ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Abhiman Studio: ‘ಅಭಿಮಾನ್ ಸ್ಟುಡಿಯೋ’ ಜಾಗ ಹಿಂಪಡೆಯಲು ಮುಂದಾದ ಸರ್ಕಾರ; ಬೆಂಗಳೂರು ಡಿಸಿಗೆ ಅರಣ್ಯ ಇಲಾಖೆ ಪತ್ರ

vishnuvardhan memorial: ಅಭಿಮಾನ್‌ ಸ್ಟುಡಿಯೋಗೆ ಭೂಮಿಯನ್ನು ನೀಡುವಾಗ ವಿಧಿಸಲಾಗಿದ್ದ ಷರತ್ತುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಮತ್ತು ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಗಂಭೀರ ಆರೋಪ ಮಾಡಿದೆ. ಹೀಗಾಗಿ ಸ್ಟುಡಿಯೋ ಹಿಂಪಡೆಯಲು ಅರಣ್ಯ ಇಲಾಖೆಯಿಂದ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ.

‘ಅಭಿಮಾನ್ ಸ್ಟುಡಿಯೋ’ ಜಾಗ ಹಿಂಪಡೆಯಲು ಮುಂದಾದ ಸರ್ಕಾರ

Prabhakara R Prabhakara R Aug 29, 2025 2:01 PM

ಬೆಂಗಳೂರು: ಹಿರಿಯ ನಟ ವಿಷ್ಣುವರ್ಧನ್‌ ಅವರ ಸಮಾಧಿ ನೆಲಸಮ ಹಿನ್ನೆಲೆಯಲ್ಲಿ ವಿವಾದಕ್ಕೀಡಾಗಿದ್ದ ಅಭಿಮಾನ್‌ ಸ್ಟುಡಿಯೋ ಜಾಗವನ್ನು‌ (Abhiman Studio) ಹಿಂಪಡೆಯಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಅರಣ್ಯ ಇಲಾಖೆಯಿಂದ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. 60ರ ದಶಕದಲ್ಲಿ ಬಾಲಕೃಷ್ಣ ಅವರಿಗೆ ಸರ್ಕಾರದಿಂದ 20 ಎಕರೆ ಭೂಮಿ ನೀಡಲಾಗಿತ್ತು. ನಿಯಮಗಳ ಪ್ರಕಾರ, 20 ವರ್ಷಗಳವರೆಗೆ ಆ ಭೂಮಿಯನ್ನು ಯಾರಿಗೂ ಪರಭಾರೆ ಮಾಡುವಂತಿಲ್ಲ. ಆದರೆ, ನಿಯಮ ಉಲ್ಲಂಘನೆಯಾಗಿದೆ. ಹೀಗಾಗಿ, ಅರಣ್ಯ ಇಲಾಖೆಯು ಕ್ರಮಕ್ಕೆ ಮುಂದಾಗಿದೆ.

ಬೆಂಗಳೂರು ದಕ್ಷಿಣ ತಾಲೂಕಿನ, ಕೆಂಗೇರಿ ಹೋಬಳಿಯ ಮೈಲಸಂದ್ರ ಗ್ರಾಮದ ಸರ್ವೆ ನಂ. 26ರಲ್ಲಿರುವ ಈ ಭೂಮಿಯನ್ನು ನೀಡುವಾಗ ವಿಧಿಸಲಾಗಿದ್ದ ಷರತ್ತುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಮತ್ತು ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಗಂಭೀರ ಆರೋಪ ಮಾಡಿದೆ.

ಮೈಲಸಂದ್ರ ಗ್ರಾಮದ ಪ್ರದೇಶವನ್ನು "ತುರಹಳ್ಳಿ ಕಾಯ್ದಿಟ್ಟ ಅರಣ್ಯ ಪ್ರದೇಶ" ಎಂದು 1935ರಲ್ಲೇ ಸರ್ಕಾರ ಘೋಷಿಸಿತ್ತು. ನಂತರ, 1969ರ ಏಪ್ರಿಲ್ 9ರ ಸರ್ಕಾರಿ ಆದೇಶದ ಅನ್ವಯ, ಸರ್ವೆ ನಂ. 26ರಲ್ಲಿನ 20 ಎಕರೆ ಪ್ರದೇಶವನ್ನು ಅಭಿಮಾನ್ ಸ್ಟುಡಿಯೋ ಸ್ಥಾಪಿಸಲು ಟಿ.ಎನ್.ಬಾಲಕೃಷ್ಣ ಅವರಿಗೆ 20 ವರ್ಷಗಳ ಗೇಣಿ ಆಧಾರದ ಮೇಲೆ ನೀಡಲಾಗಿತ್ತು.

1970ರ ಮಾರ್ಚ್ 21ರ ಆದೇಶದಲ್ಲಿ, ಈ ಭೂಮಿಯನ್ನು ಸ್ಟುಡಿಯೋ ಅಭಿವೃದ್ಧಿ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸಬಾರದು ಮತ್ತು ಸರ್ಕಾರದ ಪೂರ್ವಾನುಮತಿ ಇಲ್ಲದೆ ಮಾರಾಟ ಅಥವಾ ಪರಭಾರೆ ಮಾಡಬಾರದು ಎಂಬ ಕಠಿಣ ಷರತ್ತು ವಿಧಿಸಲಾಗಿತ್ತು. ಒಂದು ವೇಳೆ ಷರತ್ತು ಉಲ್ಲಂಘನೆಯಾದಲ್ಲಿ, ಯಾವುದೇ ಪರಿಹಾರ ನೀಡದೆ ಮಂಜೂರಾತಿಯನ್ನು ರದ್ದುಪಡಿಸಿ ಭೂಮಿಯನ್ನು ಸರ್ಕಾರಕ್ಕೆ ಹಿಂಪಡೆಯಲಾಗುವುದು ಎಂದು ಸ್ಪಷ್ಟವಾಗಿ ನಮೂದಿಸಲಾಗಿತ್ತು.

ಮಾರಾಟಕ್ಕೆ ಅನುಮತಿ ಪಡೆದರೂ, ಸ್ಟುಡಿಯೋವನ್ನು ಅಭಿವೃದ್ಧಿಪಡಿಸುವ ಯಾವುದೇ ಕಾಮಗಾರಿಗಳನ್ನು ಕೈಗೊಂಡಿಲ್ಲ. ಅನುಮತಿ ಪಡೆದಿದ್ದ 10 ಎಕರೆ ಬದಲು 12 ಎಕರೆ ಪ್ರದೇಶವನ್ನು ಮಾರಾಟ ಮಾಡಲಾಗಿದೆ ಎಂದೂ ಪತ್ರದಲ್ಲಿ ಅರಣ್ಯ ಇಲಾಖೆಯು ಆರೋಪಿದೆ.

ಈ ಸುದ್ದಿಯನ್ನೂ ಓದಿ | Vishnuvardhan Memorial: ವಿಷ್ಣುವರ್ಧನ್ ಹೆಸರಲ್ಲಿ ಕಿಚ್ಚ ನಿರ್ಮಿಸಲಿರುವ ಸ್ಮಾರಕ ಹೇಗಿರಲಿದೆ?

ಮಂಜೂರಾತಿ ಆದೇಶ ರದ್ದುಪಡಿಸಲು ಮನವಿ

ಈ ಪ್ರದೇಶವು ಕಾನೂನಾತ್ಮಕವಾಗಿ ಇಂದಿಗೂ ಅರಣ್ಯ ಸ್ಥಾನಮಾನವನ್ನೇ ಹೊಂದಿದೆ. ಮೇಲಿನ ಎಲ್ಲಾ ಕಾರಣಗಳಿಂದ ಹಾಗೂ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಹಿನ್ನೆಲೆಯಲ್ಲಿ,ಟಿ.ಎನ್.ಬಾಲಕೃಷ್ಣ ಅವರಿಗೆ ನೀಡಲಾಗಿದ್ದ ಭೂಮಿ ಮಂಜೂರಾತಿ ಆದೇಶವನ್ನು ತಕ್ಷಣವೇ ರದ್ದುಪಡಿಸಬೇಕು. ಅಲ್ಲದೆ, ಭೂಮಿಯನ್ನು ಅರಣ್ಯ ಇಲಾಖೆಯ ಹೆಸರಿಗೆ ಇಂಡೀಕರಣ (ಖಾತೆ ಬದಲಾವಣೆ) ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಸಂಪೂರ್ಣ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್. ರವೀಂದ್ರ ಕುಮಾರ್ ಅವರು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.