KV Prabhakar: ವಿಶೇಷ ಚೇತನರು ಹುಟ್ಟುತ್ತಲೇ ಮನುಷ್ಯ ಜಗತ್ತಿನ ಸಣ್ಣತನಗಳಿಂದ ಮುಕ್ತರಾದವರು: ಕೆ.ವಿ. ಪ್ರಭಾಕರ್
KV Prabhakar: ಭಿನ್ನ ಚೇತನರನ್ನು ಸಮಾಜದ ಅಸಹಜ ರೂಢಿಗತ ಕಣ್ಣುಗಳಿಂದ ನೋಡುವುದಕ್ಕಿಂತ ಮನುಷ್ಯ ಸಹಜ ಒಳಗಣ್ಣುಗಳಿಂದ ಗಮನಿಸಬೇಕಿದೆ. ಈ ಮಕ್ಕಳು ಜೀವನ ಪರ್ಯಂತ ಮಕ್ಕಳಾಗೇ ಇರುತ್ತಾರೆ. ಅಂದರೆ ಮಗುವಿನ ಸಹಜ ನಿಷ್ಕಲ್ಮಷ ಸ್ವಭಾವ ಜೀವನವಿಡೀ ಇರುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ.


ಬೆಂಗಳೂರು: ಭಿನ್ನ, ವಿಭಿನ್ನ ಸಾಧ್ಯತೆಗಳ ವಿಶೇಷ ಚೇತನರು ಹುಟ್ಟುತ್ತಲೇ ಮನುಷ್ಯ ಜಗತ್ತಿನ ಸಣ್ಣತನಗಳಿಂದ ಮುಕ್ತರಾದವರು. ಹೀಗಾಗಿ ಇವರೆಲ್ಲರೂ ಬುದ್ದನ ಮಕ್ಕಳು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ (KV Prabhakar) ಹೇಳಿದರು. ಬಾಲಭವನದಲ್ಲಿ ನಡೆದ ವಿಶೇಷ ಚೇತನ ಮಕ್ಕಳ ಸ್ವಾತಂತ್ರ್ಯ ದಿನಾಚರಣೆ ಮತ್ತು ಸಾಂಸ್ಕೃತಿಕ ಕಲರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಿನ್ನ ಚೇತನರನ್ನು ಸಮಾಜದ ಅಸಹಜ ರೂಢಿಗತ ಕಣ್ಣುಗಳಿಂದ ನೋಡುವುದಕ್ಕಿಂತ ಮನುಷ್ಯ ಸಹಜ ಒಳಗಣ್ಣುಗಳಿಂದ ಗಮನಿಸಬೇಕಿದೆ. ಈ ಮಕ್ಕಳು ಜೀವನ ಪರ್ಯಂತ ಮಕ್ಕಳಾಗೇ ಇರುತ್ತಾರೆ. ಅಂದರೆ ಮಗುವಿನ ಸಹಜ ನಿಷ್ಕಲ್ಮಷ ಸ್ವಭಾವ ಜೀವನವಿಡೀ ಇರುತ್ತದೆ ಎಂದು ತಿಳಿಸಿದರು.
ಬುದ್ದ ಜೀವಮಾನವಿಡೀ ಮನುಷ್ಯ ಜಗತ್ತನ್ನು ಸಣ್ಣತನಗಳಿಂದ ಮುಕ್ತಿಗೊಳಿಸಲು ಶ್ರಮಿಸಿದ್ದರು. ಅದಕ್ಕೇ ಇವರೆಲ್ಲರೂ ಬುದ್ದನ ಮಕ್ಕಳು. ಹೀಗಾಗಿ ನನಗೆ ಈ ಮಕ್ಕಳ ಬಗ್ಗೆ ಮಾತನಾಡುವುದು ಏನೂ ಇಲ್ಲ. ಆದರೆ, ಪೋಷಕರ ಜತೆ ನನ್ನ ಕೆಲವೊಂದು ಅನಿಸಿಕೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.
ಇಲ್ಲಿ ಸಂಕಟ ಪಡುತ್ತಿರುವವರು ಮಕ್ಕಳಲ್ಲ. ಮಕ್ಕಳು ತಮ್ಮ ಪಾಡಿಗೆ ತಾವು ಖುಷಿಯಾಗಿದ್ದಾರೆ. ಆದರೆ, ಮಕ್ಕಳ ಬಗ್ಗೆ ಸಂಕಟ ಪಡುತ್ತಾ ಪೋಷಕರು ದುಃಖ ಪಡುತ್ತಿದ್ದಾರೆ. ಈ ದುಃಖಕ್ಕೆ ಮೂಲ ಕಾರಣ ಹೋಲಿಕೆ. ಇತರೆ ಮಕ್ಕಳಂತೆ ನಮ್ಮ ಮಕ್ಕಳಿಲ್ಲ ಎನ್ನುವ ಹೋಲಿಕೆ. ಈ ಹೋಲಿಕೆಗೆ ಕೊನೆ ಇಲ್ಲ. ಎಲ್ಲಾ ಪೋಷಕರಿಗೂ ತಮ್ಮ ಮಕ್ಕಳನ್ನು ಇತರೆ ಮಕ್ಕಳ ಜತೆ ಹೋಲಿಕೆ ಮಾಡುವ ಮಾನಸಿಕ ಸಮಸ್ಯೆ ಇದೆ. ಸಮಾಜದ ರೂಢಿಗತ ಅಭಿಪ್ರಾಯಗಳು ಹೋಲಿಕೆಗೆ ಕಾರಣ. ಹೋಲಿಕೆಗೆ ಬ್ರೇಕ್ ಹಾಕಿದರೆ, ಸಂಕಟಕ್ಕೂ ಬ್ರೇಕ್ ಬೀಳುತ್ತದೆ.
ಹೋಲಿಕೆಯಿಂದ, ಪೋಷಕರು ನರಳಿ, ಇದನ್ನು ನೋಡಿ ಮಕ್ಕಳೂ ನರಳುತ್ತಾರೆ. ಹೋಲಿಕೆಯಿಂದ ಮೊದಲು ಪೋಷಕರು ಖುಷಿಯಾಗಿರುವ ಸ್ವತಂತ್ರ ಕಳೆದುಕೊಳ್ಳುತ್ತಾರೆ. ಬಳಿಕ, ಮಕ್ಕಳ ಖುಷಿಯ ಸ್ವತಂತ್ರ ಕಿತ್ತುಕೊಳ್ಳುತ್ತಾರೆ ಎಂದರು.
ಭಿನ್ನ ಚೈತನ್ಯದ ಮಕ್ಕಳಿಗೆ ವಿಶೇಷ ಅರ್ಹತೆ ಮತ್ತು ತರಬೇತಿ ಇರುವ ಶಿಕ್ಷಕರು ಬೇಕು ಎನ್ನುವುದೇನೋ ಸರಿ. ಆದರೆ ಸ್ವಾತಂತ್ರ್ಯ ದಿನಾಚರಣೆ, ಸಾಂಸ್ಕೃತಿಕ ಸಡಗರದಂತಹ ಈ ಕಾರ್ಯಕ್ರಮ ಪ್ರತ್ಯೇಕವಾಗಿ ನಡೆಸಬೇಕಿಲ್ಲ. ಉಳಿದ ಮಕ್ಕಳ ಜತೆಗೇ, ಉಳಿದ ಪೋಷಕರ ಜತೆಗೇ ಆಚರಿಸುವುದು ಅರ್ಥಪೂರ್ಣ ಎಂದುಕೊಳ್ಳುತ್ತೇನೆ.
ಆಗಸ್ಟ್ 15 ರಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಪರೇಡ್‌ನಲ್ಲಿ ದೃಷ್ಟಿಹೀನ ಮಕ್ಕಳ ತಂಡವೂ ಉಳಿದ ಮಕ್ಕಳ ತಂಡದಷ್ಟೇ ಯಶಸ್ವಿಯಾಗಿ ಭಾಗವಹಿಸಿತ್ತು. ದೇಶಕ್ಕೆ ಒಲಂಪಿಕ್‌ನಲ್ಲಿ, ಕ್ರೀಡೆಗಳಲ್ಲಿ ಅತಿ ಹೆಚ್ಚು ಪದಕ ತರುತ್ತಿರುವುದು ಭಿನ್ನ ಚೈತನ್ಯದ ಪಟುಗಳೇ ಎನ್ನುವುದನ್ನು ಮರೆಯಬಾರದು.
ಹೀಗಾಗಿ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ. ಮುಂದಿನ ಜನವರಿ 26 ಮತ್ತು ಆಗಸ್ಟ್ 15 ರಂದು ವಿಶೇಷ ಚೇತನ ಮಕ್ಕಳ ತಂಡವೂ ಮಾಣಿಕ್ ಷಾ ಪರೇಡ್ ಮೈದಾನದಲ್ಲೇ ಉಳಿದ ಮಕ್ಕಳ ಜತೆ ಪ್ರದರ್ಶನ ನೀಡುವಂತಾಗಲಿ ಎಂದು ಬಯಸುತ್ತೇನೆ ಎಂದರು.
ಈ ಸುದ್ದಿಯನ್ನೂ ಓದಿ | Reliance Foundation: ರಿಲಯನ್ಸ್ ಫೌಂಡೇಷನ್ ನಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ; 5100 ವಿದ್ಯಾರ್ಥಿಗಳಿಗೆ ಅವಕಾಶ
ಈ ಸಂದರ್ಭದಲ್ಲಿ ಬಾಲಭವನ ಅಧ್ಯಕ್ಷ ಬಿ.ಆರ್.ನಾಯ್ಡು, ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ನಟರಾಜ್ ಹಾಗೂ 18 not out ಸರ್ಕಾರೇತರ ಸಂಸ್ಥೆಯ ಮುಖ್ಯಸ್ಥ ಬಸವರಾಜು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. 300 ಕ್ಕೂ ಹೆಚ್ಚು ಭಿನ್ನ, ವಿಭಿನ್ನ ಚೈತನ್ಯದ ಮಕ್ಕಳು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.