Pralhad Joshi: ಕರ್ನಾಟಕವನ್ನು ಭ್ರಷ್ಟಾಚಾರದಲ್ಲಿ ದೇಶದಲ್ಲೇ ನಂಬರ್ ಒನ್ ಮಾಡಿದೆ ಕಾಂಗ್ರೆಸ್ ಸರ್ಕಾರ: ಜೋಶಿ ಆರೋಪ
Pralhad Joshi: ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಹಾಗೂ ಭ್ರಷ್ಟಾಚಾರ ವಿರೋಧಿ ಎಂದು ಬುರುಡೆ ಬಿಟ್ಟು ಅಧಿಕಾರದ ಚುಕ್ಕಾಣಿ ಹಿಡಿದ ಈ ಕಾಂಗ್ರೆಸ್ ಸರ್ಕಾರ ಈಗ ಅದಕ್ಕೆ ತದ್ವಿರುದ್ಧವಾಗಿ ಆಡಳಿತ ನಡೆಸುತ್ತಿದೆ. ರಾಜ್ಯದ ಬೊಕ್ಕಸ ಬರಿದು ಮಾಡಿ ಅಭಿವೃದ್ಧಿ ಶೂನ್ಯವಾಗಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.


ನವದೆಹಲಿ: ರಾಜ್ಯ ಕಾಂಗ್ರೆಸ್ ಸರ್ಕಾರ (State Congress Government) ಕರ್ನಾಟಕವನ್ನು ಭ್ರಷ್ಟಾಚಾರದಲ್ಲಿ ದೇಶದಲ್ಲೇ ನಂಬರ್ ಒನ್ ಮಾಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆರೋಪಿಸಿದ್ದಾರೆ. 'ಕಾಂಗ್ರೆಸ್ ಆಡಳಿತದಲ್ಲಿ ಕಮಿಷನ್ ಹಾವಳಿ ಹೆಚ್ಚಿದೆ' ಎಂಬ ರಾಜ್ಯ ಗುತ್ತಿಗೆದಾರರ ಸಂಘದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವರು, ಗುತ್ತಿಗೆದಾರರ ಸಂಘ ಸರ್ಕಾರದಲ್ಲಿನ ವಾಸ್ತವ ಸ್ಥಿತಿಯನ್ನು ತೆರೆದಿಟ್ಟಿದೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಅಬಕಾರಿಯಲ್ಲಿ ಲಂಚದ ರೇಟ್
ಅಬಕಾರಿ ಇಲಾಖೆ ಕರ್ನಾಟಕದ ಆರ್ಥಿಕತೆಯ ಬೆನ್ನೆಲುಬು. ಆದರೆ, ಇದೇ ಇಲಾಖೆಯಲ್ಲೀಗ ಪ್ರತಿಯೊಂದುಕ್ಕೂ ಲಂಚದ ರೇಟ್ ಫಿಕ್ಸ್ ಮಾಡಿದಂತಿದೆ. ಅಧಿಕಾರಿಗಳು ಪ್ರತಿ ತಿಂಗಳು ಹಫ್ತಾ ವಸೂಲಿಗೆ ಇಳಿದಿರುವುದು ರಾಜ್ಯದ ದುರಂತ ಎಂದು ಜೋಶಿ ದೂರಿದ್ದಾರೆ.
ಆರ್ಥಿಕತೆ ಮುಳುಗಿಸುವುದೇ ಕಾಂಗ್ರೆಸ್ ಧ್ಯೇಯ
ಸುಭಿಕ್ಷವಾಗಿದ್ದ ರಾಜ್ಯದ ಆರ್ಥಿಕತೆಯನ್ನು ಮುಳುಗಿಸುವುದೇ ಈ ಕಾಂಗ್ರೆಸ್ ಸರ್ಕಾರದ ಧ್ಯೇಯವಾಗಿದೆ. ಅಧಿಕಾರಕ್ಕೆ ಬಂದ ದಿನದಿಂದಲೂ ರಾಜ್ಯದ ಆರ್ಥಿಕತೆಯನ್ನು ಮಣ್ಣುಪಾಲು ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ
ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಹಾಗೂ ಭ್ರಷ್ಟಾಚಾರ ವಿರೋಧಿ ಎಂದು ಬುರುಡೆ ಬಿಟ್ಟು ಅಧಿಕಾರದ ಚುಕ್ಕಾಣಿ ಹಿಡಿದ ಈ ಕಾಂಗ್ರೆಸ್ ಸರ್ಕಾರ ಈಗ ಅದಕ್ಕೆ ತದ್ವಿರುದ್ಧವಾಗಿ ಆಡಳಿತ ನಡೆಸುತ್ತಿದೆ. ರಾಜ್ಯದ ಬೊಕ್ಕಸ ಬರಿದು ಮಾಡಿ ಅಭಿವೃದ್ಧಿ ಶೂನ್ಯವಾಗಿಸಿದೆ ಎಂದು ಸಚಿವರು ವಾಗ್ದಾಳಿ ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿ | ಅಡಕೆ ಬೆಳೆಗಾರರ ಸಂಕಷ್ಟ; ಜೋಶಿ ನೇತೃತ್ವದಲ್ಲಿ ರಾಜ್ಯ ಸಂಸದರ ತಂಡದಿಂದ ಕೇಂದ್ರ ಕೃಷಿ ಸಚಿವರ ಭೇಟಿ
ಬೆಲೆ ಏರಿಕೆಯಿಂದ ಜನಜೀವನ ದುಸ್ತರ
ಕಾಂಗ್ರೆಸ್ ಸರ್ಕಾರ ಅಗತ್ಯ ವಸ್ತುಗಳ ದುಪ್ಪಟ್ಟು ಬೆಲೆ ಏರಿಕೆ ಮಾಡಿ ಜನರ ಜೀವನವನ್ನು ದುಸ್ತರಗೊಳಿಸಿದೆ. ವ್ಯಾಪಾರಿಗಳಿಗೆ ಅಧಿಕಾರಿಗಳಿಂದ ಲಂಚದ ಕಿರುಕುಳ, ಶೂನ್ಯ ಅಭಿವೃದ್ಧಿ, ಸುಳ್ಳು ಭರವಸೆ. ಇದೇ ಕಾಂಗ್ರೆಸ್ ಸರ್ಕಾರದ ನಿಜ ಆಡಳಿತ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.