DK Shivakumar: ತಡರಾತ್ರಿ ಡಿಸಿಎಂ ಡಿಕೆ ಶಿವಕುಮಾರ್ ನಗರ ಸಂಚಾರ, ರಸ್ತೆ ಕಾಮಗಾರಿ ಪರಿಶೀಲನೆ
Bengaluru: ಇನ್ನು ಮುಂದೆ ಎಲ್ಲೇ ರಸ್ತೆ ಗುಂಡಿ ಕಂಡುಬಂದರೂ ‘‘ಫಿಟ್ ಮೈ ಸ್ಟ್ರೀಟ್’’ ಆ್ಯಪ್ ಮೂಲಕ ಮಾಹಿತಿ ನೀಡಿದರೆ ನಮ್ಮ ಅಧಿಕಾರಿಗಳು ಗುಂಡಿ ಮುಚ್ಚಿಸುವ ಕೆಲಸ ಮಾಡುತ್ತಾರೆ. ರಸ್ತೆ ಗುಂಡಿಗಳ ಶಾಶ್ವತ ಪರಿಹಾರಕ್ಕೆ ಕಾಂಕ್ರೀಟ್ ರಸ್ತೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು


ಬೆಂಗಳೂರು : ಬೆಂಗಳೂರಿನಲ್ಲಿ (Bengaluru) ರಾತ್ರೋರಾತ್ರಿ ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ಅವರು ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಸೋಮವಾರ ರಾತ್ರಿ ಬೆಂಗಳೂರಿನ ರಸ್ತೆ ಗುಂಡಿ ಸಮಸ್ಯೆಗಳ ಪರಿಶೀಲನೆ ನಡೆಸಿದರು. ಸರಿಯಾಗಿ ತಡರಾತ್ರಿ 12 ಗಂಟೆ ವೇಳೆಗೆ ರೌಂಡ್ಸ್ ಕೈಗೊಂಡ ಡಿಕೆಶಿಗೆ, ಬಿಬಿಎಂಪಿ ಆಯುಕ್ತ ಮಹೇಶ್ವರ್ ರಾವ್ ಸಾಥ್ ನೀಡಿದರು.
ಯಲಹಂಕ ವಿಧಾನಸಭಾ ಕ್ಷೇತ್ರದ ಬಾಗಲೂರು ಬಸ್ ನಿಲ್ದಾಣದ ಬಳಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿಯ ಗುಣಮಟ್ಟವನ್ನು ಖುದ್ದು ಪರಿಶೀಲಿಸಿದ್ದಾರೆ. ರಸ್ತೆಗುಂಡಿಗಳನ್ನು ಕೂಡಲೇ ಮುಚ್ಚಿ, ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಧ್ಯರಾತ್ರಿ 1.30ರವರೆಗೂ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ರೌಂಡ್ಸ್ ಹಾಕಿದರು. ನಗರದ ವಿವಿಧೆಡೆ ಅಂದಾಜು 80 ಕಿ.ಮೀ ನಷ್ಟು ಸಂಚರಿಸಿದರು. ಯಲಹಂಕದ ಅಟ್ಟೂರು ಮುಖ್ಯರಸ್ತೆ ಮತ್ತು ಬಾಗಲೂರು ಮುಖ್ಯರಸ್ತೆಗಳಲ್ಲಿ ಗುಂಡಿಮುಚ್ಚುವ ಕಾಮಗಾರಿಯನ್ನು ಖುದ್ದು ಪರಿಶೀಲಿಸಿದರು. ಡಾಂಬರು ಹಾಕುವ ಯಂತ್ರದ ಮೇಲೇರಿ ಕಾಮಗಾರಿ ವೀಕ್ಷಿಸಿದರು. ಇತ್ತೀಚಿಗಷ್ಟೇ ಈಜಿಪುರ ಮೇಲ್ಸೇತುವೆ ಕಾಂಕ್ರಿಟ್ ಸ್ಲ್ಯಾಬ್ ಕುಸಿದು ಆಟೋ ಜಖಂ ಆಗಿತ್ತು. ಅಲ್ಲಿಗೂ ತೆರಳಿ ಪರಿಶೀಲಿಸಿದರು.
ರಸ್ತೆ ಗುಂಡಿಗಳ ಬಗ್ಗೆ ಸಾರ್ವಜನಿಕರು ಸುಲಭವಾಗಿ ಮಾಹಿತಿ ನೀಡಲು, ‘ಗುಂಡಿ ಗಮನ’ ಎಂಬ ಮೊಬೈಲ್ ಆ್ಯಪ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಈ ಅಪ್ಲಿಕೇಶನ್ ಮೂಲಕ ಸಾರ್ವಜನಿಕರು ರಸ್ತೆ ಗುಂಡಿಗಳ ಬಗ್ಗೆ ಮಾಹಿತಿ ನೀಡಿದರೆ, ನಾವು ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುತ್ತೇವೆ. ಇನ್ನು ಮುಂದೆ ಎಲ್ಲೇ ರಸ್ತೆ ಗುಂಡಿ ಕಂಡುಬಂದರೂ ‘‘ಫಿಟ್ ಮೈ ಸ್ಟ್ರೀಟ್’’ ಆ್ಯಪ್ ಮೂಲಕ ಮಾಹಿತಿ ನೀಡಿದರೆ ನಮ್ಮ ಅಧಿಕಾರಿಗಳು ಗುಂಡಿ ಮುಚ್ಚಿಸುವ ಕೆಲಸ ಮಾಡುತ್ತಾರೆ. ರಸ್ತೆ ಗುಂಡಿಗಳ ಶಾಶ್ವತ ಪರಿಹಾರಕ್ಕೆ ಕಾಂಕ್ರೀಟ್ ರಸ್ತೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: BK Hariprasad: ಕಾಂಗ್ರೆಸ್ ಅಧ್ಯಕ್ಷರಾಗಿ ಆರ್‌ಎಸ್‌ಎಸ್ ಗೀತೆ ಹಾಡಿದ್ದರೆ ಡಿಕೆಶಿ ಕ್ಷಮೆ ಕೇಳಲಿ: ಬಿಕೆ ಹರಿಪ್ರಸಾದ್