Tiger Kill: ಸೇಡು ತೀರಿಸಿಕೊಳ್ಳಲು ಹುಲಿಯ ಕೊಂದು ಮೂರು ತುಂಡು ಮಾಡಿದ ನಾಲ್ಕು ಪಾಪಿಗಳ ಸೆರೆ
Chamarajanagar: ತಾನು ಸಾಕಿದ ಹಸುವನ್ನು ಕೊಂದಿದ್ದಕ್ಕೆ ಪಚ್ಚಮಲ್ಲ ರೊಚ್ಚಿಗೆದ್ದಿದ್ದು, ಗೋವಿಂದೇಗೌಡ, ಮಂಜುನಾಥ, ಕಂಬಣ್ಣ, ಗಣೇಶನ ಜೊತೆ ಸೇರಿ ಹುಲಿಯನ್ನು ಸಾಯಿಸಲು ಸಂಚು ರೂಪಿಸಿದ್ದ. ಹುಲಿಗೆ ಮಾಂಸದಲ್ಲಿ ವಿಷ ಹಾಕಿ ಕೊಂದು ಹಾಕಿದ್ದರು. ಬಳಿಕ ಕಳೇಬರವನ್ನು ಕೊಡಲಿಯಿಂದ ಕತ್ತರಿಸಿ ಮೂರು ಭಾಗ ಮಾಡಿದ್ದರು.

-

ಚಾಮರಾಜನಗರ : ಇತ್ತೀಚೆಗೆ ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದಲ್ಲಿ ಹುಲಿ ಹತ್ಯೆ (Tiger Kill) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಮುಖ ಆರೋಪಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಹಸುವನ್ನು ಕೊಂದು ತಿಂದದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು ಆರೋಪಿಗಳು ವಿಷ ಹಾಕಿ ಹುಲಿಯ ಹತ್ಯೆ ಮಾಡಿದ್ದಾರೆ. ಬಳಿಕ ಕೊಡಲಿಯಿಂದ ಕೊಚ್ಚಿ ಮೂರು ತುಂಡು ಮಾಡಿದ್ದಾರೆ ಎಂದು ಗೊತ್ತಾಗಿದೆ.
ಹುಲಿ ಹತ್ಯೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪಚ್ಚಮಲ್ಲ ಅಲಿಯಾಸ್ ಸಣ್ಣನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಹನೂರು ತಾಲೂಕು ಪಚ್ಚದೊಡ್ಡಿ ಗ್ರಾಮದ ನಿವಾಸಿಯಾಗಿದ್ದಾನೆ. ಪಚ್ಚಮಲ್ಲನ ನಾಲ್ವರು ಸಹಚರರಾದ ಗಣೇಶ, ಗೋವಿಂದೇಗೌಡ ಹಾಗೂ ಮಂದೆ ಕುರಿ ಮೇಯಿಸುತ್ತಿದ್ದ ಮಂಜುನಾಥ, ಕಂಬಣ್ಣ ಅವರನ್ನು ವಶಕ್ಕೆ ಪಡೆಯಲಾಗಿದೆ.
ಹುಲಿಯನ್ನು ಸೇಡು ತೀರಿಸಿಕೊಳ್ಳಲು ಕೊಲ್ಲಲಾಗಿದೆ ಎಂದು ತನಿಖೆಯಲ್ಲಿ ಬಯಲಾಗಿದೆ. ಮೃತ ಹುಲಿಯ ಇನ್ನುಳಿದ ಕಳೆಬರವನ್ನ ಅರಣ್ಯ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ. ಹುಲಿಯ ತಲೆ ಹಾಗು ಮುಂಗಾಲುಗಳನ್ನು ಮಣ್ಣಿನಲ್ಲಿ ಹೂಳಲಾಗಿತ್ತು. ಹುಲಿಯ ಮಧ್ಯ ಭಾಗದ ದೇಹವನ್ನು ಎಲೆಗಳಲ್ಲಿ ಮುಚ್ಚಿಡಲಾಗಿತ್ತು. ಹುಲಿಯ ಹಿಂಭಾಗದ ದೇಹವನ್ನು ಮರದ ಕೆಳಗೆ ಎಸೆಯಲಾಗಿತ್ತು.
ಇದನ್ನೂ ಓದಿ: Tiger Kill: ಹನೂರಿನಲ್ಲಿ ಹುಲಿ ಹತ್ಯೆ, ಒಬ್ಬನ ಬಂಧನ, ಮತ್ತೊಬ್ಬ ಪರಾರಿ
ಪಚ್ಚಮಲ್ಲನ ಹಸುವನ್ನು ಹುಲಿ ಬೇಟೆಯಾಡಿ ಕೊಂದು ಭಕ್ಷಣೆ ಮಾಡಿದ್ದು, ತಾನು ಸಾಕಿದ ಹಸುವನ್ನು ಕೊಂದಿದ್ದಕ್ಕೆ ಪಚ್ಚಮಲ್ಲ ರೊಚ್ಚಿಗೆದ್ದಿದ್ದ. ಹುಲಿಗೆ ಒಂದು ಗತಿ ಕಾಣಿಸಲೇಬೇಕೆಂದು ಸ್ಕೆಚ್ ಹಾಕಿದ್ದ. ಗೋವಿಂದೇಗೌಡ, ಮಂಜುನಾಥ, ಕಂಬಣ್ಣ, ಗಣೇಶನ ಜೊತೆ ಸೇರಿ ಸಂಚು ರೂಪಿಸಿದ್ದ. ಹುಲಿಗೆ ಮಾಂಸದಲ್ಲಿ ವಿಷ ಹಾಕಿ ಕೊಂದು ಹಾಕಿದ್ದರು. ಹುಲಿಗೆ ವಿಷ ಹಾಕಿ ಸತ್ತ ಬಳಿಕ ಕೊಡಲಿಯಿಂದ ಕತ್ತರಿಸಿ ಮೂರು ಭಾಗ ಮಾಡಿದ್ದರು.