ಗೌರಿಬಿದನೂರು: ಇಡೀ ಜಗತ್ತಿಗೆ ಜ್ಞಾನದ ಜ್ಯೋತಿಯನ್ನು ಬೆಳಗಿಸಿದ ವ್ಯಕ್ತಿ ಮಹರ್ಷಿ ವಾಲ್ಮೀಕಿ ಎಂದು ಶಾಸಕ ಕೆಎಚ್ ಪುಟ್ಟಸ್ವಾಮಿಗೌಡರು ಹೇಳಿದರು.
ನಗರದಲ್ಲಿ ತಾಲೂಕು ಆಡಳಿತ ,ತಾಲೂಕು ಪಂಚಾಯತಿ, ನಗರಸಭೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾ ರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ವಾಲ್ಮೀಕಿ ಮಹರ್ಷಿಗಳು ರಚಿಸಿರುವ ರಾಮಾಯಣ ಮಹಾಕಾವ್ಯ ಇಡೀ ಜಗತ್ತಿನ ಮೊದಲ ಕಾವ್ಯವಾಗಿದ್ದು, ಅದರಲ್ಲಿ ಸೋದರತ್ವ ,ಪಿತೃ ವಾಕ್ಯ ಪಾಲನೆ, ಪ್ರಜಾ ಪರಿ ಪಾಲನೆ ಮುಂತಾದ ನೀತಿ ಪಾಠಗಳಿವೆ. ಅವುಗಳನ್ನು ಎಲ್ಲರೂ ಪಾಲಿಸಬೇಕೆಂದು ತಿಳಿಸಿದ ಅವರು ಕ್ಷೇತ್ರದಲ್ಲಿ ಅತಿ ದೊಡ್ಡ ಸಮುದಾಯವಾಗಿರುವ ನಾಯಕ ಸಮುದಾಯ ನಂಬಿಕೆ ಮತ್ತು ವಿಶ್ವಾಸಕ್ಕೆ ಪಾತ್ರ ವಾಗಿದ್ದಾರೆ. ನಾಯಕ ಸಮುದಾಯದ ಒಳಿತಿಗಾಗಿ ಡಿ.ಪಾಳ್ಯ ಹಾಗೂ ಹೊಸೂರು ಗ್ರಾಮಗಳಲ್ಲಿ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಸಮುದಾಯ ಭವನವನ್ನು ನಿರ್ಮಿಸಿ ಕೊಡಲಾಗಿದೆ. ಮುಂದೆಯೂ ಕೂಡ ನಿಮಗೆ ಅಗತ್ಯವಿರುವ ಕೆಲಸ ಕಾರ್ಯಗಳನ್ನು ಮಾಡಿಕೊಡುವುದಾಗಿ ತಿಳಿಸಿದರು.
ಇದನ್ನೂ ಓದಿ: MLA K H PuttaswamyGowda: ವಿದ್ಯಾರ್ಥಿಗಳು ವಿದ್ಯೆಯ ಜೊತೆ ಸಂಸ್ಕಾರವನ್ನೂ ಕಲಿಯಬೇಕು
ಮುಖಂಡ ಆರ್ ಅಶೋಕ್ ಕುಮಾರ್ ಮಾತನಾಡಿ ಕ್ಷೇತ್ರದ ಶಾಸಕರಾದ ಪುಟ್ಟಸ್ವಾಮಿಗೌಡರು ನಾಯಕ ಸಮುದಾಯದ ಮೇಲೆ ವಿಶೇಷ ಗೌರವ ಹಾಗೂ ಅಭಿಮಾನವನ್ನು ಹೊಂದಿದ್ದಾರೆ.ಅವರು ತಮ್ಮ ಸ್ವಂತ ಹಣದಲ್ಲಿ ಡಿ.ಪಾಳ್ಯ ಹಾಗೂ ಹೊಸೂರು ಗ್ರಾಮದಲ್ಲಿ ವಾಲ್ಮೀಕಿ ಭವನವನ್ನು ನಿರ್ಮಿಸಿ ಕೊಟ್ಟಿದ್ದಾರೆ ಎಂದರು.
ಪ್ರೊ ಗೋಮತಿದೇವಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣ ಮಹಾಕಾವ್ಯವು ಒಟ್ಟು ಏಳು ಕಾಂಡಗಳಲ್ಲಿ ರಚಿಸಿದ್ದು ,ಅದರಲ್ಲಿ ಒಟ್ಟು ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳ ಮುಖಾಂತರ ರಾಮಾಯಣ ಮಹಾ ಕಾವ್ಯವನ್ನು ರಚಿಸಲಾಗಿದೆ ಎಂದರು.
ಸಮಾರಂಭದಲ್ಲಿ ಮಾಜಿ ಶಾಸಕಿ ಎನ್ ಜ್ಯೋತಿರೆಡ್ಡಿ, ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣ್, ತಹಶಿಲ್ದಾರ್ ಅರವಿಂದ್, ತಾ.ಪಂ ಇಓ ಜಿಕೆ ಹೊನ್ನಯ್ಯ ,ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ನರಸಿಂಹಯ್ಯ, ನಗರಸಭೆ ಪೌರಾಯುಕ್ತ ರಮೇಶ್, ತಾಲೂಕು ನಾಯಕರ ಸಂಘದ ಅಧ್ಯಕ್ಷ ಬಾಬಣ್ಣ, ಹಿಂದುಳಿದ ವರ್ಗಗಳ ಮುಖಂಡ ಆರ್ ಅಶೋಕ್ ಕುಮಾರ್, ಜಿ.ಪಂ ಮಾಜಿ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ತಾ.ಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮಮ್ಮ, ಮುದುಗೆರೆ ನಾಗರಾಜಪ್ಪ, ನಾಯಕ ಸಮುದಾಯದ ಯುವ ಮುಖಂಡ ವಿಕ್ರಂಕುಮಾರ್, ಐಟಿಐ ಲೋಕೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ನಾಯಕ ಸಮುದಾಯದ ಮುಖಂಡರುಗಳು, ನಗರಸಭೆ ಸದಸ್ಯರು, ಗಾ.ಪಂ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.