ದೇವನಹಳ್ಳಿ: ಕುಮಾರಣ್ಣ ಆರೋಗ್ಯ ಸರಿ ಇಲ್ಲ ಅಂತ ರಾಜ್ಯದಲ್ಲೆಡೆ ಚರ್ಚೆಗಳು ಶುರುವಾಗಿದೆ. ಆದರೆ ತಂದೆ-ತಾಯಿ ಆಶೀರ್ವಾದ, ಭಗವಂತನ ಕೃಪೆ, ನಿಮ್ಮೆಲ್ಲರ ಪ್ರೀತಿಯ ಹಾರೈಕೆಯಿಂದ ಕುಮಾರಣ್ಣ (HD Kumaraswamy) ಆರೋಗ್ಯವಾಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ, ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.
ದೇವನಹಳ್ಳಿಯಲ್ಲಿ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಸಮಾವೇಶದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮಾಧ್ಯಮಗಳು ಮತ್ತು ಕಾರ್ಯಕರ್ತರು ಕುಮಾರಣ್ಣನ ಆರೋಗ್ಯದಲ್ಲಿ ಏರುಪೇರಾಗಿದೆ ಅಂತ ಕೇಳುತ್ತಿದ್ದರು. ಹೀಗಾಗಿ 80 ಕ್ಷೇತ್ರಗಳಲ್ಲಿ ಸುತ್ತಾಡಿ ಅವರ ಜವಬ್ದಾರಿಯನ್ನು ನಾನು ಹೊರುತ್ತಿದ್ದೇನೆ. ಪ್ರತಿನಿತ್ಯ ನಾನು ನನ್ನ ಆಯಸ್ಸು ನನ್ನ ತಂದೆಗೆ ಕೊಡಬೇಕು ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತಿದ್ದೀನಿ. ನಾನು ಕೇವಲ ಮಗನಾಗಿ ಈ ಮಾತನ್ನು ಹೇಳುತ್ತಿಲ್ಲ ಎಂದರು.
ಕುಮಾರಣ್ಣ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗಿದೆ. ಆದರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಅವರು ಚೇತರಿಕೆ ಕಾಣುತ್ತಿದ್ದಾರೆ. ಶೀಘ್ರದಲ್ಲೆ ಸಂಪೂರ್ಣ ಗುಣಮುಖರಾಗುತ್ತಾರೆ. ದೇವೆಗೌಡರು, ಕುಮಾರಣ್ಣ ಇಬ್ಬರು ಸಹ ಶತಾಯುಷಿಗಳಾಗುತ್ತಾರೆ ಅನ್ನೋ ನಂಬಿಕೆ ಇದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Pralhad Joshi: ಕರ್ನಾಟಕವನ್ನು ಭ್ರಷ್ಟಾಚಾರದಲ್ಲಿ ದೇಶದಲ್ಲೇ ನಂಬರ್ ಒನ್ ಮಾಡಿದೆ ಕಾಂಗ್ರೆಸ್ ಸರ್ಕಾರ: ಜೋಶಿ ಆರೋಪ
ಜೆಡಿಎಸ್ ಪಕ್ಷದ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯವಾಗಿ ಹೇಳಿಕೆ ನೀಡಿದ್ದಾರೆ
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 2 ಶಾಸಕ ಸ್ಥಾನಕ್ಕೆ ಕುಸಿಯಲಿದೆ ಎಂದು ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನಿಖಿಲ್ ಕುಮಾರಸ್ವಾಮಿ, ವಿಧಾನಸಭೆ ಅಧಿವೇಶನದ ಕೊನೆಯ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ಪಕ್ಷದ ಬಗ್ಗೆ ವ್ಯಂಗ್ಯವಾಗಿ ಹೇಳಿಕೆ ನೀಡಿದ್ದಾರೆ. ಒಬ್ಬ ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿ ಜೆಡಿಎಸ್ ಕಾರ್ಯಕರ್ತರಿಗೆ ನಾನು ಉತ್ತರ ಕೊಡಬೇಕು. ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಾರೆ. ಅಷ್ಟೇ ಅಲ್ಲದೇ ಬಿಜೆಪಿ ಮತ್ತು ಜೆಡಿಎಸ್ಗೆ ಆಶೀರ್ವಾದ ಮಾಡುವ ದಿನ ಬಹಳ ದೂರ ಇಲ್ಲ ಎಂದು ಹೇಳಿದರು.
ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಕರಾಗಿ ಸರ್ಕಾರ ಆಯ್ಕೆ ಮಾಡಿರುವ ಬಗ್ಗೆ ಮಾತನಾಡಿದ ಅವರು, ಸನಾತನ ಧರ್ಮದ ಬಗ್ಗೆ ಎಷ್ಟು ಹಗುರವಾಗಿ ನಡೆದುಕೊಳ್ಳಬೇಕೋ ಅಷ್ಟು ಹಗುರವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ. ಧರ್ಮಸ್ಥಳ ಪ್ರಕರಣದಲ್ಲಿ ಯಾರೋ ಮಾಸ್ಕ್ ಮ್ಯಾನ್ ಹೇಳಿದ ಎಂದು ಎಸ್ಐಟಿ ರಚನೆ ಮಾಡಿ, ಆತ ಹೇಳಿದ ಕಡೆಯಲ್ಲ ಅಗೆದು ಕ್ಷೇತ್ರಕ್ಕೆ ಕಳಂಕ ತಂದಿದ್ದಾರೆ. ಈ ಸರ್ಕಾರದಿಂದ ಸನಾತನ ಧರ್ಮ ಉಳಿಯುತ್ತದೆ ಎಂಬ ನಿರೀಕ್ಷೆ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.