ಬೆಂಗಳೂರು: ಸ್ಯಾಂಡಲ್‌ವುಡ್ ನಿರ್ದೇಶಕ ನಂದಕಿಶೋರ್‌ಗೆ ಸಾಲ ಕೊಟ್ಟಿದ್ದ ಉದ್ಯಮಿಯನ್ನೇ ಕಿಡ್ನ್ಯಾಪ್ (Kidnap case) ಮಾಡಿರುವುದು ನಗರದಲ್ಲಿ ನಡೆದಿದೆ. ಮನೋಜ್ ಎಂಬ ಉದ್ಯಮಿಯನ್ನು ರೌಡಿ ಶೀಟರ್ ರಾಜೇಶ್ ಅಲಿಯಾಸ್ ಅಪ್ಪಿ ಎಂಬಾತ ಕಿಡ್ನ್ಯಾಪ್ ಮಾಡಿದ್ದಾನೆ. ಉದ್ಯಮಿ ಮನೋಜ್ ನೀಡಿದ ದೂರಿನ ಮೇರೆಗೆ ರೌಡಿಶೀಟರ್ ರಾಜೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಜಯನಗರದ ಉದ್ಯಮಿ ಮನೋಜ್ ಎಂಬುವವರನ್ನು ರೌಡಿಶೀಟರ್ ರಾಜೇಶ್ ಗ್ಯಾಂಗ್ ಕಿಡ್ನ್ಯಾಪ್ ಮಾಡಿತ್ತು. ಈ ಸಂಬಂಧ ರಾಜೇಶ್, ಬೇಕರಿ ರಘು ಅಣ್ಣ ಸೀನಾ ಅಲಿಯಾಸ್ ಶ್ರೀನಿವಾಸ್, ನವೀನ ಎಂಬಾತನನ್ನು ಬಂಧಿಸಲಾಗಿದೆ.
ಉದ್ಯಮಿ ಮನೋಜ್‌ಗೆ ಈ ಮೊದಲೇ ರೌಡಿಶೀಟರ್ ರಾಜೇಶ್ ಪರಿಚಯ ಇತ್ತು. ಒಂದು ವರ್ಷದ ಹಿಂದೆ ಮನೋಜ್‌ನಿಂದ ನಟ, ನಿರ್ದೇಶಕ ನಂದ ಕಿಶೋರ್‌ಗೆ ರಾಜೇಶ್ 1.20 ಲಕ್ಷ ಹಣವನ್ನು ಸಾಲವಾಗಿ ಕೊಡಿಸಿದ್ದ. ಆದರೇ, ನಂತರ ಉದ್ಯಮಿ ಮನೋಜ್‌ಗೆ ಹಣ ಕೊಡದೆ ನಿರ್ದೇಶಕ ನಂದ ಕಿಶೋರ್ ಸತಾಯಿಸಿದ್ದರು. ಹಣವನ್ನು ವಾಪಸ್ ಕೊಡಿಸುವಂತೆ ಉದ್ಯಮಿ ಮನೋಜ್, ರೌಡಿಶೀಟರ್ ಬೆನ್ನು ಬಿದ್ದಿದ್ದರು. ಇದರಿಂದಾಗಿ ಮನೋಜ್ ಕಾಟ ಜಾಸ್ತಿ ಆಯಿತು ಎಂದು ಕೋಪಗೊಂಡ ರೌಡಿಶೀಟರ್ ರಾಜೇಶ್, ಉದ್ಯಮಿ ಮನೋಜ್‌ರನ್ನೇ ಕಿಡ್ನ್ಯಾಪ್ ಮಾಡಲು ನಿರ್ಧರಿಸಿದ್ದ.
ಸಾಲದ ಹಣ ವಾಪಸ್ ಕೊಡುವುದಾಗಿ ಹೇಳಿ, ಉದ್ಯಮಿ ಮನೋಜ್‌ರನ್ನು ಬೆಂಗಳೂರಿನ ಬಸವೇಶ್ವರ ನಗರದ ಮೋದಿ ಆಸ್ಪತ್ರೆ ಬಳಿಗೆ ಕರೆಸಿಕೊಂಡಿದ್ದಾರೆ. ಅಲ್ಲಿಂದಲೇ ಕಾರಿನಲ್ಲಿ ಉದ್ಯಮಿ ಮನೋಜ್‌ರನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಲಾಗಿದೆ. ಬಳಿಕ ಮನೋಜ್‌ರಿಂದ 3 ಲಕ್ಷ ರೂ. ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಇನ್ನೂ 10 ಲಕ್ಷ ರೂ. ಕೊಡುವಂತೆ ಉದ್ಯಮಿ ಮನೋಜ್‌ಗೆ ಬೇಡಿಕೆ ಇಟ್ಟಿದ್ದಾರೆ.
ಹಣವನ್ನು ಹೊಂದಿಸುವುದಾಗಿ ಸ್ನೇಹಿತರಿಗೆ ಕಾಲ್ ಮಾಡಿದ್ದ ಉದ್ಯಮಿ ಮನೋಜ್, ಸೀದಾ ಸಿಸಿಬಿಗೆ ದೂರು ಕೊಡಿಸಿದ್ದಾರೆ. ಬಳಿಕ ಕೇಸ್ ದಾಖಲಿಸಿಕೊಂಡ ಸಿಸಿಬಿ ಪೊಲೀಸರು, ರೌಡಿಶೀಟರ್ ರಾಜೇಶ್ ಮತ್ತು ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಮುಂದಿನ ಹಂತದಲ್ಲಿ ನಿರ್ದೇಶಕ ನಂದಕಿಶೋರ್ ಅವರನ್ನು ಸಿಸಿಬಿ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನಂದ ಕಿಶೋರ್‌ಗೆ ನೋಟೀಸ್ ನೀಡಲಾಗಿದೆ.