ಚಾಮರಾಜನಗರ: ಜಿಲ್ಲೆಯ (Chamarajanagara) ಬೊಮ್ಮಲಾಪುರ ಗ್ರಾಮದಲ್ಲಿ ಹುಲಿ ಹಿಡಿಯಲು ಇಟ್ಟಿದ್ದ ಬೋನಿನಲ್ಲಿ (Tiger cage) ಅರಣ್ಯ ಇಲಾಖೆ (Forest department) ಸಿಬ್ಬಂದಿಯನ್ನು ಕೂಡಿ ಹಾಕಿದ ಘಟನೆಗೆ ಸಂಬಂಧಿಸಿ ಐವರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಹುಲಿ, ಚಿರತೆ ದಾಳಿಗೆ ಬೇಸತ್ತ ರೈತರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಸ್ಥಳಕ್ಕೆ ಹುಲಿ ಹಿಡಿಯಲು ಎಂದು ಬಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ಅರಣ್ಯದ ಅಂಚಿನ ಗ್ರಾಮಗಳಿಗೆ ಹುಲಿ, ಚಿರತೆಗಳು ನುಗ್ಗಿ ಜನ – ಜಾನುವಾರುಗಳ ಮೇಲೆ ದಾಳಿ ಮಾಡುವುದು ಸಾಮಾನ್ಯವಾಗಿದೆ. ಜೀವ ಭಯದಲ್ಲಿರುವ ಜನರಿಗೆ ಅರಣ್ಯ ಇಲಾಖೆ ನೆರವು ನೀಡುತ್ತಿಲ್ಲ ಎಂದು ಜನ ಪ್ರತಿಭಟನೆ ನಡೆಸಿದ್ದರು. ಪ್ರಾಣ ಭಯದಲ್ಲಿ ಜೀವನ ನಡೆಸುತ್ತಿರುವ ನಮಗೆ ರಕ್ಷಣೆ ನೀಡುತ್ತಿಲ್ಲ ಎಂದು ಜಮೀನಿನಲ್ಲಿ ಇದ್ದ ಬೋನಿನಲ್ಲಿ ಸಿಬ್ಬಂದಿಯನ್ನು ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಅರಣ್ಯ ಇಲಾಖೆ ನೌಕರರು ದೂರು ನೀಡಿದ ಹಿನ್ನೆಲೆಯಲ್ಲಿ ಬಂಡೀಪುರ ಸಿಎಫ್ ಸೂಚನೆಯಂತೆ ಗುಂಡ್ಲುಪೇಟೆ ಠಾಣೆಗೆ ದೂರು ನೀಡಿದ್ದರು. ಸಿಬ್ಬಂದಿ ನೀಡಿದ ದೂರಿನ ಅನ್ವಯ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಕಳೆದ 2 ತಿಂಗಳಿನಿಂದ ಗ್ರಾಮದ ಹೊರವಲಯದಲ್ಲಿ ಹುಲಿ ಹಾಗೂ ಚಿರತೆ ಕಾಣಿಸಿಕೊಳ್ಳುತ್ತಿವೆ. ಈ ಬಗ್ಗೆ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅದರಂತೆ, ಬೊಮ್ಮಲಾಪುರ ಗ್ರಾಮದ ಗಂಗಪ್ಪ ಎಂಬವರ ಜಮೀನಿನಲ್ಲಿ ಬೋನು ಇಡಲಾಗಿದೆ. ಹುಲಿ ಮತ್ತೆ ಕಾಣಿಸಿಕೊಂಡಿದ್ದು, ಈ ಬಗ್ಗೆ ಜನರು ಅರಣ್ಯ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ.
ಗ್ರಾಮದ ಹೊರಭಾಗದಲ್ಲಿ ಹುಲಿ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ತಡವಾಗಿ ಬಂದಿದ್ದಾರೆ. ಇದರಿಂದ ಕುಪಿತಗೊಂಡ ಜನರು ಗಾರ್ಡ್, ವಾಚರ್ ಸೇರಿ 7 ಮಂದಿಯನ್ನು ಅವರೇ ಇಟ್ಟಿದ್ದ ಬೋನಿನಲ್ಲಿ ಕೂಡಿ ಹಾಕಿ ಆಕ್ರೋಶ ಹೊರಗೆಡವಿದ್ದರು. ಇದೀಗ ಗ್ರಾಮದ 5 ಜನರ ವಿರುದ್ಧ FIR ದಾಖಲಿಸಲಾಗಿದೆ.
ಇದನ್ನೂ ಓದಿ: Abhiman Studio: ‘ಅಭಿಮಾನ್ ಸ್ಟುಡಿಯೋ’ ಜಾಗ ಹಿಂಪಡೆಯಲು ಮುಂದಾದ ಸರ್ಕಾರ; ಬೆಂಗಳೂರು ಡಿಸಿಗೆ ಅರಣ್ಯ ಇಲಾಖೆ ಪತ್ರ