ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Assembly Session: ಬಡವರಿಗೆ ಸೂರು, ಅನ್ನ, ಉದ್ಯೋಗ, ರೈತರಿಗೆ ಭೂಮಿ ಕೊಟ್ಟಿದ್ದು ಕಾಂಗ್ರೆಸ್: ಡಿಕೆಶಿ

DK Shivakumar: ನಿಯಮ 69ರ ಅಡಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು 38 ಶಾಸಕರು 6 ಗಂಟೆ 17 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದು, ಜನ ನಮ್ಮನ್ನು ಆಡಳಿತದಲ್ಲಿ ಕೂರಿಸಿದ್ದಾರೆ. ಪ್ರತಿಪಕ್ಷದಲ್ಲಿರುವವರೂ ಈ ಹಿಂದೆ ಆಡಳಿತ ಮಾಡಿದ್ದಾರೆ. ಈ ಸರ್ಕಾರದಲ್ಲಿ ಆಡಳಿತ ಪಕ್ಷದ 139 ಶಾಸಕರಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ, ಮುಖ್ಯಮಂತ್ರಿಗಳು ಆಗ ವಿರೋಧ ಪಕ್ಷದ ನಾಯಕರಾಗಿ ಇಡೀ ರಾಜ್ಯದ ಪ್ರವಾಸ ಮಾಡಿ ಜನರ ಆಸೆ, ಆಕ್ರೋಶ ಗಮನದಲ್ಲಿಟ್ಟುಕೊಂಡು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆವು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರು: ಈ ದೇಶದಲ್ಲಿ ಬಡವರಿಗೆ ಸೂರು, ಹೊಟ್ಟೆ ತುಂಬಿಸಲು ಅನ್ನ, ಕೆಲಸ ಮಾಡಲು ಉದ್ಯೋಗ, ಉಳುವವನಿಗೆ ಭೂಮಿ ಕೊಟ್ಟಿರುವುದು, ಫಾರಂ 53 ತಂದು ಬಗರ್ ಹುಕುಂ ಸಾಗುವಳಿ ಜಮೀನು ಸಕ್ರಮ, ಅರಣ್ಯ ಪ್ರದೇಶದಲ್ಲಿ ವಾಸವಿರುವ ಬುಡಕಟ್ಟು ಜನರಿಗೆ ಭೂಮಿ ಕೊಟ್ಟಿರುವುದು ಕಾಂಗ್ರೆಸ್ ಸರ್ಕಾರ. ಇದೇ ನಮ್ಮ ಇತಿಹಾಸ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ವಿಧಾನಸಭೆಯಲ್ಲಿ ಶುಕ್ರವಾರ ತಿಳಿಸಿದರು. (Karnataka Assembly Session) ನಿಯಮಾವಳಿ 69ರ ಅಡಿಯಲ್ಲಿ ಅಭಿವೃದ್ಧಿ ಮತ್ತು ಅತಿವೃಷ್ಟಿ ಸಂಕಷ್ಟ ಕುರಿತ ವಿಶೇಷ ಚರ್ಚೆಗೆ ಅವರು ಉತ್ತರಿಸಿದರು.

ಬೇಕಿದ್ದರೆ ನೀವು ನಿಮ್ಮ ಸರ್ಕಾರದ ಸಾಧನೆಗಳನ್ನು ಹೇಳಿ. ನಾವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ದೇಶದ ಗೌರವಾನ್ವಿತ ಪ್ರಧಾನಮಂತ್ರಿಗಳು ಟೀಕೆ ಮಾಡಿದ್ದರು. ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಇದು ಜಾರಿ ಅಸಾಧ್ಯ ಎಂದರು. ಈ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳಿದರು. ಆದರೆ ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ಕರ್ನಾಟಕ ಮಾದರಿ ಅನುಸರಿಸಲಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಯೋಜನೆಗಳೇ ಹೊರತು ಬಿಜೆಪಿ ಯೋಜನೆಗಳಲ್ಲ ಎಂಬುದನ್ನು ಈ ಸದನದಲ್ಲಿ ಮತ್ತೊಮ್ಮೆ ಹೇಳುತ್ತೇನೆ ಎಂದು ತಿಳಿಸಿದರು.

ಚುನಾವಣೆ ಸಂದರ್ಭದಲ್ಲಿ ನಾನು ಒಂದು ಮಾತು ಹೇಳಿದ್ದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ಹೇಳಿದ್ದೆ. ಈ ದಾನ ಧರ್ಮ ಮಾಡುವ ಕೈಗೆ ಜನ ಅಧಿಕಾರ ಕೊಟ್ಟಿದ್ದಕ್ಕೆ ಐದು ಗ್ಯಾರಂಟಿ ಕೊಟ್ಟಿದೆ. ಈ ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿಗಳು ಸೇರಿ ಕೈ ಗಟ್ಟಿಯಾಯಿತು. ಇದಕ್ಕೆಲ್ಲ ಉತ್ತರವನ್ನು 2028ರಲ್ಲಿ ರಾಜ್ಯದ ಜನ ಉತ್ತರ ನೀಡಲಿದ್ದಾರೆ ಎಂದು ಅವರು ಹೇಳಿದರು.

ನಿಯಮ 69ರ ಅಡಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು 38 ಶಾಸಕರು 6 ಗಂಟೆ 17 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದು, ಜನ ನಮ್ಮನ್ನು ಆಡಳಿತದಲ್ಲಿ ಕೂರಿಸಿದ್ದಾರೆ. ಪ್ರತಿಪಕ್ಷದಲ್ಲಿರುವವರೂ ಈ ಹಿಂದೆ ಆಡಳಿತ ಮಾಡಿದ್ದಾರೆ. ಈ ಸರ್ಕಾರದಲ್ಲಿ ಆಡಳಿತ ಪಕ್ಷದ 139 ಶಾಸಕರಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ, ಮುಖ್ಯಮಂತ್ರಿಗಳು ಆಗ ವಿರೋಧ ಪಕ್ಷದ ನಾಯಕರಾಗಿ ಇಡೀ ರಾಜ್ಯದ ಪ್ರವಾಸ ಮಾಡಿ ಜನರ ಆಸೆ, ಆಕ್ರೋಶ ಗಮನದಲ್ಲಿಟ್ಟುಕೊಂಡು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆವು ಎಂದರು.

ನಾವು ಜನರ ಕಲ್ಯಾಣಕ್ಕಾಗಿ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದೆವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾನು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ. ಆಗ ಅವರು ಈ ಐದು ಗ್ಯಾರಂಟಿಗಳನ್ನು ವರ್ಷಕ್ಕೊಂದು ಗ್ಯಾರಂಟಿ ಜಾರಿ ಮಾಡಿಕೊಂಡು ಹೋಗಿ ಎಂದು ಸಲಹೆ ನೀಡಿದರು. ಆಗ ನಾನು ಏನು ಮಾತನಾಡದೇ, ಹಿರಿಯರ ಸಲಹೆ ಸ್ವೀಕರಿಸಿದೆ. ನಾನು ಹಾಗೂ ಮುಖ್ಯಮಂತ್ರಿಗಳು ಕೂತು ಚರ್ಚೆ ಮಾಡಿ ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು. ನಾವು ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಎಲ್ಲಾ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆವು ಎಂದು ತಿಳಿಸಿದರು.‌

ಈ ಸುದ್ದಿಯನ್ನೂ ಓದಿ | KV Prabhakar: ವಿಶೇಷ ಚೇತನರು ಹುಟ್ಟುತ್ತಲೇ ಮನುಷ್ಯ ಜಗತ್ತಿನ‌ ಸಣ್ಣತನಗಳಿಂದ ಮುಕ್ತರಾದವರು: ಕೆ.ವಿ. ಪ್ರಭಾಕರ್

ಆಹಾರ ಭದ್ರತೆ ಕಾಯ್ದೆ ತಂದಿದ್ದು ಕಾಂಗ್ರೆಸ್

ಈ ಸಂದರ್ಭದಲ್ಲಿ ಅರವಿಂದ ಬೆಲ್ಲದ್ ಅವರು, ಮೋದಿ ಅವರು ಕೊಟ್ಟ ಅಕ್ಕಿ ಕೊಟ್ಟಿರಿ, ನೀವು ಎಲ್ಲಿ ಕೊಟ್ಟಿರಿ ಎಂದು ಕೇಳಿದರು. ಇದಕ್ಕೆ ತಿರುಗೇಟು ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ʼಬೆಲ್ಲದ್ ಅವರೇ ನಾನು ನಿಮ್ಮ ತಂದೆ ಜತೆಗೂ ಶಾಸಕನಾಗಿದ್ದೆ. ಅವರು ನಿಮ್ಮ ರೀತಿ ಮಾತನಾಡುತ್ತಿರಲಿಲ್ಲ. ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಮೊದಲ ದಿನವೇ ಬಸವ ಜಯಂತಿ ದಿನದಂದು ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂದು ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಿದ್ದರು. ಇದಾದ ನಂತರ ಸೋನಿಯಾ ಗಾಂಧಿ ಅವರ ಮುಖಂಡತ್ವದಲ್ಲಿ ಮನಮೋಹನ್ ಸಿಂಗ್ ಅವರು ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದರು. ಬಡವರ ಹೊಟ್ಟೆ ತುಂಬಿಸಲು ಈ ದೇಶದಲ್ಲಿ ಕಾನೂನು ತಂದಿದ್ದರೆ ಅದು ಕಾಂಗ್ರೆಸ್ ಸರ್ಕಾರʼ ಎಂದು ಅವರು ತಿಳಿಸಿದರು.