ಬಾಗೇಪಲ್ಲಿ: ಬಡವರ ಹೊಟ್ಟೆ ತುಂಬಿಸಲು ಜಾರಿಗೆ ತಂದ ಅನ್ನಭಾಗ್ಯ ಯೋಜನೆಯ ಅಕ್ಕಿ ದಂಧೆಕೋರರ ಜೇಬು ಪಾಲಾಗುತ್ತಿದ್ದು, ಅಕ್ಕಿಯನ್ನು ತಾಲ್ಲೂಕು ಹಳ್ಳಿ ಹಳ್ಳಿಗಳಲ್ಲಿ ಎಗ್ಗಿಲ್ಲದೇ ಅಕ್ರಮವಾಗಿ ಸಂಗ್ರಹಿಸಲಾಗುತ್ತಿದೆ. ಕಾಳಸಂತೆಯಲ್ಲಿ ನಡೆಯುತ್ತಿರುವ ಈ ಮಾಫಿಯಾಗೆ ಕಡಿವಾಣ ಇಲ್ಲದಂತಾಗಿದೆ ಎಂದು ಕರವೇ ಸ್ವಾಭಿಮಾನ ಬಣ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ.ಶ್ರೀನಿವಾಸ್ ತಹಶೀಲ್ದಾರ್ ಮನೀಷಾ ಎನ್ ಪತ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತದನಂತರ ಮಾತನಾಡಿ, ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬಗಳ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಜಾರಿಗೊಳಿಸಿದ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ವಿತರಿಸಲಾಗು ತ್ತಿದೆ. ಪ್ರತಿಯೊಬ್ಬರಿಗೆ ಪ್ರತಿ ತಿಂಗಳು 10 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಇದೇ ಅಕ್ಕಿಯನ್ನು ಅಕ್ರಮ ವಾಗಿ ಸಾಗಿಸಿ, ಕಾಳಸಂತೆಯಲ್ಲಿ ಮಾರುವ ದಂಧೆ ಅವ್ಯಾಹತವಾಗಿ ನಡೆದಿದೆ. ದಂಧೆಕೋರರು ಹಳ್ಳಿ ಹಳ್ಳಿಯಲ್ಲಿ ತಿರುಗಾಡಿ ಅಕ್ಕಿ ಸಂಗ್ರಹಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಹಾಗೂ ಪೊಲೀಸರ ಕಣ್ಣಿಗೆ ಮಾತ್ರ ಇದು ಕಾಣಿಸುತ್ತಿಲ್ಲ.
ಅಕ್ಕಿ ಪಾಲಿಶ್ ಮಾಡಿ ಸಾಗಾಟ
ದಂಧೆಕೋರರು ಅಕ್ಕಿ ಪ್ರತಿ ಕೆ.ಜಿ.ಗೆ 10ರಿಂದ 20 ರೂ.ಗೆ ಸಂಗ್ರಹಿಸಿ ಕ್ವಿಂಟಲ್‌ಗಟ್ಟೆಲೇ ಆದ ಬಳಿಕ ಪಾಲಿಶ್ ಮಾಡಿ ಪ್ರತಿ ಕೆ.ಜಿ.ಗೆ 25ರಿಂದ 30 ರೂ.ಗೆ ಹೊರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ.
ಅಕ್ರಮ ಪಡಿತರ ಅಕ್ಕಿ ಸಂಗ್ರಹ ಮತ್ತು ಮಾರಾಟ ತಡೆಗಟ್ಟುವ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ವತಿಯಿಂದ ತಾಲ್ಲೂಕು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಅಕ್ರಮ ಪಡಿತರ ಅಕ್ಕಿ ಸಂಗ್ರಹ ಹಾಗೂ ಸಾಗಾಟಕ್ಕೆ ಕಡಿವಾಣ ಹಾಕಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಇಲ್ಲವಾದರೇ ಪಟ್ಟಣದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನ ಬಣ ಪದಾಧಿಕಾರಿಗಳಾದ ಜಬೀವುಲಾ, ನಿವೃತ್ತ ಪೋಲಿಸ್ ಅಧಿಕಾರಿಗಳಾದ ಸಾದಪ್ಪ ಇತರರು ಹಾಜರಿದ್ದರು.