ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dinesh Gundu Rao: ಧರ್ಮಸ್ಥಳ ರಕ್ಷಣೆಗೆ ನಮ್ಮ ಬೆಂಬಲವಿದೆ: ಸಚಿವ ದಿನೇಶ್ ಗುಂಡೂರಾವ್ ಭರವಸೆ

ಬಿಜೆಪಿಯವರಿಗೆ ಕಾಂಗ್ರೆಸ್‌ನವರು ಹಿಂದೂ ವಿರೋಧಿಗಳು ಎಂದು ಬಿಂಬಿಸಬೇಕಿದೆ. ಹಿಂದೂ ಆಗಲು ಬಿಜೆಪಿ ಮೆಂಬರ್ ಶಿಪ್ ಪಡೆಯಬೇಕಿಲ್ಲ.‌ ಕಾಂಗ್ರೆಸ್‌ನಲ್ಲಿರುವ ನಾವೆಲ್ಲ ಹಿಂದೂಗಳಿಲ್ಲವೇ? ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಅಪ್ಪಟ ಹಿಂದೂ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಂಗಳೂರು: ಧರ್ಮಸ್ಥಳ ರಕ್ಷಣೆಗೆ ಸದಾ ನಮ್ಮ ಬೆಂಬಲವಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ. ಬೆಂಗಳೂರಿನ ವಿಕಾಸ ಸೌಧದಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಧರ್ಮಸ್ಥಳ ರಕ್ಷಣೆ ವಿಚಾರ ಬಂದಾಗ ಹಿಂದೇಟು ಹಾಕುವ ಪ್ರಶ್ನೆಯಿಲ್ಲ ಎಂದು ತಿಳಿಸಿದರು. ಬಿಜೆಪಿ ಕಾಂಗ್ರೆಸ್ ಮೇಲೆ ಹಿಂದೂ ವಿರೋಧಿ ಎಂದು ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದೆ. ಸೌಜನ್ಯ ಪ್ರಕರಣ ಇದ್ದಿದ್ದು ಬಿಜೆಪಿ ಅಧಿಕಾರದ ಅವಧಿಯಲ್ಲಿ.‌ ದುರುದ್ದೇಶಪೂರ್ವಕವಾಗಿ ಧರ್ಮಸ್ಥಳಕ್ಕೆ ಕಳಂಕ ತರುವ ಪ್ರಯತ್ನ ನಡೆಸಿದವರು ಯಾರು ಸಫಲರಾಗಲು ಸಾಧ್ಯವಿಲ್ಲ. ಎಸ್‌ಐಟಿ ತನಿಖೆಯಲ್ಲಿ ಎಲ್ಲವು ಸ್ಪಷ್ಟವಾಗಿ ಹೊರಬರಲಿದೆ ಎಂದು ಹೇಳಿದರು.

ಎಸ್.ಐ.ಟಿ. ತನಿಖಾ ರಿಪೋರ್ಟ್ ಬರಬೇಕಿದೆ. ಅನಾಮಿಕ ಕೊಟ್ಟ ದೂರು, ಅದರ ಮೇಲೆ ಉತ್ಖನನ ಮಾಡಿ ಸಿಕ್ಕ ವಸ್ತುಗಳ ಎಫ್‌ಎಸ್‌ಎಲ್‌ ಕಳಿಸಲಾಗಿದೆ. ಇವರೆಲ್ಲ ಯಾವ ರೀತಿ ನೂರಾರು ಶವಗಳಿವೆ ಅಂತ ದೊಡ್ಡ ಮಟ್ಟದಲ್ಲಿ ಬಿಂಬಿಸಿದ್ರು? ಇದು ಪೂರ್ವ ನಿಯೋಜಿತವಾಗಿತ್ತಾ? ಎಂಬುದರ ಬಗ್ಗೆಯೂ ಎಸ್.ಐ.ಟಿ. ತನಿಖೆ ಮಾಡುತ್ತಿದ್ದಾರೆ. ಬಿಜೆಪಿ ಇದನ್ನು ರಾಜಕೀಯಕ್ಕೆ ಬಳಸಿಕೊಳ್ತಿದೆ ಎಂದು ಆರೋಪಿಸಿದ ಅವರು, ಧರ್ಮಸ್ಥಳ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ರಾಜಕೀಯ ಲೇಪ ಹಚ್ಚುವ ಪ್ರಯತ್ನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯವರಿಗೆ ನಮ್ಮ ಮೇಲೆ ಆರೋಪ ಮಾಡಿ ಕಾಂಗ್ರೆಸ್‌ನವರು ಹಿಂದೂ ವಿರೋಧಿಗಳು ಎಂದು ಬಿಂಬಿಸಬೇಕಿದೆ. ಹಿಂದೂ ಆಗಲು ಬಿಜೆಪಿ ಮೆಂಬರ್ ಶಿಪ್ ಪಡೆಯಬೇಕಿಲ್ಲ.‌ ಕಾಂಗ್ರೆಸ್‌ನಲ್ಲಿ ನಾವೆಲ್ಲ ಹಿಂದೂಗಳಿಲ್ಲವೇ? ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಅಪ್ಪಟ ಹಿಂದೂ ಎಂದರು.‌‌

ಈ ಸುದ್ದಿಯನ್ನೂ ಓದಿ | MB Patil: ಎಸ್ಐಟಿ ರಚನೆ ಮಾಡಿದ್ದರಿಂದ ಒಳ್ಳೆಯದೇ ಆಗಿದೆ, ರಾಜ್ಯ ಸರ್ಕಾರ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಎಂ.ಬಿ.ಪಾಟೀಲ್‌

ಬಾನು ಮುಷ್ತಾಕ್ ಅವರ ಬಗ್ಗೆ ಬಿಜೆಪಿ ವಿರೋಧ ಏಕೆ?

ಬಾನು ಮುಷ್ತಾಕ್ ಅವರ ಬಗ್ಗೆ ಬಿಜೆಪಿಗೆ ಏನು ಸಮಸ್ಯೆ? ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವುದಕ್ಕೆ ಬಿಜೆಪಿ ಯಾಕೆ ವಿರೋಧಿಸುತ್ತಿದೆ? ನಮ್ಮ ರಾಜ್ಯದ ಮಹಿಳೆ, ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಅಂದು ನಿಸಾರ್ ಅಹ್ಮದ್ ಅವರನ್ನು ಒಪ್ಪಿದವರು ಇಂದು ಬಾನು ಮುಷ್ತಾಕ್ ಅವರಿಗೆ ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ? ಇದು ಬಿಜೆಪಿಯವರ ಸಂಕುಚಿತ ಮನೋಭಾವ ತೋರಿಸುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದರು.‌