ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಕ್ಟೋಬರ್‌ 28ರಂದು ಡಿಕೆಶಿ-ತೇಜಸ್ವಿ ಸೂರ್ಯ ಭೇಟಿ; ಸುರಂಗ ರಸ್ತೆ ಯೋಜನೆ ಬಗ್ಗೆ ಚರ್ಚೆ?

ಡಿಕೆಶಿ ಅವರ ಮಹತ್ವದ ಸುರಂಗ ರಸ್ತೆ ಯೋಜನೆಗೆ ಸಂಸದ ತೇಜಸ್ವಿ ಸೂರ್ಯ ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಡಿಕೆಶಿ ಈ ವಿಚಾರವಾಗಿ ತೇಜಸ್ವಿ ಸೂರ್ಯ ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ತಿಳಿಸಿದ್ದಾರೆ. ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಕೆರಳಿಸಿರುವ ಈ ಭೇಟಿ ಅಕ್ಟೋಬರ್‌ 28ರಂದು ನಡೆಯಲಿದೆ.

ಬೆಂಗಳೂರು, ಅ. 26: "ಉದ್ಯಮಿಗಳು ನಮ್ಮ ಸಹೋದರ, ಸಹೋದರಿಯರು. ಬೆಂಗಳೂರು ನಿಮ್ಮ ನಗರ, ಇದರ ಘನತೆಗೆ ಘಾಸಿ ಮಾಡಬೇಡಿ ಎಂದು ಹೇಳಿದ್ದೇನೆ. ನಮ್ಮನ್ನು ಟೀಕೆ ಮಾಡಿದವರನ್ನು ದೂರ ಮಾಡಲು ಆಗುವುದಿಲ್ಲ. ಅವರ ಸಲಹೆ ಸೂಚನೆಗಳನ್ನು ನಾವು ಕೇಳಬೇಕು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ಕಬ್ಬನ್ ಪಾರ್ಕ್‌ನಲ್ಲಿ (Cubbon Park) ಭಾನುವಾರ ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ನಡೆದ ನಾಗರಿಕರ ಜತೆ ಸಂವಾದದ ನಂತರ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಉದ್ಯಮಿಗಳ ಜತೆ ಡಿನ್ನರ್ ಮೀಟಿಂಗ್ ಬಗ್ಗೆ ಕೇಳಿದಾಗ, "ನೀವು ಟೀಕೆ‌ ಮಾಡಿದರೆ ಈ ನಗರದ ಬಗ್ಗೆ ಅಂತಾರಾಷ್ಟ್ರೀಯ ಸುದ್ದಿಯಾಗುತ್ತದೆ‌ ಎಂದು ಅವರಿಗೆ ಹೇಳಿದ್ದೇನೆ. ಉಳಿದ ಚರ್ಚೆ ವಿಚಾರಗಳನ್ನು ಸಮಯ ಬಂದಾಗ ತಿಳಿಸುತ್ತೇನೆ. ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಷಾ ಮತ್ತಿತರರ ಜತೆ ಮಾತುಕತೆ ನಡೆಸಲಾಯಿತು. ಎಲ್ಲರೂ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಅತ್ಯುತ್ತಮ ಸಲಹೆಗಳನ್ನು ನೀಡಿದ್ದಾರೆ. ಕಂಪನಿಗಳಲ್ಲಿ ವೈಯಕ್ತಿಕವಾಗಿ ತೀರ್ಮಾನ ತೆಗೆದುಕೊಳ್ಳಬಹುದು. ಪ್ರಜಾಪ್ರಭುತ್ವ ಹಾಗೂ ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಕೆಲಸ ಮಾಡುವಾಗ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಮುಖ್ಯ ಸಲಹಾ ಸಮಿತಿಗೆ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಅವರು ಸಹ ತೆರಿಗೆ ಪಾವತಿದಾರರು. ಬೆಂಗಳೂರಿನ ನಾಗರಿಕರಾದ ಅವರ ಮಾತುಗಳನ್ನೂ ಕೇಳಬೇಕಲ್ಲವೇ?" ಎಂದರು.

ರೆಡ್ ಲೈನ್ ಮೆಟ್ರೋ; ಕೇಂದ್ರ ಸಚಿವರಿಗೆ ಮನವಿ

ರೆಡ್ ಲೈನ್ ಮೆಟ್ರೋಗೆ ಕೇಂದ್ರ ಸರ್ಕಾರ ಅನುಮತಿ ನೀಡಿರಲಿಲ್ಲ. ಈಗ ಮತ್ತೊಮ್ಮೆ ಬಿಎಮ್ಆರ್‌ಸಿಎಲ್ ಡಿಪಿಆರ್ ತಯಾರಿಸಿರುವ ಬಗ್ಗೆ ಕೇಳಿದಾಗ, "ಜನಗಳ ಅನುಕೂಲಕ್ಕಾಗಿ ಮೆಟ್ರೋ ಮಾರ್ಗ ವಿಸ್ತರಣೆ ಮಾಡಲೇಬೇಕು. ಜತೆಗೆ ಡಬಲ್ ಡೆಕ್ಕರ್ ಸಹ ಮಾಡಬೇಕು. ಕೇಂದ್ರ ಸಚಿವರು ಅಕ್ಟೋಬರ್‌ 30ರಂದು ಬೆಂಗಳೂರಿಗೆ ಬರಲಿದ್ದಾರೆ. ಅವರಿಗೂ ಈ ಬಗ್ಗೆ ಮನವಿ ಸಲ್ಲಿಸಲಾಗುವುದು. ಕೇಂದ್ರದಿಂದ ಶೇ. 12-13ರಷ್ಟು ಹಣ ಕೊಡುತ್ತಿದ್ದಾರೆ. ಮಿಕ್ಕ ಹಣವನ್ನು ನಾವೇ ಬಾರಿಸುತ್ತಿರುವುದು. ನಮ್ಮ‌ ಕೆಲಸ‌ ನಾವು ಮಾಡುತ್ತಿದ್ದೇವೆ" ಎಂದರು.

ಸಂಸದ ತೇಜಸ್ವಿ ಸೂರ್ಯ ‌ಭೇಟಿಗೆ ಸಮಯ ನೀಡಿದ್ದೇನೆ

ನಿಮ್ಮ ಕೆಲಸಗಳ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದಾಗ, "ಸಂಸದ ತೇಜಸ್ವಿ ಸೂರ್ಯ ಹೊರತಾಗಿ ಯಾರೂ ವಿರೋಧ ಮಾಡುತ್ತಿಲ್ಲ. ಟೀಕೆ ಮಾಡುವುದನ್ನು ನಾನು ವಿರೋಧ ಮಾಡುತ್ತಿಲ್ಲ. ಪರ್ಯಾಯ ಮಾರ್ಗಗಳ ಬಗ್ಗೆಯೂ ತಿಳಿಸಬೇಕು. ಅವರ ಸಲಹೆಗಳು ಚೆನ್ನಾಗಿದ್ದರೆ ಅದನ್ನೂ ಸಹ ಪರಿಗಣಿಸಲಾಗುವುದು. ಸಾರ್ವಜನಿಕರ ಪರವಾಗಿ ಭೇಟಿ ಮಾಡುತ್ತೇವೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಮಂಗಳವಾರ ಭೇಟಿಗೆ ಸಮಯ ನೀಡಿದ್ದೇನೆ. ಅವರ ಸಲಹೆಗಳು ಸೂಕ್ತವಾಗಿದ್ದರೆ ಅದನ್ನೂ ಸ್ವೀಕರಿಸಲಾಗುವುದು. ನಾಗರಿಕರೊಬ್ಬರು ನನ್ನನ್ನು ಅಡ್ಡ ಹಾಕಿ ಯಾವುದೇ ಕಾರಣಕ್ಕೂ ಟನಲ್ ಯೋಜನೆ ನಿಲ್ಲಬಾರದು ಎಂದು ಬೆಂಬಲಿಸಿದರು" ಎಂದು ಹೇಳಿದರು.

100 ಕಚೇರಿಗಳಿಗೆ ಶಂಕುಸ್ಥಾಪನೆ

100 ಕಾಂಗ್ರೆಸ್ ಕಚೇರಿಗಳ ಶಂಕುಸ್ಥಾಪನೆಗೆ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸುತ್ತಿರುವ ಬಗ್ಗೆ ಕೇಳಿದಾಗ, "ಮಹಾತ್ಮ ಗಾಂಧಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ ಹಾಗೂ ಕಾಂಗ್ರೆಸ್ ಅಧ್ಯಕ್ಷರಾಗಿ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಕೆಲಸ ಕೈಗೆತ್ತಿಕೊಂಡಿದ್ದೇವೆ. ಕಾಂಗ್ರೆಸ್ ಕಚೇರಿ ಪಕ್ಷದ ಕಾರ್ಯಕರ್ತರಿಗೆ ದೇವಾಲಯವಿದ್ದಂತೆ" ಎಂದರು.

"ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಅವರು ಶಾಲೆಗಳು, ಕನ್ವೆನ್ಷನ್ ಸೆಂಟರ್, ವಿಶ್ವ ವಿದ್ಯಾಲಯಗಳನ್ನು ಮಾಡಿದ್ದಾರೆ. ಕಾರ್ಯಕರ್ತರ ಅನುಕೂಲಕ್ಕಾಗಿ ರಾಜ್ಯಾದ್ಯಂತ 100 ಕಾಂಗ್ರೆಸ್ ಕಚೇರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರಾಹುಲ್ ಗಾಂಧಿ ಒಂದು ದಿನ ಬಂದು ಈ ಕೆಲಸಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈಗಾಗಲೇ ಅನೇಕ ಕಡೆ ಕಚೇರಿ ನಿರ್ಮಾಣ ಕೆಲಸ ಪ್ರಾರಂಭವಾಗಿದೆ. ಬಿಹಾರ ಚುನಾವಣೆ ನಂತರ ದಿನಾಂಕ ನಿಗದಿಯಾಗಬಹುದು" ಎಂದು ಹೇಳಿದರು.

ದೆಹಲಿಗೆ ಯಾವಾಗಲೂ ಭೇಟಿ ನೀಡುತ್ತಿರುತ್ತೇನೆ

ದೆಹಲಿ ಭೇಟಿ ಯಾವಾಗ ಎಂದು ಕೇಳಿದಾಗ, "ಕೆಲಸ ಇದ್ದಾಗಲೆಲ್ಲ ಹೋಗುತ್ತಿರುತ್ತೇನೆ. ಪ್ರತಿದಿನವೂ ಹೋಗುತ್ತೇನೆ, ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದೆನಿಸಿದಾಗಲೆಲ್ಲ ಭೇಟಿ ನೀಡುತ್ತೇನೆ. ಶಾಪಿಂಗ್, ಕೋರ್ಟ್ ಕೆಲಸ, ಮಾಧ್ಯಮದವರನ್ನು ಭೇಟಿ ಮಾಡಲು ಹೋಗುತ್ತಿರುತ್ತೇನೆ" ಎಂದರು.

ಅಕ್ರಮ ಬ್ಯಾನರ್ ಫ್ಲೆಕ್ಸ್ ತೆರವು

ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಅಕ್ರಮವಾಗಿ ಅಳವಡಿಸುತ್ತಿರುವ ಬಗ್ಗೆ ಹಾಗೂ ನಡಿಗೆ ಕಾರ್ಯಕ್ರಮದ ಬಗ್ಗೆಯೂ ಫ್ಲೆಕ್ಸ್ ಅಳವಡಿಸಿರುವ ಬಗ್ಗೆ ಕೇಳಿದಾಗ, "ಯಾರೇ ಬ್ಯಾನರ್ ಹಾಗೂ ಫ್ಲೆಕ್ಸ್ ಅಳವಡಿಸಿದ್ದರು ತೆರವುಗೊಳಿಸುತ್ತೇವೆ. ಸರ್ಕಾರಿ ಕಾರ್ಯಕ್ರಮ ಆದ ಕಾರಣ ಜನರಿಗೆ ತಿಳಿಯಲಿ ಎಂದು ಅಳವಡಿಸಿದ್ದೇವೆ. ಈಗ ನೂತನ ಪಾಲಿಕೆಗಳಾಗಿದ್ದು, ನಗರದ ಎಲ್ಲಿಯೇ ಅಕ್ರಮ ಬ್ಯಾನರ್ ಅಳವಡಿಸಿದ್ದರೂ ಅವುಗಳನ್ನು ತೆರವುಗೊಳಿಸಿ ಪ್ರಕರಣ ದಾಖಲಿಸಲಾಗುವುದು. ಶಾಸಕ ರಿಜ್ವಾನ್, ಹ್ಯಾರೀಸ್ ಯಾರೇ ಅಳವಡಿಸಿದರೂ ಕೇಸ್ ದಾಖಲಿಸುತ್ತಾರೆ" ಎಂದರು.

"ಜನರ ಸಮಸ್ಯೆ ಆಲಿಸುವುದು ನಮ್ಮ ಕರ್ತವ್ಯ. ನಗರದಾದ್ಯಂತ ಇರುವ ದೊಡ್ಡ ಉದ್ಯಾನಗಳನ್ನು ಗುರುತಿಸಿ ಬೆಂಗಳೂರು ನಡಿಗೆ ಕಾರ್ಯಕ್ರಮ ವಿಸ್ತರಿಸಲಾಗುವುದು. ನಾನು ಬೆಂಗಳೂರಿನಲ್ಲಿದ್ದಾಗ ಪ್ರತಿ ಶನಿವಾರ, ಭಾನುವಾರ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜನರ ಬಳಿಗೆ ಸರ್ಕಾರವನ್ನು ತೆಗೆದುಕೊಂಡು ಹೋಗಲಾಗುತ್ತಿದೆ" ಎಂದು ತಿಳಿಸಿದರು.

ಲೂಟಿ ಮಾಡಿದ್ದರೆ ಕುಮಾರಸ್ವಾಮಿ ಎತ್ತಿಕೊಂಡು ಹೋಗಲಿ

ಖಾತೆ ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ ಎನ್ನುವ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, "ಲೂಟಿ ಮಾಡಿದ ಹಣ ಜೇಬಿನಲ್ಲಿದ್ದರೆ ಅವರು ಎತ್ತಿಕೊಂಡು ಹೋಗಲಿ" ಎಂದು ತಿರುಗೇಟು ನೀಡಿದರು.

"ಎ ಖಾತೆ, ಬಿ ಖಾತೆ ಬಗ್ಗೆ ಕೇವಲ ಟೀಕೆ ಮಾತ್ರ. ಅದರಲ್ಲಿ ಯಾವುದೇ ಸಲಹೆ ಸೂಚನೆಗಳಿಲ್ಲ. ಬಿ ಖಾತೆಗಳನ್ನು ಬಿಜೆಪಿ ಅವಧಿಯಲ್ಲಿ ಮಾಡಲಾಯಿತು. ಇದನ್ನು ಮಾಡಲು ಹೇಳಿದವರು ಯಾರು? ಈಗ ಜನರು ಆಸ್ತಿ ಖರೀದಿ ಮಾಡಿದ್ದಾರೆ‌. ಆದರೆ ಯಾರಿಗೂ ಬ್ಯಾಂಕ್ ಗಳಿಂದ ಸಾಲ ದೊರೆಯುತ್ತಿಲ್ಲ. ಈಗ ಆ ಜಾಗದಲ್ಲಿ ಕಟ್ಟಿರುವ ಕಟ್ಟಡಗಳನ್ನು ಒಡೆದು ಹಾಕಲು ಆಗುತ್ತದೆಯೇ? ಈ ಹಿಂದೆ ಬೆಂಗಳೂರು ಪಕ್ಕದ ಹಳ್ಳಿಗಳಲ್ಲಿ ನಿವೇಶನ ಖರೀದಿ ಮಾಡಿದ್ದಾರೆ. ಈಗ ನಗರದ ಒಳಗೆ ಸೇರಿಕೊಂಡಿದೆ. ನಾವು ಅಂತಹ ಆಸ್ತಿಗಳನ್ನು ಗಟ್ಟಿ ಮಾಡುವ ಕೆಲಸ ಮಾಡುತ್ತಿದ್ದೇವೆ" ಎಂದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಹಿಂದೆಯೇ ಸೂಚನೆ ನೀಡಿತ್ತು ಎನ್ನುವ ಬಗ್ಗೆ ಕೇಳಿದಾಗ, "ಇದರ ಬಗ್ಗೆ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡುತ್ತಾರೆ" ಎಂದು ಹೇಳಿದರು.