ಬೆಂಗಳೂರು/ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ಪರಿಕಲ್ಪನೆಗೆ ಪೂರಕವಾಗಿ ಭಾರತದ ಪ್ರಮುಖ ರಕ್ಷಣಾ ತಂತ್ರಜ್ಞಾನ ಕಂಪನಿಯಾದ ಎಸ್ಎಂಪಿಪಿ ಲಿಮಿಟೆಡ್ ಜಂಟಿ ಉದ್ಯಮ ಸ್ಥಾಪಿಸುವ ಇಧ್ದೇಶದಿಂದ ಫಿಲಿಪೈನ್ಸ್ ನ ಏಷಿಯಾ ಡಿಫೆನ್ಸ್ ಆಂಡ್ ಫೈರ್‌ಪವರ್ ಕಾರ್ಪೊರೇಷನ್ (ಎಡಿಎಫ್‌ಸಿ) ಜೊತೆಗೆ ಒಂದು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ.
ಪ್ರಸ್ತಾಪಿತ ಜಂಟಿ ಉದ್ಯಮದ ಕೇಂದ್ರ ಕಚೇರಿಯು ಫಿಲಿಪೈನ್ಸ್ ನಲ್ಲಿ ಇರಲಿದೆ. ರಿಪಬ್ಲಿಕ್ ಆಕ್ಟ್ ನಂ. 12024ರ ಅಡಿಯಲ್ಲಿ ಫಿಲಿಪೈನ್ಸ್ ಸರ್ಕಾರದ ಸ್ವಾವಲಂಬಿ ರಕ್ಷಣಾ ನೀತಿಗೆ ಅನುಗುಣವಾಗಿ ಎಸ್ಎಂಪಿಪಿಯ ಅತ್ಯಾಧುನಿಕ ರಕ್ಷಣಾ ಉತ್ಪನ್ನಗಳ ಉತ್ಪಾದನೆ, ಜೋಡಣೆ ಮತ್ತು ವಿತರಣೆ ಮಾಡಲಾಗುತ್ತದೆ.
ಈ ಮೂಲಕ ಎಸ್ಎಂಪಿಪಿ ಸಂಸ್ಥೆಯು ಆಗ್ನೇಯ ಏಷಿಯಾಗೆ ವಿಸ್ತರಣೆ ಹೊಂದುತ್ತಿರುವುದು ಮಾತ್ರವೇ ಅಲ್ಲ, ಈ ನಡೆಯು ಸ್ವದೇಶಿ ರಕ್ಷಣಾ ಉತ್ಪನ್ನಗಳು ಮತ್ತು ತಂತ್ರಜ್ಞಾನವನ್ನು ರಫ್ತು ಮಾಡುವ ಭಾರತದ ಸಾಮರ್ಥ್ಯವನ್ನು ತೋರಿಸುತ್ತದೆ.
ಇದನ್ನೂ ಓದಿ: Vishweshwar Bhat Column: ವಿಮಾನದ ರೆಕ್ಕೆಗಳು
ಈ ಕುರಿತು ಮಾತನಾಡಿರುವ ಎಸ್ಎಂಪಿಪಿ ಲಿಮಿಟೆಡ್‌ನ ಸಿಇಓ ಶ್ರೀ ಅಶಿಶ್ ಕನ್ಸಾಲ್ ಅವರು, “ಈ ಜಂಟಿ ಉದ್ಯಮವು ಭಾರತದ ಶ್ರೇಷ್ಠ ರಕ್ಷಣಾ ಉತ್ಪನ್ನಗಳನ್ನು ಅಗತ್ಯ ರಾಷ್ಟ್ರಗಳಿಗೆ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಪೂರಕವಾಗಿ ನಮ್ಮ ಸ್ವದೇಶಿ ತಂತ್ರಜ್ಞಾನಗಳು ಮತ್ತು ಉತ್ಪನ್ನಗಳನ್ನು ವಿದೇಶಕ್ಕೆ ತೆಗೆದುಕೊಂಡು ಹೋಗುತ್ತಿರುವುದು ನಮಗೆ ಹೆಮ್ಮೆಯ ಕ್ಷಣವಾಗಿದೆ. ನಮ್ಮ ತಂತ್ರಜ್ಞಾನ ಮತ್ತು ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ಸ್ಥಿರವಾದ, ಸ್ವಾವಲಂಬಿ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಲು ನಾವು ಫಿಲಿಪೈನ್ಸ್ ಗೆ ಸಹಾಯ ಮಾಡುತ್ತಿದ್ದೇವೆ” ಎಂದರು.
ಈ ಜಂಟಿ ಉದ್ಯಮದಲ್ಲಿ ಫಿಲಿಪಿನೋ ಪಾಲುದಾರು ಹೆಚ್ಚಿನ ಪಾಲು ಅಂದ್ರೆ ಕನಿಷ್ಠ ಶೇ.60ರಷ್ಟು ಒಡೆತನ ಹೊಂದಿರುತ್ತಾರೆ. ಒಪ್ಪಂದದ ಭಾಗವಾಗಿ ಎಸ್ಎಂಪಿಪಿ ತನ್ನ ಸ್ವದೇಶಿ ತಂತ್ರಜ್ಞಾನವನ್ನು ಒದಗಿಸುತ್ತದೆ, ಜೊತೆಗೆ ಉತ್ಪಾದನೆಗೆ ನೆರವಾಗುತ್ತದೆ. ಈ ಉತ್ಪನ್ನಗಳು ಒಂದು ದಶಕದಿಂದ ಭಾರತೀಯ ಸಶಸ್ತ್ರ ಪಡೆಯ ಸಿಬ್ಬಂದಿಯ ಅನೇಕ ಜೀವಗಳನ್ನು ಉಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿರುವುದು ಗಮನಾರ್ಹ. ಈ ಜಂಟಿ ಉದ್ಯಮದ ಭಾಗವಾಗಿ ಫಿಲಿಪಿನೋ-ನೇತೃತ್ವದ ಉತ್ಪಾದನಾ ಘಟಕ ಮತ್ತು ಆರ್&ಡಿ ಸಾಮರ್ಥ್ಯವನ್ನು ಶೀಘ್ರವೇ ನಿರ್ಮಿಸಲಾಗುತ್ತದೆ. ಇದರ ಬಹುಪಾಲು ಮೇಲ್ವಿಚಾರಣೆಯನ್ನು ಫಿಲಿಪಿನೋ ಬೋರ್ಡ್ ನಡೆಸಲಿದೆ.
ಈ ಕುರಿತು ಎಡಿಎಫ್‌ಸಿಯ ಚೇರ್ ಮನ್ ಮತ್ತು ಸಿಇಓ ಜೆರುಯೆಲ್ ಡಿ. ಸಾಂಚೆಜ್ ಅವರು ಮಾತನಾಡಿ, “ಈ ಸಹಭಾಗಿತ್ವದ ಮೂಲಕ ಫಿಲಿಪೈನ್ಸ್ ನ ಸಶಸ್ತ್ರ ಪಡೆಗಳಿಗೆ ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನ ಒದಗಿಸುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಲಿದ್ದೇವೆ. ಫಿಲಿಪೈನ್ಸ್ ರಕ್ಷಣೆ ವಿಚಾರದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ” ಎಂದು ಹೇಳಿದರು.