ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CN Ashwath Narayan: ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಆತ್ಮಹತ್ಯೆ ಗ್ಯಾರಂಟಿ: ಶಾಸಕ ಅಶ್ವತ್ಥ ನಾರಾಯಣ್ ಕಿಡಿ

Congress Government: ಜವಾಬ್ದಾರಿ, ಸೂಕ್ಷ್ಮತೆ, ನೈತಿಕತೆ ಮತ್ತು ಮೌಲ್ಯಗಳ ಕಾಳಜಿ ಇಟ್ಟುಕೊಂಡಿರುವ ಪ್ರಾಮಾಣಿಕ ಅಧಿಕಾರಿಗಳು ಇಂದು ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಸಾಯುವ ಸ್ಥಿತಿ ಬಂದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಆರೋಪಿಸಿದ್ದಾರೆ.

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯಿಂದ ಸರ್ಕಾರದ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ (State Congress Government) ಆತ್ಮಹತ್ಯೆ ಗ್ಯಾರೆಂಟಿ ಒಂದೇ ಇರುವುದು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ (CN Ashwath Narayan) ಆರೋಪಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜವಾಬ್ದಾರಿ, ಸೂಕ್ಷ್ಮತೆ, ನೈತಿಕತೆ ಮತ್ತು ಮೌಲ್ಯಗಳ ಕಾಳಜಿ ಇಟ್ಟುಕೊಂಡಿರುವ ಪ್ರಾಮಾಣಿಕ ಅಧಿಕಾರಿಗಳು ಇಂದು ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಸಾಯುವ ಸ್ಥಿತಿ ಬಂದಿದೆ ಎಂದು ದೂರಿದರು.

ಕಲಬುರಗಿ ಜಿಲ್ಲೆಯ ಗ್ರಂಥಾಲಯದ ಗ್ರಂಥಪಾಲಕಿ ಭಾಗ್ಯವತಿ ಅವರು 15 ತಿಂಗಳಿಂದ ಗ್ರಂಥಾಲಯದ ದಿನಪತ್ರಿಕೆ ಬಿಲ್ಲನ್ನು ಪಾವತಿಸಿಲ್ಲ, ಕರೆಂಟ್ ಬಿಲ್ಲನ್ನು ಪಾವತಿಸಿಲ್ಲ, ಗ್ರಂಥಾಲಯದಲ್ಲಿ ಕಾರ್ಯವನ್ನು ಮಾಡುವುದಕ್ಕೆ ಯಾವುದೇ ರೀತಿಯ ಸಹಕಾರ ಇಲ್ಲ. ಗ್ರಂಥಪಾಲಕಿ ಪ್ರತಿನಿತ್ಯ ಅನುಭವಿಸುತ್ತಿದ್ದ ಅವಮಾನ ಮತ್ತು ಅಸಹಾಯಕತೆಯನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡು ಸರ್ಕಾರಕ್ಕೆ ಬಹಳ ಸ್ಪಷ್ಟವಾದ ಸಂದೇಶ ಕೊಟ್ಟಿದ್ದಾರೆ ಎಂದು ಹೇಳಿದರು.

ಲಜ್ಜೆಗೆಟ್ಟ ಈ ಸರ್ಕಾರ ಯಾವ ಜವಾಬ್ದಾರಿ ಇಲ್ಲದೆ ಮನಬಂದಂತೆ ಏನು ಬೇಕಾದರೂ ಮಾಡಿ ಜಯಿಸಬಹುದು; ಯಾವುದರ ಬಗ್ಗೆ ಪರಿಜ್ಞಾನ ಇಲ್ಲದಿದ್ದರೂ ಕಾರ್ಯ ನಿರ್ವಹಿಸುತ್ತಿರುವ ಇಂತಹ ಕೆಟ್ಟ ಸರ್ಕಾರವನ್ನು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬಯಲಿಗೆಳೆಯುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ ಎಂದು ತಿಳಿಸಿದರು.

ಒಳಜಗಳದಿಂದ ಬೆಂಗಳೂರು ಕಡೆಗಣನೆ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಬೆಂಗಳೂರು ನಗರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಒಳಜಗಳದಿಂದ ಬೆಂಗಳೂರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಡಾ.ಸಿ.ಎನ್. ಅಶ್ವತ್ಥನಾರಾಯಣ್ ಆರೋಪಿಸಿದರು.

ಇಂದು ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿ ಮುಚ್ಚಲು ಆಗುತ್ತಿಲ್ಲ, ಕಸ ವಿಲೇವಾರಿ ಮಾಡುವುದಕ್ಕೆ ಆಗುತ್ತಿಲ್ಲ ಮತ್ತು ಕಾನೂನು ಸುವ್ಯವಸ್ಥೆ ನೀಡುವುದಕ್ಕೆ ವಿಫಲರಾಗಿದ್ದಾರೆ ಎಂದು ತಿಳಿಸಿದರು. ಉದ್ಯಮಿಗಳಾದ ಕಿರಣ್ ಮಜುಂದಾರ್-ಶಾ ಅವರು, ಮೋಹನ್ ದಾಸ್ ಪೈ, ಬ್ಲಾಕ್ ಬಕ್‍ನ ಸಿಇಒ ಅವರು ಬೆಂಗಳೂರು ಅವ್ಯವಸ್ಥೆ ಬಗ್ಗೆ ಹೇಳುತ್ತಿದ್ದಾರೆ. ಅವರ ಹೇಳಿಕೆಗಳಿಗೆ ಬೆದರಿಕೆ ಹಾಕುವ ಕೆಲಸವಾಗುತ್ತಿದೆ ಎಂದು ಅವರು ಆರೋಪಿಸಿದರು.

ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರನ್ನು ಯಾರಾದರೂ ಖಂಡಿಸಿದರೆ, ಪ್ರಶ್ನೆ ಮಾಡಿದರೆ ಅವರು ಬಿಜೆಪಿ ಬೆಂಬಲಿಗರು ಎಂದು ಹೇಳುತ್ತಾರೆ. ಅವರು ಪ್ರಜಾಪ್ರಭುತ್ವ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಉಲ್ಲೇಖ ಮಾಡುತ್ತಿರುತ್ತಾರೆ. ಅವರಿಗೆ ನೈತಿಕತೆ ಇದೆಯೇ?; ಅವರು ಯಾವ ಪ್ರಜಾಪ್ರಭುತ್ವವನ್ನು ಗೌರವಿಸುತ್ತಾರೆ ಹಾಗೂ ಪ್ರಜಾಪ್ರಭುತ್ವದ ಅವರಿಗೆ ತಿಳಿದಿದೆಯೇ ಎಂದು ಕೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರ ಮಗನಾಗಿರುವುದಕ್ಕೆ ಇಂದು ಅವರಿಗೆ ಸ್ಥಾನ ಸಿಕ್ಕಿದೆ. ಪ್ರಿಯಾಂಕ್ ಖರ್ಗೆ ಆಗಿಲ್ಲದ್ದಿದ್ದರೆ ಅವರ ವಿದ್ಯಾರ್ಹತೆಗೆ ಕಚೇರಿ ಸಹಾಯಕ ಉದ್ಯೋಗವೂ ಸಿಗುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಸರ್ಕಾರ ಬಂದಾಗ ಮಾತ್ರ ಸಾರ್ವಜನಿಕರು, ಗುತ್ತಿಗೆದಾರರು, ಸರ್ಕಾರಿ ಅಧಿಕಾರಿಗಳು ಸರಣಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಾವು ಕಾಣುತ್ತಿದ್ದೇವೆ ಎಂದು ಆರೋಪಿಸಿದರು. ಇಂದು ಸಚಿವ ಪ್ರಿಯಾಂಕ್ ಖರ್ಗೆ ಅವರ ಜಿಲ್ಲೆ ಮತ್ತು ಇಲಾಖೆಯಲ್ಲಿ ವೇತನ ನೀಡಿರುವುದಿಲ್ಲ. ಇದೆಲ್ಲವನ್ನು ಗಮನಿಸಿದ ಮಹಾನ್ ದೇಶಭಕ್ತ, ಮಹಾನ್ ಸಾಧಕ ಎಲ್ಲಿ ಹೋಗಿದ್ದೀರ ಎಂದು ಪ್ರಶ್ನಿಸಿದರು.

ಇಂತಹ ವಿಚಾರಗಳು ಇದ್ದಾಗ ಪ್ರಿಯಾಂಕ್ ಖರ್ಗೆ ಅವರ ಧ್ವನಿ ಅಡಗಿ ಹೋಗುತ್ತದೆ. ಎಷ್ಟಾದರೂ ಹೇಳಿ; ಏನಾದರೂ ಹೇಳಿ- ಅವರು ವಿಚಾರಗಳ ಸೂಕ್ಷ್ಮತೆಯನ್ನೇ ಕಳೆದುಕೊಂಡಿದ್ದಾರೆ ಎಂದರು. ಎಷ್ಟೇ ಅಂಕುಶದಲ್ಲಿ ಅವರಿಗೆ ಚುಚ್ಚಿದರು ತಲೆಗೆ ಬಂದ ಹಾಗೆ, ಮನಬಂದ ಹಾಗೆ ಮಾತನಾಡುತ್ತಾರೆ. ರಾಜ್ಯದ ಜನ ಪಶ್ಚಾತ್ತಾಪ ಪಡುತ್ತಿದ್ದು, ಜನರ ಜೀವವನ್ನು ತೆಗೆದುಕೊಳ್ಳುವ ಸರ್ಕಾರ ತೊಲಗಲಿ; ಸಾಕಪ್ಪ ಸಾಕು ಈ ಸರ್ಕಾರ ಎಂದು ಹೇಳುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ತಿಳಿಸಿದರು.

ಈ ಸುದ್ದಿಯನ್ನೂ ಓದಿ | EPFO rules: ಮಹತ್ವದ ಬದಲಾವಣೆ- ಪಿಎಫ್ ಖಾತೆಯಿಂದ ಶೇ. 100ರಷ್ಟು ವಿಥ್‌ಡ್ರಾ ಸಾಧ್ಯ!

ಈ ವೇಳೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಮತ್ತು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ್ ಅವರು ಉಪಸ್ಥಿತರಿದ್ದರು.