ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದ ಹಿನ್ನೆಲೆಯಲ್ಲಿ ಸದ್ಯ ನಟ ದರ್ಶನ್ (Actor Darshan) ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಆದರೆ, ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಬೇಕು ಎಂದು ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿದ್ದು, ಈ ಕುರಿತು ಬೆಂಗಳೂರಿನ ಸೇಷನ್ಸ್ ಕೋರ್ಟ್‌ನಲ್ಲಿ ಶನಿವಾರ ವಿಚಾರಣೆ ನಡೆಯಿತು. ನ್ಯಾಯಾಧೀಶರು ಸೆಪ್ಟೆಂಬರ್ 2ಕ್ಕೆ ಅರ್ಜಿಯ ವಿಚಾರಣೆ ಮುಂದೂಡಿದರು.
ಜೈಲಾಧಿಕಾರಿಗಳು ಎಸ್ಪಿಪಿ ಮೂಲಕ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇನ್ನು ಇದೆ ಸಂದರ್ಭದಲ್ಲಿ ನಟ ದರ್ಶನ್ ಅವರಿಗೆ ದಿಂಬು, ಬೆಡ್ ಶೀಟ್ ಸೇರಿದಂತೆ ಇತರೆ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ದರ್ಶನ್ ಪರವಾಗಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಯೂ ಮುಂದೂಡಿಕೆಯಾಗಿದೆ.
ಆರೋಪಿಗಳು ಜಾಮೀನು ಪಡೆಯುವಾಗ ಯಾವ ಯಾವ ಜೈಲಿನಲ್ಲಿ ಇದ್ದರೋ ಅದೇ ಜೈಲಿಗೆ ಶಿಫ್ಟ್ ಮಾಡಬೇಕು. ಜೈಲಿನ ಭದ್ರತೆ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆ ಸ್ಥಳಾಂತರ ಮಾಡುವಂತೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಆರೋಪಿಗಳ ಪರ ವಕೀಲರು, ಪರಪ್ಪನ ಅಗ್ರಹಾರ ಜೈಲಿನಿಂದ ಸ್ಥಳಾಂತರ ಮಾಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಈ ಮೊದಲಿನಂತೆ, ನಟ ದರ್ಶನ್ ಬಳ್ಳಾರಿ ಜೈಲಿಗೆ, ಜಗದೀಶ್ ಮತ್ತು ಲಕ್ಷ್ಮಣ್ ಶಿವಮೊಗ್ಗ ಜೈಲಿಗೆ, ನಾಗರಾಜ್ ಕಲಬುರಗಿ ಜೈಲಿಗೆ, ಪ್ರದೂಷ್ ಬೆಳಗಾವಿ ಜೈಲಿಗೆ ಶಿಫ್ಟ್ ಮಾಡುವಂತೆ ಹಾಗೂ ಪವಿತ್ರಾ ಗೌಡ ಮತ್ತು ಅನುಕುಮಾರ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯುವಂತೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಟ್ರಯಲ್ ಶುರುವಾದಲ್ಲಿ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಬೇಕು. ಬಳ್ಳಾರಿ ಮತ್ತು ಇತರೆ ಜೈಲುಗಳಿಗೆ ಶಿಫ್ಟ್ ಮಾಡಿದರೆ ಕರೆ ತರುವುದು ಕಷ್ಟವಾಗುತ್ತೆ. ಆದ್ದರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಿಸುವಂತೆ ಆಕ್ಷೇಪಣೆ ಸಲ್ಲಿಸಿ ವಾದ ಮಂಡನೆ ಮಾಡುವ ಸಾಧ್ಯತೆಯಿದೆ.
ಈ ಸುದ್ದಿಯನ್ನೂ ಓದಿ | Vijayalakshmi Darshan: ರಮ್ಯಾ ಬೆನ್ನಲ್ಲೇ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಸಭ್ಯ ಕಮೆಂಟ್; ದೂರು ದಾಖಲು
ಕಳೆದ ಬಾರಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ರೌಡಿಗಳ ಜತೆ ರಾಜಾತಿಥ್ಯ ಪಡೆದುಕೊಂಡಿದ್ದರು. ಈ ಕುರಿತು ಸುಪ್ರೀಂ ಕೋರ್ಟ್ ಜೈಲಧಿಕಾರಿಗಳಿ ಖಡಕ್ ಸೂಚನೆ ನೀಡಿತ್ತು. ಈ ಹಿಂದೆ ಆಗಿದ್ದ ತಪ್ಪನ್ನು ಮರುಕಳಿಸದಂತೆ ಸೂಚಿಸಿತ್ತು.