ಬೆಂಗಳೂರು, ಮೇ 31: " ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ (Hemavathi Express Link Canal) ಯೋಜನೆಯ ಶೇ. 40 ರಷ್ಟು ಕಾಮಗಾರಿ ಮುಗಿದಿದೆ. ಹೀಗಿರುವಾಗ ಕಾಮಗಾರಿಯನ್ನು ನಿಲ್ಲಿಸುವ ಪ್ರಮೇಯವೇ ಬರುವುದಿಲ್ಲ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟಪಡಿಸಿದರು. ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶನಿವಾರ ಮಾತನಾಡಿದರು. ಹೇಮಾವತಿ ಲಿಂಕ್ ಕೆನಾಲ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, "ಅಲ್ಲಿರುವವರು, ಇಲ್ಲಿರುವವರು ಎಲ್ಲರೂ ನಮ್ಮ ರೈತರೇ. ಎಲ್ಲರ ಹಿತವನ್ನು ನಾವು ಕಾಪಾಡುತ್ತೇವೆ" ಎಂದರು.
ಬಿಜೆಪಿ ಶಾಸಕ ಸುರೇಶ್ ಗೌಡ ಪ್ರತಿಭಟನೆ ಬಗ್ಗೆ ಕೇಳಿದಾಗ, "ಶಾಸಕರಾದ ಕೃಷ್ಣಪ್ಪ, ಸುರೇಶ್ ಗೌಡ ಅವರಿಗೆ ಈ ಯೋಜನೆ ವಿಚಾರವಾಗಿ ಅರಿವಿದೆ. ಅವರೂ ಈ ಬಗ್ಗೆ ಮಾತನಾಡಿದ್ದಾರೆ. ಆದರೂ ಈಗ ಹೋರಾಟ ಮಾಡುತ್ತಿದ್ದಾರೆ. ಇದನ್ನು ನಾನು ತಪ್ಪು ಎಂದು ಹೇಳುವುದಿಲ್ಲ. ಮಾನಸಿಕವಾಗಿ ಎಲ್ಲಾ ಶಾಸಕರಿಗೂ ಈ ವಿಚಾರ ತಿಳಿದಿದೆ" ಎಂದು ಹೇಳಿದರು.
ವಿ.ಸೋಮಣ್ಣ ಅವರು ಈ ವಿಚಾರವಾಗಿ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, "ಅವರು ದೊಡ್ಡವರು, ಕೇಂದ್ರ ಸಚಿವರು. ಅವರ ಮಾರ್ಗದರ್ಶನವನ್ನೂ ಕೇಳೋಣ" ಎಂದರು.
ಈ ಸುದ್ದಿಯನ್ನೂ ಓದಿ | CM Siddaramaiah: ಸುಳ್ಳು ಸುದ್ದಿ, ದ್ವೇಷ ಭಾಷಣದ ವಿರುದ್ಧ ಕಾನೂನು ಕ್ರಮ ಜರುಗಿಸಿ: ಸಿಎಂ ಸೂಚನೆ
ಸಿಡಿದೆದ್ದ ರೈತರು; ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತ
ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಕಾಮಗಾರಿ ಪುನರಾರಂಭ ಗೊಂಡಿರುವುದರಿಂದ ಜಿಲ್ಲೆಯ ರೈತರು ಸಿಡಿದೆದ್ದಿದ್ದು, ಯೋಜನೆ ಸ್ಥಗಿತಗೊಳಿಸುವಂತೆ ನಿಷೇಧಾಜ್ಞೆ ನಡುವೆಯೂ ಶನಿವಾರ ಪ್ರತಿಭಟನೆ ನಡೆಸಿದರು. ಇದರಿಂದಾಗಿ ತಾತ್ಕಾಲಿಕವಾಗಿ ಕಾಮಗಾರಿಯನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿದೆ.
ಗುಬ್ಬಿ ತಾಲೂಕಿನ ಸುಂಕಾಪುರ ಮತ್ತು ಡಿ.ರಾಂಪುರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಇದನ್ನು ಲೆಕ್ಕಿಸದೆ ಸ್ವಾಮೀಜಿಗಳು, ರೈತರು, ಜನಪ್ರತಿನಿಧಿಗಳು ಸೇರಿ ಅಪಾರ ಸಂಖ್ಯೆಯಲ್ಲಿ ಹೋರಾಟಗಾರರು ಪ್ರತಿಭಟನೆ ನಡೆಸಿದರು.
ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸುಂಕಾಪುರ ನಾಲೆ ಬಳಿಯ ಸುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಆದರೂ ಲೆಕ್ಕಿಸದೇ ರೈತರು ಹಾಗೂ ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು 144 ಸೆಕ್ಷನ್ ವ್ಯಾಪ್ತಿಯ ಒಳಗೆ ಹಾಗೂ ಹೊರಗೆ ಸರ್ಕಾರ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಸುರೇಶ್ ಗೌಡ, ಜ್ಯೋತಿ ಗಣೇಶ್, ಎಂ.ಟಿ ಕೃಷ್ಣಪ್ಪ, ಮಸಾಲೆ ಜಯರಾಮ್ ಮುಂತಾದವರ ನೇತೃತ್ವದಲ್ಲಿ ತುಮಕೂರು ಮುಖ್ಯ ರಸ್ತೆ ಮಧ್ಯೆ ಟ್ರ್ಯಾಕ್ಟರ್‌ನಲ್ಲಿ ಮಣ್ಣು ತಂದು ಹಾಕಿ ಸರ್ಕಾರದ ವಿರುದ್ಧ ನೂರಾರು ರೈತರು ಆಕ್ರೋಶ ಹೊರಹಾಕಿದರು. ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಜಿಲ್ಲಾಡಳಿತ ಕಾಮಗಾರಿಯನ್ನ ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ. ಬಳಿಕ ರೈತರು, ಬಿಜೆಪಿ, ಜೆಡಿಎಸ್ ನಾಯಕರು ಪ್ರತಿಭಟನೆ ಕೈ ಬಿಟ್ಟಿದ್ದಾರೆ. ಅಲ್ಲದೇ ತಾತ್ಕಾಲಿಕ ಮಾತ್ರವಲ್ಲ ಸಂಪೂರ್ಣವಾಗಿ ಇದು ನಿಲ್ಲಬೇಕು. ಇಲ್ಲದಿದ್ದರೆ ಮತ್ತೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.