Vishwavani Book Release: ಮದುವೆಯ ಸುದ್ದಿ ವಿಶ್ವವಾಣಿಯಲ್ಲಿ ಬ್ರೇಕ್ ಆಗಿದ್ದರ ಹಿಂದಿನ ರಹಸ್ಯ ಬಹಿರಂಗಪಡಿಸಿದ ಸಂಸದ ತೇಜಸ್ವಿ ಸೂರ್ಯ!
MP Tejasvi Surya: ಶನಿವಾರ ಬೆಂಗಳೂರಿನಲ್ಲಿ ವಿಶ್ವವಾಣಿ ಪತ್ರಿಕೆಯ ವತಿಯಿಂದ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ತಮ್ಮ ಮದುವೆಯ ಸುದ್ದಿ ವಿಶ್ವವಾಣಿ ಪತ್ರಿಕೆಯಲ್ಲಿ ಬ್ರೇಕ್ ಆಗಿದ್ದರ ಹಿಂದಿನ ರಹಸ್ಯವನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.


ಬೆಂಗಳೂರು: ವಿಶ್ವವಾಣಿ (Vishwavani) ಪತ್ರಿಕೆಯ ವತಿಯಿಂದ ಶನಿವಾರ (ಜು. 26) ನಡೆದ ಎಂಟು ಹೊಸ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸದ ತೇಜಸ್ವಿ ಸೂರ್ಯ (MP Tejasvi Surya), ''ವಿಶ್ವೇಶ್ವರ ಭಟ್ (Vishweshwar Bhat) 24 ಗಂಟೆಯೂ ಪತ್ರಕರ್ತರಾಗಿಯೇ ಇರುತ್ತಾರೆ. ಅವರೊಳಗಿನ ಪತ್ರಕರ್ತ ಸದಾ ಜಾಗೃತರಾಗಿ ಇರುತ್ತಾರೆ'' ಎನ್ನುತ್ತಾ ತಮ್ಮ ಉದಾಹರಣೆಯನ್ನೇ, ಮುಗುಳ್ನಗುತ್ತ ಸ್ವಾರಸ್ಯಕರವಾಗಿ ವಿವರಿಸಿದರು.
''ಬೆಂಗಳೂರಿನ ಹವ್ಯಕ ಮಹಾ ಸಭಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಸ್ನೇಹಿತರಾದ ಅರುಣ್ ಶ್ಯಾಮ್ ಅವರು ವಿಶ್ವೇಶ್ವರ ಭಟ್ ಅವರ ಬಳಿ ಮಾತನಾಡುವಾಗ, ತೇಜಸ್ವಿ ಸೂರ್ಯನಿಗೆ ಮದುವೆ ನಿಶ್ಚಯವಾಗಿದೆ ಎಂದರು. ಕೂಡಲೇ ವಿಶ್ವೇಶ್ವರ ಭಟ್ ಅವರು, ಹೌದೇ ಎಂದು ವಿಚಾರಿಸಿದರು. "ಹೌದು ಸರ್, ಇನ್ನೂ ಅಧಿಕೃತವಾಗಿ ನಿಶ್ಚಯವಾಗಬೇಕಷ್ಟೇʼʼ ಎಂದು ತಿಳಿಸಿದ್ದೆ. ಆದರೆ ಮರುದಿನ ಬೆಳಗ್ಗೆಯಿಂದ ಫೋನ್ ಕರೆಗಳ ಸುರಿಮಳೆಯೇ ಬಂದಿತು. ಏನೋ ರಾಜಕೀಯ ವಿಚಾರ ಆಗಿರಬಹುದು ಎಂದುಕೊಂಡರೆ, ಎಲ್ಲರ ಬಾಯಲ್ಲೂ ವಿಶ್ವವಾಣಿ ಪತ್ರಿಕೆಯಲ್ಲಿ ಬಂದಿರುವ ಸುದ್ದಿಯ ಮೇಲೆ ಪ್ರಶ್ನೆಯೋ ಪ್ರಶ್ನೆ. ನಾನೂ ನೋಡಿದಾಗ ಮದುವೆ ನಿಶ್ಚಿತಾರ್ಥದ ಸುದ್ದಿ ಮುಖಪುಟದಲ್ಲಿ ಪ್ರಕಟವಾಗಿತ್ತು. ನಾನು ಇದನ್ನು ನಿರೀಕ್ಷಿಸಿರಲಿಲ್ಲ. ವಿಶ್ವೇಶ್ವರ ಭಟ್ ಅವರೊಳಗಿನ ಪತ್ರಕರ್ತ ದಿನದ 24 ಗಂಟೆಯೂ ಜಾಗೃತ ಎನ್ನುವುದಕ್ಕೆ ಇದು ನನ್ನದೇ ಉದಾಹರಣೆʼʼ ಎಂದು ತೇಜಸ್ವಿ ಸೂರ್ಯ ಹೇಳಿದರು.
ಈ ಸುದ್ದಿಯನ್ನೂ ಓದಿ: Vishwavani Book Release: ಓದಿನಿಂದ ನಮ್ಮ ಇತಿಹಾಸವನ್ನು ವಿಭಿನ್ನವಾಗಿ ನೋಡಬಹುದು: ಡಾ. ಡಿ. ವೀರೇಂದ್ರ ಹೆಗ್ಗಡೆ
ವಿಶ್ವೇಶ್ವರ ಭಟ್ ಅವರ ನಾಯಕತ್ವ ಗುಣ
''ವಿಶ್ವೇಶ್ವರ ಭಟ್ ನನಗೆ ದ್ರೋಣಾಚಾರ್ಯ ಇದ್ದ ಹಾಗೆ. ಅವರ ಲೇಖನಗಳು, ಅಂಕಣಗಳನ್ನು ಓದಿ ನಾನು ಬೆಳೆದವನು. ಅವರ ನಾಯಕತ್ವ ಗುಣವನ್ನು ಕಂಡು ಕಲಿಯುವುದು ಬಹಳಷ್ಟಿದೆ. ಬೇರೆಯವರಲ್ಲಿರುವ ಒಳ್ಳೆಯ ಗುಣಗಳನ್ನು, ಪ್ರತಿಭೆಗಳನ್ನು ಎಲ್ಲರ ಎದುರೇ ಹೇಳುತ್ತಾರೆ. ಪ್ರೋತ್ಸಾಹಿಸುತ್ತಾರೆ. ಆದರೆ ತಿದ್ದಿಕೊಳ್ಳಬೇಕಾಗಿರುವುದನ್ನು ಗೌಪ್ಯವಾಗಿ ತಿಳಿ ಹೇಳುತ್ತಾರೆ. ಇದು ಉತ್ತಮ ನಾಯಕನಿಗೆ ಇರಬೇಕಾದ ಗುಣ'' ಎಂದು ಸಂಸದ ತೇಜಸ್ವಿ ಸೂರ್ಯ ವಿವರಿಸಿದರು.
''ಈಗ ಅನೇಕ ಮಂದಿ ವಿದೇಶ ಪ್ರವಾಸ ಹೋಗುತ್ತಾರೆ. ಆದರೆ ಅಲ್ಲಿ ಕಂಡಿದ್ದನ್ನು ಬರೆಯಲು ಜೀವನೋತ್ಸಾಹ ಬೇಕು. ವಿಶ್ವೇಶ್ವರ ಭಟ್ಟರು ಜೀವನೋತ್ಸಾಹದ ಗಣಿ'' ಎಂದು ಹೇಳಿದರು.

"ನಾನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವನು. ಆದರೆ ನನ್ನ ತಂದೆ ಕನ್ನಡದಲ್ಲಿ ಪಿಎಚ್‌ಡಿ ಮಾಡಿದ್ದರು. ಹೀಗಿರುವಾಗ ಮಗನಿಗೆ ಕನ್ನಡದ ಜ್ಞಾನ ಇರದಿದ್ದರೆ ಹೇಗೆ ಎಂದುಕೊಂಡು ಅವರು ಎಸ್.ಎಲ್. ಭೈರಪ್ಪ ಅವರ ಕಾದಂಬರಿಗಳನ್ನು ಓದಲು ಕೊಟ್ಟರು. ಹೀಗೆ ಓದುವ ಅಭಿರುಚಿಯನ್ನು ಬೆಳೆಸಿದೆ. ಬಳಿಕ ವಿಶ್ವೇಶ್ವರ ಭಟ್ ಅವರ ಅಂಕಣಗಳು, ಪ್ರತಾಪ್ ಸಿಂಹ ಅವರ ಅಂಕಣಗಳನ್ನು ಓದಿಕೊಂಡು ಬೆಳೆದೆ. ಸಾಕಷ್ಟು ವಿಷಯಗಳನ್ನು ಕಲಿತೆ. ನನಗೂ ಭಟ್ಟರು ಬರವಣಿಗೆಗೆ ಉತ್ತೇಜಿಸಿ ಬರೆಸಿದರು. ಅದಕ್ಕಾಗಿ ಸದಾ ಕೃತಜ್ಞʼʼ ಎಂದು ಅವರು ತಿಳಿಸಿದರು.
ʼʼವಿಶ್ವೇಶ್ವರ ಭಟ್ ದೇಶ ಸುತ್ತು-ಕೋಶ ಓದು ಎಂಬ ಮಾತನ್ನು ಅಕ್ಷರಶಃ ಪಾಲಿಸಿದವರು. ಶಿಸ್ತುಬದ್ಧ ಮತ್ತು ಸೃಜನಶೀಲವಾಗಿ ಬದುಕುವುದು ಹೇಗೆ ಎಂಬುದನ್ನೂ ಹೇಳಿಕೊಟ್ಟವರುʼʼ ಎಂದು ಹೇಳಿದರು.