ರಷ್ಟು, ತೆರಿಗೆಯೇತರ ಆದಾಯದಿಂದ ಶೇ.25ರಷ್ಟು, ರಾಜ್ಯ ಸರಕಾರದಿಂದ ಶೇ.38ರಷ್ಟು, ಕೇಂದ್ರದಿಂದ ಶೇ.2ರಷ್ಟು ಆದಾಯವನ್ನು ನಿರೀಕ್ಷಿಸಲಾಗಿದೆ. ಶೇ.65ರಷ್ಟು ಅನುದಾನವನ್ನು ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗೆ ಮೀಸಲಿಡಲಾಗಿದೆ.
ಬ್ರ್ಯಾಂಡ್ ಬೆಂಗಳೂರಿಗೆ ಹಲವು ಯೋಜನೆ
ಕಳೆದ ಬಜೆಟ್ ರೀತಿಯಲ್ಲಿಯೇ ಈ ಬಾರಿಯೂ ಬಿಬಿಎಂಪಿ ಬಜೆಟ್‌ನಲ್ಲಿ ಬ್ರ್ಯಾಂಡ್ ಬೆಂಗಳೂರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದಕ್ಕಾಗಿ 1,300 ಕೋಟಿ ರು. ಆಸುಪಾಸಿನಲ್ಲಿ ಅನುದಾನ ನೀಡಲಾಗಿದ್ದು, ಇದರೊಂದಿಗೆ ಹೆಚ್ಚುವರಿ ಅನುದಾನ ನೀಡುವ ಸುಳಿವನ್ನು ಬಿಬಿಎಂಪಿ ತನ್ನ ಬಜೆಟ್ ನಲ್ಲಿ ನೀಡಿದೆ. ಬ್ರಾಂಡ್ ಬೆಂಗಳೂರಿನಲ್ಲಿ ಸುಗಮ ಸಂಚಾರ ಬೆಂಗಳೂರು, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಆರೋ ಗೃಕರ ಬೆಂಗಳೂರು, ಶಿಕ್ಷಣ ಬೆಂಗಳೂರು, ಜಲ ಸುರಕ್ಷತೆ ಬೆಂಗಳೂರು, ಟೆಕ್ ಬೆಂಗ ಳೂರು, ವೈಬ್ರಂಟ್ ಬೆಂಗಳೂರು ಎನ್ನುವ ಉಪಕ್ರಮದಲ್ಲಿ ವಿವಿಧ ಯೋಜನೆಗಳನ್ನು ಮುಂದುವರಿಸಲಾಗುವುದು ಎಂದು ಘೋಷಿಸಲಾಗಿದೆ.
ಈ ಸುದ್ದಿಯನ್ನೂ ಓದಿ | BBMP Budget 2025: ಬಿಬಿಎಂಪಿ ಬಜೆಟ್‌ನಲ್ಲಿ ʼಬ್ರ್ಯಾಂಡ್ ಬೆಂಗಳೂರಿಗೆʼ ಒತ್ತು; ಯಾವ ಕ್ಷೇತ್ರಕ್ಕೆ ಏನು ಕೊಡುಗೆ?
ಪ್ರಮುಖ ಘೋಷಣೆಗಳು
- ಸೈಡೆಕ್ ನಿರ್ಮಾಣಕ್ಕೆ 50 ಕೋಟಿ ರು.
- ಮುಂದಿನ 3 ವರ್ಷಗಳಲ್ಲಿ 2 ಸಾವಿರ ಕೋಟಿ ರು. ವೆಚ್ಚದಲ್ಲಿ 174 ಕಿಮೀ ರಾಜಕಾಲುವೆ ತಡೆಗೋಡೆ ನಿರ್ಮಾಣ
- ಪಾಲಿಕೆಯ ಆರು ವಲಯದಲ್ಲಿ ಪಶುವೈದ್ಯಕೀಯ ಚಿಕಿತ್ಸಾಲಯಗಳ ಆರಂಭ
- ಪ್ರವಾಹಪೀಡಿತ ಪ್ರದೇಶದ ಶಾಶ್ವತ ಪರಿಹಾರಕ್ಕೆ 247 ಕೋಟಿ ವೆಚ್ಚದಲ್ಲಿ ಕಾರ್ಯ
- ಏ.1ರಿಂದ ಕೊಳವೆಬಾವಿ, ಶುದ್ಧ ಕುಡಿಯುವ ನೀರಿನ ಘಟಕಗಳು ಜಲಮಂಡಲಿ ವ್ಯಾಪ್ತಿಗೆ