Gundlupet News: ಮುಸ್ಲಿಂ ಎಂಬ ಕಾರಣಕ್ಕೆ ಮಠದಿಂದ ಸ್ವಾಮೀಜಿಯನ್ನು ಹೊರಹಾಕಿದ ಗ್ರಾಮಸ್ಥರು!
Gundlupet News: ಮೂಲತಃ ಮುಸ್ಲಿಂ ಆಗಿದ್ದರೂ, ಬಾಲ್ಯದಿಂದಲೂ ಬಸವಣ್ಣನವರ ವಚನಗಳಿಗೆ, ಮಾನವೀಯ ಬೋಧನೆಗಳಿಗ ಆಕರ್ಷಿತರಾಗಿದ್ದ ವ್ಯಕ್ತಿಯೊಬ್ಬರು, ಲೌಕಿಕ ಜೀವನಕ್ಕೆ ಇತಿಶ್ರೀ ಹೇಳಿ, ಸನ್ಯಾಸತ್ವ ಪಡೆದಿದ್ದರು. ಅವರನ್ನು ಪ್ರಧಾನ ಮಠಾಧೀಶರಾಗಿ ನೇಮಿಸಲಾಗಿತ್ತು, ಇದೀಗ ಸ್ವಾಮೀಜಿಯ ಮೂಲ ಧರ್ಮ ಬಹಿರಂಗವಾಗಿ, ಅವರನ್ನು ಮಠದಿಂದ ಹೊರಗೆ ಕಳುಹಿಸಲಾಗಿದೆ.


ಚಾಮರಾಜನಗರ: ಪೂರ್ವಾಶ್ರಮದಲ್ಲಿ ಮುಸ್ಲಿಂ ಎಂಬ ಕಾರಣಕ್ಕೆ ಗುಂಡ್ಲುಪೇಟೆ (Gundlupet News) ತಾಲೂಕಿನ ಚೌಡಹಳ್ಳಿ ಗ್ರಾಮದ ಗುರುಮಲ್ಲೇಶ್ವರ ವಿರಕ್ತ ಮಠದ ಸ್ವಾಮೀಜಿಯಾಗಿದ್ದ ನಿಜಲಿಂಗ ಸ್ವಾಮೀಜಿಯನ್ನು (Nijalinga swamiji), ಮಠದಿಂದ ಗ್ರಾಮಸ್ಥರು ಹೊರಹಾಕಿರುವ ಘಟನೆ ನಡೆದಿದೆ. ಇವರು ಮೂಲತಃ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ನಿವಾಸಿ. ಮೂಲ ಹೆಸರು ಮೊಹಮ್ಮದ್ ನಿಸಾರ್. ಬಾಲ್ಯದಿಂದಲೂ ಬಸವಣ್ಣನವರ ವಚನಗಳಿಗೆ, ಮಾನವೀಯ ಬೋಧನೆಗಳಿಗ ಆಕರ್ಷಿತರಾಗಿದ್ದ ಇವರು, ಲೌಕಿಕ ಜೀವನಕ್ಕೆ ಇತಿಶ್ರೀ ಹೇಳಿ, ಸನ್ಯಾಸತ್ವ ಪಡೆದು ಸ್ವಾಮೀಜಿಯಾಗಲು ಬಯಸಿದ್ದರು. ಅದರಂತೆ 2020ರಲ್ಲಿ ಅವರು ಶರಣರಿಂದ ಬಸವದೀಕ್ಷೆ ಪಡೆದಿದ್ದರು.
ಸುಮಾರು ವರ್ಷಗಳ ಕಾಲ ಬಸವತತ್ವದ ಕುರಿತು ಅಧ್ಯಯನ ನಡೆಸಿದ ಮೇಲೆಯೇ ಅವರು, ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ಬಸವಪ್ರಭು ಸ್ವಾಮೀಜಿಗಳಿಂದ ಲಿಂಗ ದೀಕ್ಷೆ ಸ್ವೀಕರಿಸಿದ್ದರು. 2020ರ ಆ. 15ರಂದು ರಾಷ್ಟ್ರೀಯ ಬಸವದಳದ ಪೀಠಾಧ್ಯಕ್ಷರಾದ ಡಾ. ಮಾತೆ ಗಂಗಾದೇವಿಯವರಿಗೆ ಸದ್ಗುರು ಬಸವಲಿಂಗ ಸ್ವಾಮೀಜಿ ಎಂದು ನಾಮಕರಣ ಮಾಡಿದ್ದರು.
ಇದಾದ ನಂತರ, ವಿದೇಶದಲ್ಲಿರುವ ಮಹದೇವ ಪ್ರಸಾದ್ ಎಂಬುವರು ತಮ್ಮ ಹಳ್ಳಿಯಲ್ಲಿ ಗುರುಮಲ್ಲೇಶ್ವರ ವಿರಕ್ತ ಮಠವನ್ನು ಸ್ಥಾಪಿಸಿದ್ದರು. ಮಠಕ್ಕೆ ಪ್ರಧಾನ ಮಠಾಧೀಶರಾಗಿ ನಿಜಲಿಂಗ ಸ್ವಾಮೀಜಿಯವರನ್ನು ನೇಮಿಸಿದ್ದರು. ಕಳೆದ ಒಂದೂವರೆ ತಿಂಗಳಿನಿಂದಲೂ ಅವರು ಬಸವತತ್ವದ ಪ್ರಚಾರ ಮಾಡುತ್ತಿದ್ದರು.
ಈ ಸುದ್ದಿಯನ್ನೂ ಓದಿ | Kodi Mutt Swamiji: ಭಾರತಕ್ಕೆ ಕಾದಿದೆ ಜಗತ್ತೇ ತಿರುಗಿನೋಡುವಂತಹ ಆಘಾತ: ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ!
ಇತ್ತೀಚೆಗೆ, ಸ್ವಾಮೀಜಿಗಳ ಎಸ್ಎಸ್ಎಲ್ ಸಿ ಅಂಕಪಟ್ಟಿ ಗ್ರಾಮಸ್ಥರ ಕೈಗೆ ಸಿಕ್ಕಿತ್ತು. ಅದರಿಂದ ಅವರ ಮೂಲ ಹೆಸರು ಮೊಹಮ್ಮದ್ ನಿಸಾರ್ ಎಂದು ಗೊತ್ತಾಗಿತ್ತು. ಆ ಮೂಲಕ ಅವರ ಮೂಲ ಧರ್ಮವೂ ಗೊತ್ತಾಗಿ, ಮುಸ್ಲಿಮರೊಬ್ಬರು ಲಿಂಗಾಯತ ಮಠಕ್ಕೆ ಸ್ವಾಮೀಜಿಗಳಾಗಬಾರದು ಎಂಬ ಕೂಗು ಕೇಳಿಬಂದಿತ್ತು. ಸ್ವಾಮೀಜಿಯವರ ಪರವಾಗಿ ಕೆಲವರು ನಿಂತರೆ, ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಬೇಸತ್ತ ಸ್ವಾಮೀಜಿ, ಆ. 4ರಂದು ಮಠದ ಪೀಠ ತ್ಯಾಗ ಮಾಡಿ, ತಮ್ಮೂರಿಗೆ ವಾಪಸ್ ಹೋಗಿದ್ದಾರೆ.