ಗೌರಿಬಿದನೂರು: ನಮ್ಮ ಪರಂಪರೆಯ ಜಾನಪದ ಕಲಾ ಪ್ರದರ್ಶನಗಳನ್ನು ಮಕ್ಕಳು ಬದ್ಧತೆ ಯಿಂದ ಕಲಿತಾಗ ಅವರ ಜಾನಪದ ಬದುಕು ಹಸನಾಗುತ್ತದೆ,ಅಲ್ಲದೆ ನಮ್ಮ ತಲೆಮಾರುಗಳ ಜನ ಸಂಸ್ಕೃತಿಯನ್ನು ಗಟ್ಟಿಗೊಳಿಸಲು ಅಣಿಯಾಗುತ್ತದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ತಿಳಿಸಿದರು.
ತಾಲೂಕಿನ ಹೊಸೂರು ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶೇಷ ಘಟಕ ಯೋಜನೆಯಡಿ, ಹಾಸ್ಟೆಲ್ ವಿದ್ಯಾರ್ಥಿಗಳಿಗಾಗಿ ೬ ತಿಂಗಳ ಜಾನಪದ ಕಂಸಾಳೆ ಮತ್ತು ಪಟಾಕುಣಿತ ತರಬೇತಿ ಶಿಬಿರದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Chikkaballapur News: ಕೈವಾರ ತಾತಯ್ಯ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗ ಮಂಜೂರು ಮಾಡಲು ಮನವಿ
ಕಂಸಾಳೆ ಕಲಾ ಪ್ರಕಾರವು ಹೆಚ್ಚಾಗಿ ಮೈಸೂರು, ನಂಜನಗೂಡು, ಕೊಳ್ಳೇಗಾಲ, ಚಾಮರಾಜನಗರ ಭಾಗದಲ್ಲಿ ನೆಲಮೂಲದ ಜನರ ಮಲೆ ಮಹದೇಶ್ವರ ಆರಾಧನೆಗಾಗಿ ಹೆಚ್ಚಾಗಿ ನುಡಿಸುತ್ತಾರೆ. ಇಂತಹ ಮೂಲ ಜಾನಪದ ಪ್ರಕಾರಗಳು,ಜಾನಪದ ಕಲೆಗಳು ಮನುಷ್ಯನಷ್ಟೇ ಪ್ರಾಚೀನವಾದವು, ಇಂತಹ ಕಲೆಗಳಾದ ತಮಟೆ, ಕಹಳೆ, ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ, ಕೋಲಾಟ, ಪೂಜಾ ಕುಣಿತ, ಸುಗ್ಗಿ ಕುಣಿತ ಮುಂತಾದವು ನಮ್ಮ ಬದುಕಿನ ಭಾಗವಾಗಬೇಕಿದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಮಾತನಾಡಿ, ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನಜೀವನ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಕಲಾಪ್ರಕಾರಗಳನ್ನು ನಮ್ಮ ಇಲಾಖೆ ವಿದ್ಯಾರ್ಥಿಗಳ ಮುಖೇನ ಹೊಸ ತಲೆಮಾರಿನೊಂದಿಗೆ ನಮ್ಮ ಪರಂಪರೆಯನ್ನು ಗಟ್ಟಿಗೊಳಿಸಲು ಸಚ್ಚಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕೆ.ವಿ. ನಾಯಕ್, ತರಬೇತುದಾರ ಪ್ರತಾಪ್, ಇಡಗೂರಿನ ಪ್ರಸನ್ನ,ಹಿರಿಯ ಕಲಾವಿದ ನಾರಾಯಣಪ್ಪ, ನಿಲಯದ ಸಹಾಯಕ ಬಾಬಾ ಜಾನ್ ಹಾಗೂ ಇನ್ನಿತರರು ಭಾಗವಹಿಸಿದರು.