ಬೆಂಗಳೂರು: ಫುಡ್ ಡೆಲಿವರಿ ಫ್ಲಾಟ್‌ಫಾರ್ಮ್ ಆದ ಸ್ವಿಗ್ಗಿಯು ಇದೀಗ ಬೌನ್ಸ್ ಇವಿ ಸ್ಕೂಟರ್ ನೊಂದಿಗೆ ಪಾಲುದಾರಿಕೆ ಘೋಷಿಸಿದೆ. ಈ ಮೂಲಕ ಸ್ವಿಗ್ಗಿ ಹಾಗೂ ಇನ್‌ಸ್ಟಾಮಾರ್ಟ್ ಡೆಲಿವರಿ ಬಾಯ್ಸ್‌ಗಳು ಕಡಿಮೆ ದರದಲ್ಲಿ ಬೌನ್ಸ್ ಇವಿ ಸ್ಕೂಟರ್ ಬಳಕೆಗೆ ಅವಕಾಶ ದೊರೆತಿದೆ.
ಈ ಕುರತು ಮಾತನಾಡಿದ ಸ್ವಿಗ್ಗಿಯ ಹಿರಿಯ ಉಪಾಧ್ಯಕ್ಷ-ಚಾಲಕ ಮತ್ತು ವಿತರಣಾ ಸಂಸ್ಥೆಯ ಸೌರವ್ ಗೋಯಲ್, ಸ್ವಿಗ್ಗಿ ಹಾಗೂ ಇನ್‌ಸ್ಟಾಮಾರ್ಟ್ ಡೆಲಿವರಿ ಮಾಡಲು ಸಹಕಾರಿಯಾಗಲು ಬೌನ್ಸ್ ಇವಿಯೊಂದಿಗೆ ಪಾಲುದಾರಿಗೆ ಹೊಂದಿದ್ದೇವೆ, ಮೊದಲನೇ ಹಂತದಲ್ಲಿ ಬೌನ್ಸ್ ಮುಂದಿನ ಮೂರು ತಿಂಗಳಲ್ಲಿ ಬೆಂಗಳೂರು ಹಾಗೂ ದೆಹಲಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನಿಯೋಜಿಸ ಲಿದೆ. ಈ ವಾಹನಗಳು ಬೌನ್ಸ್ ಡೈಲಿ ಅಪ್ಲಿಕೇಶನ್ ಹಾಗೂ ಸ್ವಿಗ್ಗಿ ಡೆಲಿವರಿ ಪಾರ್ಟನರ್ ಅಪ್ಲಿಕೇಶನ್ ಗಳಲ್ಲಿ ಸ್ವಿಗ್ಗಿ ಹಾಗೂ ಇನ್‌ಸ್ಟಾಮಾರ್ಟ್ ಡೆಲಿವರಿ ಬಾಯ್ಸ್‌ಗಳಿಗೆ ವಿಶೇಷ ದರದಲ್ಲಿ ಲಭ್ಯವಾಗಲಿದೆ. ಬೌನ್ಸ್ ಈ ವಾಹನಗಳ ನಿಯೋಜನೆ, ನಿರ್ವಹಣೆಯನ್ನು ಮಾಡಲಿದ್ದು, ಈ ಎರಡು ನಗರಗಳೆಲ್ಲೆಡೆ ಇವಿ ಬೈಕ್ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ: Bengaluru fire tragedy: ಅಗ್ನಿ ದುರಂತದಲ್ಲಿ ಐವರ ಸಾವು ಪ್ರಕರಣ; ಕಟ್ಟಡ ಮಾಲೀಕರ ಬಂಧನ
ಬೌನ್ಸ್ ಜೊತೆಗಿನ ಈ ಸಹಯೋಗವು ಕೇವಲ ಡೆಲಿವರಿ ಬಾಯ್ಸ್‌ಗಳಿಗೆ ಅನುಕೂಲ ಮಾಡಿಕೊಡುವ ಜೊತೆಗೆ, ಪರಿಸರಕ್ಕೂ ಪ್ರಯೋಜನವಾಗುವಂತೆ ಮಾಡಲು ಇವಿ ವಾಹನಗಳನ್ನು ರಸ್ತೆಗಿಳಿಸ ಲಾಗುತ್ತಿದೆ. ಬೆಂಗಳೂರು ಹಾಗೂ ದೆಹಲಿಯಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ಸ್‌ಗಳು ಡೆಲಿವರಿಗಾಗಿ ಅನೇಕ ವಾಹನಗಳ ಮೊರೆ ಹೋಗುತ್ತಿದ್ದಾರೆ, ಅದಕ್ಕಾಗಿ ಅವರಿಗೆ ಅನುಕೂಲವಾಗಲು ಬೌನ್ಸ್‌ನೊಂದಿಗೆ ಪಾಲುದಾರಿಕೆ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ನಗರಗಳಲ್ಲೂ ಈ ಪಾಲು ದಾರಿಕೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದ್ದು, 2030ರ ವೇಳೆಗೆ ಶೇ.100ರಷ್ಟು ವಿದ್ಯುತ್ ವಾಹನಗಳನ್ನೇ ಬಳಸುವುದು ನಮ್ಮ ಗುರಿಯಾಗಿದೆ ಎಂದರು.
ಬೌನ್ಸ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ವಿವೇಕಾನಂದ ಹಲ್ಲೆಕೆರೆ ಮಾತನಾಡಿ, ಸ್ವಿಗ್ಗಿಯೊಂದಿಗಿನ ಈ ಸಹಯೋಗ ಹೆಚ್ಚು ಸಂತಸ ತಂದಿದೆ. ನಗರದೆಲ್ಲೆಡೆ ಸದಾ ಓಡಾಡುವ ಡೆಲಿವರಿ ಬಾಯ್ಸ್‌ಗಳಿಗೆ ಇವಿ ವಾಹನ ವಿಶೇಷ ದರದಲ್ಲಿ ನೀಡಲಿದ್ದೇವೆ. ಇದಷ್ಟೇ ಅಲ್ಲದೆ, ಸ್ವಿಗ್ಗಿ ಬೌನ್ಸ್ ರಾಜಾ ಅಭಿಯಾನ ವನ್ನೂ ಸಹ ಈ ಮೂಲಕ ಜಾರಿಗೆ ತರುತ್ತಿದ್ದೇವೆ. ಈ ಅಭಿಯಾನದ ಅಡಿಯಲ್ಲಿ, ಬೌನ್ಸ್ ಸ್ಕೂಟರ್ ಮೂಲಕ ಹೆಚ್ಚು ಆರ್ಡರ್‌ಗಳನ್ನು ಪೂರ್ಣಗೊಳಿಸುವ ಸ್ವಿಗ್ಗಿ ಡೆಲಿವರಿ ಬಾಯ್ಸ್ ಉಚಿತ ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಗೆಲ್ಲಬಹುದು ಎಂದು ಹೇಳಿದರು.