ಬಾಗೇಪಲ್ಲಿ: ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ತಾಲ್ಲೂಕಿನಾದ್ಯಂತ ಮಂಗಳವಾರ ಮಹಿಳೆಯರು ಮಕ್ಕಳು ದಂಪತಿಗಳು ಸಂಭ್ರಮದಿಂದ ಆಚರಿಸಲಾಯಿತು.
ದೇವಸ್ಥಾನ, ಅರಳಿಕಟ್ಟೆ, ಬನ್ನಿಮರ, ನಾಗರಕಟ್ಟೆಯಲ್ಲಿ ಪ್ರತಿಷ್ಠಾಪಿಸಿರುವ ನಾಗದೇವತೆಗೆ ಹಾಲು ಎರೆದು ಭಕ್ತಿಭಾವ ಸಮರ್ಪಿಸಿದರು.
ಪಟ್ಟಣದ ನ್ಯಾಷನಲ್ ಕಾಲೇಜು ಮುಂಭಾಗ ಹುತ್ತಕ್ಕೆ ಭಕ್ತರು ಪ್ರದಕ್ಷಿಣೆ ಹಾಕಿ ಹಾಲು ಮತ್ತು ಎಳನೀರು ಎರೆದು ಪೂಜೆ ಸಲ್ಲಿಸಿದರು. ಮನೆಯಲ್ಲಿಯೇ ಸಿದ್ಧಪಡಿಸಿದ ತಂಬಿಟ್ಟಿನ ಉಂಡಿ, ಕಡಲೆ ಉಂಡಿ, ಶೇಂಗಾ ಉಂಡಿ, ಅಂಟ ಉಂಡಿ, ಎಳ್ಳು ಉಂಡಿ,ಬೆಲ್ಲ ನೆನೆಸಿದ ಅಕ್ಕಿ ಮೊದಲಾದ ಖಾದ್ಯ ಗಳನ್ನು ತಯಾರಿಸಿ ನೈವೇದ್ಯ ಮಾಡಿ ದೇವರಿಗೆ ಸಮರ್ಪಿಸಿ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಹುತ್ತಕ್ಕೆ ಕಲ್ಲಿನ ನಾಗಪ್ಪನಿಗೆ ಹಾಲೆರೆಯುವ ಮೂಲಕ ನಾಗರ ಪಂಚಮಿ ಹಬ್ಬ ಆಚರಿಸಿದರು.
ಇದನ್ನೂ ಓದಿ: Chikkaballapur News: ಪರಿಶ್ರಮ ಮತ್ತು ತಾಳ್ಮೆಯಿಂದ ಮಾತ್ರ ಯಶಸ್ಸು: ಪೆರೆಸಂದ್ರ ಎಂ.ವೆಂಕಟೇಶ್
ತಾಲ್ಲೂಕಿನ ಬಹುತೇಕ ಮನೆಗಳಲ್ಲಿ ಮಣ್ಣಿನ ಇಲ್ಲವೇ ಬೆಳ್ಳಿ- ಬಂಗಾರದ ನಾಗ ಮೂರ್ತಿ ಇಟ್ಟು ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿ ಹಾಲೆರೆದರು.
ಮಹತ್ವ: ನಾಗರ ಪಂಚಮಿ ಹಬ್ಬದಲ್ಲಿ ಸರ್ಪಕ್ಕೆ ಪೂಜೆ. ಸರ್ಪ ದೇವರನ್ನು ಮನೆಯ ರಕ್ಷಕ ಎಂದೂ ಸಹ ಪರಿಗಣಿಸಲಾಗುತ್ತದೆ. ಹೀಗಾಗಿ ನಾಗನನ್ನು ಪೂಜಿಸಿದರೆ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ತುಂಬುತ್ತದೆ. ಸಿಯಾಳ, ಹಾಲು, ಸಕ್ಕರೆಗಳಿಂದ ಅಭಿಷೇಕ ಮಾಡಿ ಅರಿಶಿನ, ಸಿಂಗಾರ, ಮಲ್ಲಿಗೆ, ವಿವಿಧ ಹೂವುಗಳಿಂದ ಅಲಂಕರಿಸಿ, ಮಂಗಳಾರತಿ ಬೆಳಗಿ ಭಕ್ತಾಧಿಗಳಿಗೆ ಪ್ರಸಾದ ನೀಡುವುದು ಪದ್ಧತಿ.