ಬೆಂಗಳೂರು: ಮೈಸೂರು ದಸರಾ ಉದ್ಘಾಟಕರಾಗಿ ಸಾಹಿತಿ ಬಾನು ಮುಷ್ತಾಕ್ (Banu Mushtaq) ಅವರ ಆಯ್ಕೆ ವಿರೋಧಿಸಿ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸರ್ಕಾರದ ಕ್ರಮಕ್ಕೆ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಬಾನು ಮುಷ್ತಾಕ್ ಆಯ್ಕೆಗೆ ವಿರೋಧ ವ್ಯಕ್ತವಾಗಿರುವ ನಡುವೆ ಇತ್ತೀಚೆಗೆ ಹಾಸನದ ಅಮೀರ್ ಮೊಹಲ್ಲಾದಲ್ಲಿನ ಬಾನು ಮುಷ್ತಾಕ್ ನಿವಾಸಕ್ಕೆ ತೆರಳಿ, ಸರ್ಕಾರದ ಪರ ಜಿಲ್ಲಾಡಳಿತದಿಂದ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ನೀಡಲಾಗಿತ್ತು. ಇದನ್ನು ವಿರೋಧಿಸಿ ಅರ್ಜಿ ಸಲ್ಲಿಸಲಾಗಿದೆ.
ಸರ್ಕಾರದ ಕ್ರಮಕ್ಕೆ ತಡೆ ನೀಡುವಂತೆ ಕೋರಿ ಪ್ರತಾಪ್ ಸಿಂಹ ಅರ್ಜಿ ಸಲ್ಲಿಸಿದ್ದು, ದಸರಾ ಉದ್ಘಾಟನೆ ವೇಳೆ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಬೇಕು. ವೇದ ಮಂತ್ರ, ಧಾರ್ಮಿಕ ಆಚರಣೆಗಳೊಂದಿಗೆ ಉದ್ಘಾಟನೆಯ ಸಂಪ್ರದಾಯವಿದೆ. ‘ಬಾನು ಮುಷ್ತಾಕ್ ಹಿಂದೂ ವಿರೋಧಿ, ಕನ್ನಡ ವಿರೋಧಿ ಭಾವನೆ ಹೊಂದಿದ್ದಾರೆ’. ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಅವರನ್ನು ಆಯ್ಕೆ ಮಾಡಿದೆ ಎಂದಿದ್ದಾರೆ.
ಮೈಸೂರಿನ ರಾಜಮನೆತನದವರೂ ಸರ್ಕಾರದ ನಡೆ ವಿರೋಧಿಸಿದ್ದಾರೆ. ಸರ್ಕಾರದ ನಿರ್ಧಾರದಿಂದ ಹಿಂದೂಗಳ ಭಾವನೆಗೆ ಘಾಸಿ ಉಂಟಾಗಿದೆ. ಹೀಗಾಗಿ ಬಾನು ಮುಷ್ತಾಕ್ರಿಗೆ ನೀಡಿದ ಆಹ್ವಾನ ಹಿಂಪಡೆಯುವಂತೆ ನಿರ್ದೇಶಿಸಲು ಮಾಜಿ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.