ಬೆಂಗಳೂರು: ಬದುಕು ಸರಳವಾದುದು. ಅದನ್ನು ಧನಾತ್ಮಕವಾಗಿ, ನಗುನಗುತ್ತಾ ಕಳೆಯಬೇಕು. ಸಂಕೀರ್ಣ ಮಾಡಿಕೊಳ್ಳಬಾರದು ಎಂದು ಉದ್ಯಮಿ, ಅಂಕಣಕಾರ, ಲೇಖಕ ಎಸ್. ಷಡಕ್ಷರಿ (S. Shadakshari) ಅಭಿಪ್ರಾಯಪಟ್ಟರು. ಅವರ ʼಯಶಸ್ವಿ ಬದುಕಿಗೆ ಸರಳ ಸೂತ್ರಗಳುʼ ಸೇರಿದಂತೆ ವಿಶ್ವವಾಣಿ ಪ್ರಕಾಶನದ 8 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ʼʼವಿಶ್ವೇಶ್ವರ ಭಟ್ಟರದು ದೈತ್ಯ ಪ್ರತಿಭೆ. ಅವರು ತಾವೂ ಬರೆದದ್ದಲ್ಲದೆ ಅನೇಕ ಹೊಸ ಬರಹಗಾರರನ್ನು ಕೈಹಿಡಿದು ಬರೆಸಿ ಬೆಳೆಸಿದರು. ಉದ್ಯಮಿಯಾಗಿದ್ದ ನನ್ನನ್ನೂ ಬರೆಯಲು ಹಚ್ಚಿ ಅಂಕಣ ಬರೆಸಿದರು. ಅದು ಅತ್ಯಲ್ಪ ಕಾಲದಲ್ಲಿ ಜನಪ್ರಿಯವಾಯಿತು. ನಗು- ನಲಿವು ಬದುಕಿಗೆ ಮುಖ್ಯ. ಭಟ್ಟರ ಜೀವನೋತ್ಸಾಹ ಅದಮ್ಯʼʼ ಎಂದು ಅವರು ನೆನೆದುಕೊಂಡರು.
ಈ ಸುದ್ದಿಯನ್ನೂ ಓದಿ: Vishwavani Book Release: ಮದುವೆಯ ಸುದ್ದಿ ವಿಶ್ವವಾಣಿಯಲ್ಲಿ ಬ್ರೇಕ್ ಆಗಿದ್ದರ ಹಿಂದಿನ ರಹಸ್ಯ ಬಹಿರಂಗಪಡಿಸಿದ ಸಂಸದ ತೇಜಸ್ವಿ ಸೂರ್ಯ!

ಇದೇ ಸಂದರ್ಭ ಪತ್ರಕರ್ತ, ಲೇಖಕ ರಾಜು ಅಡಕಳ್ಳಿ ಅವರ ʼಗೆದ್ದವರ ಕಥೆಗಳುʼ ಕೃತಿಯೂ ಬಿಡುಗಡೆಯಾಯಿತು. ಅವರು ಮಾತನಾಡಿ, ʼʼಭಟ್ಟರ ಬರ್ತ್‌ಡೇ ಅಂದರೆ ಅದು ಪುಸ್ತಕಗಳ ಬರ್ತ್‌ಡೇ. ಪುಸ್ತಕಗಳ ಮೂಲಕ ಜನ್ಮದಿನ ಆಚರಿಸುವ ಬೇರೆಯವರನ್ನು ಕಂಡಿಲ್ಲ. ಅವರು ಲೇಖಕರನ್ನು ಬೆಳೆಸುತ್ತಿದ್ದಾರೆ. ಅರುವತ್ತು ಎಂದರೆ ಬೇಂದ್ರೆಯವರು ಹೇಳಿದಂತೆ ಮರಳಿ ಅರಳುವ ಪ್ರಾಯʼʼ ಎಂದರು.
ʼʼಗೆದ್ದವರ ಕತೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಬೇಕಾದ ಸ್ಥಳೀಯ ಹೀರೋಗಳನ್ನು ಪರಿಚಯಿಸುವ ಕೆಲಸ ಮಾಡುತ್ತಿದ್ದೇನೆ. ನಿಖಿಲ್ ಕಾಮತ್ ಎಂಬವರು ನೌಕಾಪಡೆಯಲ್ಲಿದ್ದವರಷ್ಟೇ ಅಲ್ಲದೆ ರೇಸ್ ಬೋಟ್‌ಗಳನ್ನು ನಡೆಸಿ ಭಾರತಕ್ಕೆ ಪದಕ ತಂದವರು, ಇದು ಸ್ಥಳೀಯರಿಗೂ ಗೊತ್ತಿರಲಿಲ್ಲ. ಇಂಥ ಸಾಮಾನ್ಯರಲ್ಲಿ ಅಸಾಮಾನ್ಯರು ಇರುತ್ತಾರೆ. ಇಂಥವರನ್ನು ಮಾತನಾಡಿಸಿ ಅವರ ಬಗ್ಗೆ ಬರೆಯುವ ಪತ್ರಕರ್ತನ ಕಾಯಕ ಮಾಡಿದ್ದೇನೆʼʼ ಎಂದು ನುಡಿದರು.
ಬೆಂಗಳೂರಿನಲ್ಲಿ ಶನಿವಾರ (ಜುಲೈ 26) ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಅವರ ನಾಲ್ಕು ಪುಸ್ತಕ ಸೇರಿದಂತೆ ವಿಶ್ವವಾಣಿ ಪುಸ್ತಕ ಪ್ರಕಾಶನದ 8 ಕೃತಿಗಳು ಬಿಡುಗಡೆಯಾದವು. ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ.ಡಿ ವೀರೇಂದ್ರ ಹೆಗ್ಗಡೆ, ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ರಿಪಬ್ಲಿಕ್ ಕನ್ನಡ ವಾಹಿನಿಯ ಸಂಪಾದಕಿ ಶೋಭಾ ಮಳವಳ್ಳಿ, ವಿಶ್ವೇಶ್ವರ ಭಟ್, ಉದ್ಯಮಿ ಹಾಗೂ ಲೇಖಕರಾದ ಎಸ್. ಷಡಕ್ಷರಿ, ಉದ್ಯಮಿ ಮತ್ತು ಅಂಕಣಕಾರ ಕಿರಣ್ ಉಪಾಧ್ಯಾಯ, ಪತ್ರಕರ್ತ ರಾಜು ಅಡಕಳ್ಳಿ, ನಿರೂಪಕಿ ಹಾಗೂ ಲೇಖಕಿ ರೂಪಾ ಗುರುರಾಜ್ ಉಪಸ್ಥಿತರಿದ್ದರು.